ಶಿಕ್ಷಣದಿಂದ ಮೌಡ್ಯತೆ ಹೋಗುವುದೆಂಬ ಮಾತು ಸುಳ್ಳಾಗಿದೆ: ಚಾಮರಾಜನಗರಕ್ಕೆ ಹೋಗಿಯೇ 2ನೇ ಬಾರಿ ಸಿಎಂ ಆದೆ
ಬೆಂಗಳೂರು, ಜಲೈ 02: ಚಾಮರಾಜನಗರಕ್ಕೆ ಹೋದರೆ ಸಿಎಂ ಕುರ್ಚಿ ಹೋಗುತ್ತದೆ ಎನ್ನುವ ಮೌಡ್ಯವನ್ನು ವಿದ್ಯಾವಂತರೇ ಹೆಚ್ಚು ನಂಬುತ್ತಾರೆ. ಬಸವಣ್ಣನವರು 12ನೇ ಶತಮಾನದಲ್ಲೇ ಇಂಥಹ ಮೌಡ್ಯ ಮತ್ತು ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ್ದರು. ಜಾಗೃತಿ ಮೂಡಿಸಿದ್ದರು. ಶಿಕ್ಷಣ ದೊರೆತರೆ ಜಾತಿ, ಮೌಡ್ಯತ ಹೋಗುತ್ತದೆ ಎನ್ನುವ ಮಾತು ಸುಳ್ಳಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಡಾ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಆಯೋಜಿಸಿದ್ದ "ನೀನಲ್ಲದೆ ಮತ್ತಾರೂ ಇಲ್ಲವಯ್ಯಾ" ದೇಶದ ಪ್ರಥಮ ವಚನ ಸಾಂಸ್ಕೃತಿಕ ಅಭಿಯಾನವನ್ನು ಉದ್ಘಾಟಿಸಿ ಸಿದ್ದರಾಮಯ್ಯನವರು ಮಾತನಾಡಿದರು.

ನಾನು 12 ಬಾರಿ ಚಾಮರಾಜನಗರಕ್ಕೆ ಹೋಗಿ ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದೇನೆ. ಚಾಮರಾಜನಗರಕ್ಕೆ ಹೋದರೆ ಸಿಎಂ ಆಗುವುದಿಲ್ಲ ಎಂದು ಹೇಳಲಾಗಿತ್ತು. ಈ ಮಾತನ್ನು ಹೆಚ್ಚು ವಿದ್ಯಾವಂತರೇ ನಂಬುತ್ತಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
12ನೇ ಶತಮಾನದಲ್ಲಿ ಜಾತಿ, ಮೌಢ್ಯತೆ ಬಗ್ಗೆ ಜಾಗೃತಿ ಮೂಡಿಸಿ ಶರಣ ಬಸವಣ್ಣನವರು ಕನಸಿನ ಸಮಾಜ ನಿರ್ಮಾಣ ಆಗಬೇಕು. ಕಾಯಕ ಮತ್ತು ದಾಸೋಹ ಮೌಲ್ಯಗಳು ಹೆಚ್ಚಬೇಕು. ಕಾಯಕ ಅಂದರೆ ಉತ್ಪಾದನೆ, ದಾಸೋಹ ಅಂದರೆ ವಿತರಣೆ. ಹೀಗೆ ಸಮಾಜದ ಉತ್ಪಾದನೆ, ಸಮಾಜದ ಎಲ್ಲರಿಗೂ ವಿತರಣೆ ಆಗಬೇಕು ಎನ್ನುವುದು ಬಸವಣ್ಣನವರ ಆಶಯವಾಗಿತ್ತು ಎಂದು ಅವರು ವಿವರಿಸಿದರು.
ಸಮಾನ ಸ್ಥಾನಮಾನ ಕನಸು ಸರ್ಕಾರದ್ದು ಹೌದು
ಬಸವಾದಿ ಶರಣರ ಅನುಭವ ಮಂಟಪ ರಚಿಸಿದ್ದೇ ಈ ಕಾರಣಕ್ಕೆ. ಎಲ್ಲಾ ಜಾತಿ ವರ್ಗಗಳಿಗೂ ಸಮಾನವಾದ ಅವಕಾಶ ಮತ್ತು ಸ್ಥಾನಮಾನ ಕಲ್ಪಿಸುವ ಆಶಯ ಆಗಿನ ಪಾರ್ಲಿಮೆಂಟ್ ಆಗಿದ್ದ ಅನುಭವ ಮಂಟಪಕ್ಕೆ ಇತ್ತು. ಇದೇ ಆಶಯ ನಮ್ಮ ಸರ್ಕಾರದ್ದೂ ಆಗಿದೆ ಎಂದರು.
ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಕೈಗಾರಿಕಾ ಸಚಿವ ಎಂಬಿ ಪಾಟೀಲ್, ಮಾಜಿ ಶಾಸಕರಾದ ಶಾಮನೂರು ಶಿವಶಂಕರಪ್ಪ, ಶಾಸಕರಾದ ಶ್ರೀನಿವಾಸ್, ಮಾಜಿ ಸಚಿವ ಪಿಜಿಆರ್.ಸಿಂಧ್ಯ, ಕೊಂಡಜ್ಜಿ ಮೋಹನ್ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಾತಿಮುಕ್ತ ಸಮಾಜ ನಿರ್ಮಾಣ ಆಗಬೇಕು ಎನ್ನುವ ಬಸವಣ್ಣನವರ ಆಶಯ ಇನ್ನೂ ಈಡೇರಿಲ್ಲ. ವಿದ್ಯಾವಂತರಲ್ಲೇ ಜಾತಿ ತಾರತಮ್ಯ ಹೆಚ್ಚುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಷಾದ ವ್ಯಕ್ತಪಡಿಸಿದರು.

ಚಾಮರಾಜನಗರಕ್ಕೆ ಭೇಟಿಯಿಂದ ಅಧಿಕಾರ ಕಳೆದುಕೊಳ್ಳುತ್ತಾರೆ?
ಚಾಮರಾಜನಗರ ಜಿಲ್ಲೆಗೆ ಕೊಟ್ಟವರು ಅಧಿಕಾರದಲ್ಲಿದ್ದವರು ಅಧಿಕಾರ ಕಳೆದುಕೊಳ್ಳುತ್ತಾರೆ. ಸಿಎಂ ಸ್ಥಾನ ಏರಬಯಸುವವರಿಗೆ ಈ ಜಿಲ್ಲೆಗೆ ತೆರಳಿದರೆ ಅಂದುಕೊಂಡಂತೆ ಆಗುವುದಿಲ್ಲ ಎಂಬ ಮಾತು ರಾಜ್ಯ ರಾಜಕೀಯದಲ್ಲಿ ಜನಜನಿತವಾಗಿದೆ. ಇದಕ್ಕೆ ವಿರುದ್ಧ ಎಂಬಂತೆ ಸಿದ್ದರಾಮಯ್ಯ ಅವರು ಇದುವರೆಗೆ ಒಟ್ಟು 12 ಸಾರಿ ಚಾಮರಾಜನಗರಕ್ಕೆ ತೆರಳಿದ ನಾನು ಎರಡನೇ ಭಾರಿ ಸಿಎಂ ಆದೆ ಎಂದು ಹೇಳುವ ಮೂಲಕ ಮೌಡ್ಯತೆ ನಂಬದಂತೆ ಜಾಗೃತಿ ಮೂಡಿಸಿದ್ದಾರೆ.
2018ರಲ್ಲಿ ಸಿದ್ದರಾಮಯ್ಯನವರು ಒಟ್ಟು 10ನೇ ಬಾರಿ ಚಾಮರಾಜನಗರಕ್ಕೆ ಸಿದ್ದರಾಮಯ್ಯ ಭೇಟಿ ಕೊಟ್ಟಿದ್ದರು. ಅವರು ಭೇಟಿ ಜಿಲ್ಲೆಗೆ ತಟ್ಟಿದ್ದ ಶಾಪ ವಿಮೋಚನೆಗಾಗಿಯೇ? ಚಾಮರಾಜನಗರಕ್ಕೆ ಭೇಟಿ ಕೊಟ್ಟ ಮುಖ್ಯಮಂತ್ರಿಗಳು, ಉನ್ನತ ಅಧಿಕಾರಿಗಳು ಆರು ತಿಂಗಳಿನಲ್ಲಿ ಅಧಿಕಾರ ಕಳೆದುಕೊಳ್ಳುತ್ತಾರೆನ್ನುವ ನಂಬಿಕೆ, ಮಾತುಗಳು ಕೇಳಿ ಬರಲಾರಂಭಿಸಿತ್ತು.
ಜೆಎಚ್ ಪಟೇಲ್‌ರ ಕಾಲದಲ್ಲಿ ಆಗಿದ್ದೇನು?
ಸಮಾಜವಾದಿ ತತ್ವಪಾಲಕರಾಗಿದ್ದ ಜೆಎಚ್. ಪಟೇಲ್ ಆದಿಯಾಗಿ ಬಹುತೇಕ ಮುಖ್ಯಮಂತ್ರಿಗಳು ಚಾಮರಾಜನಗರ ಪಟ್ಟಣಕ್ಕೆ ಭೇಟಿ ನೀಡುವುದನ್ನು ತಪ್ಪಿಸಿದ್ದದ್ದು ಇದೇ ನಂಬಿಕೆ ಮತ್ತು ಅಧಿಕಾರ ಕಳೆದುಕೊಳ್ಳುವ ಕಾರಣಕ್ಕಾಗಿಯೇ ಎನ್ನಲಾಗಿದೆ. ಮಾಜಿ ಮುಖ್ಯಮಂತ್ರಿ ಜೆಎಚ್ ಪಟೇಲ್ ಚಾಮರಾಜನಗರ ಜಿಲ್ಲೆ ರಚಿಸಿದಾಗಲೂ ಸಹ ಕೊಳ್ಳೆಗಾಲದ ಮಲೆ ಮಾದೇಶ್ವರ ಬೆಟ್ಟದಿಂದಲೇ ಜಿಲ್ಲೆಯ ಉದ್ಘಾಟನೆ ನೆರವೇರಿಸಿದ್ದರು. ಆದರೆ ಅವರು ಚಾಮರಾಜನಗರಕ್ಕೆ ಭೇಟಿ ನೀಡಲಿಲ್ಲ.
ಇನ್ನು ಜೆಡಿಎಸ್‌ನ ಎಚ್‌ಡಿ ಕುಮಾರಸ್ವಾಮಿ ಅವರು ತಮ್ಮ ಅಧಿಕಾರಾವಧಿಯ ಕಡೆ ದಿನಗಳಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು. ಕಾಕತಾಳೀಯ ಎನ್ನುವಂತೆ ಅವರು ಮತ್ತೆ ಅಧಿಕಾರದಲ್ಲಿ ಮುಂದುವರಿಯಲಿಲ್ಲ. ಇದೆಲ್ಲ ಕಾರಣಗಳಿಂದ ಚಾಮರಾಜನಗರ ಭೇಟಿ ವಿಚಾರ ಆಗಾಗ ಮುನ್ನೆಲೆಗೆ ಬರುತ್ತಿದೆ.












Click it and Unblock the Notifications