ಸೆ. 23ರಂದು ಸಿದ್ದರಾಮಯ್ಯ ಭ್ರಷ್ಟಾಚಾರ ಬಯಲು ಮಾಡುವೆ: ಬಿಎಸ್ ವೈ
ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರ ಬಯಲಿಗೆಳೆಯುವೆ ಎಂದ ಬಿಎಸ್ ವೈ. ಸೆ. 23ರಂದು ದಾಖಲೆ ಸಮೇತ ಹಗರಣ ಬಯಲಿಗೆಳೆಯುವೆ ಎಂದ ಮಾಜಿ ಮುಖ್ಯಮಂತ್ರಿ.
ಬೆಂಗಳೂರು, ಸೆಪ್ಟೆಂಬರ್ 15: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಸಗಿರುವ ಭ್ರಷ್ಟಾಚಾರವನ್ನು ಇದೇ ತಿಂಗಳ 23ರಂದು ದಾಖಲೆ ಸಮೇತ ಬಹಿರಂಗಗೊಳಿಸುತ್ತೇನೆಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ.
ವಿಧಾನಸೌಧ, ವಿಕಾಸ ಸೌಧ ನಡುವಿನ ಗಾಂಧಿ ಪ್ರತಿಮೆಯ ಬಳಿ ತಮ್ಮ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಸತ್ಯಾಗ್ರಹಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಹೀಗೆ ಘೋಷಿಸಿದರು.

2013ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ ಸರ್ಕಾರದಿಂದ ಯಾವುದೇ ಭ್ರಷ್ಟಾಚಾರವಾಗಿಲ್ಲ ಎಂದು ಹೇಳಿರುವ ಸಿದ್ದರಾಮಯ್ಯ ಬರೀ ಸುಳ್ಳನ್ನೇ ನಿಜವೆಂದು ನಂಬಿಸುವ ಪ್ರಯತ್ನ ಮಾಡಿದ್ದಾರೆ. ಇವರು ನಡೆಸಿರುವ ಹಗಲು ದರೋಡೆಗಳು ಗೊತ್ತಿದೆ. ಅದೆಲ್ಲವನ್ನೂ ಸದ್ಯದಲ್ಲೇ ಬಯಲು ಮಾಡುತ್ತೇನೆ ಎಂದು ಅವರು ತಿಳಿಸಿದರು.
ಪುಕ್ಕಟೆ ಪ್ರಚಾರವಲ್ಲ: ಸಿದ್ದರಾಮಯ್ಯ ಅವರ ಸರ್ಕಾರದ ಭ್ರಷ್ಟಾಚಾರ ಬಯಲು ಮಾಡುವೆನೆಂದು ಹೇಳುವ ಮೂಲಕ ನಾನು ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸರ್ಕಾರದ ಎಲ್ಲಾ ಅವ್ಯವಹಾರಗಳ ದಾಖಲೆ ನನ್ನ ಬಳಿ ಇವೆ. ಅವನ್ನು ಬಿಡುಗಡೆ ಮಾಡುವ ಮೂಲಕ ಸರ್ಕಾರದ ನಿಜ ಬಣ್ಣ ಬಯಲು ಮಾಡುತ್ತೇನೆ ಎಂದು ಅವರು ತಿಳಿಸಿದರು.












Click it and Unblock the Notifications