ಮೈತ್ರಿ ಸರ್ಕಾರ ಮಾಡಲು ನಾನು ಹೇಳಿರಲಿಲ್ಲ: ದೇವೇಗೌಡ ಅಸಮಾಧಾನ
Recommended Video
ಬೆಂಗಳೂರು, ಜೂನ್ 20: ಮೈತ್ರಿಯಿಂದ ಕಾಂಗ್ರೆಸ್‌ಗೆ ನಷ್ಟ ಎಂದು ಕೆಲವು ಕೈ ನಾಯಕರು ಹೈಕಮಾಂಡ್ ಬಳಿ ದೂರು ನೀಡಿದ್ದರ ಬಗ್ಗೆ ಮಾತನಾಡಿದ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರು, ನನಗೆ ಅದರ ಬಗ್ಗೆ ಚಿಂತೆ ಇಲ್ಲ, ಏಕೆಂದರೆ ಮೈತ್ರಿ ಮಾಡಿಕೊಳ್ಳಿ ಎಂದು ನಾನು ಹೋಗಿರಲಿಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಹಠಾತ್ತಾಗಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂದು ದೇವೇಗೌಡ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರು ಗುಲಾಂ ನಬಿ ಆಜಾದ್ ಅವರನ್ನು ಕಳುಹಿಸಿಕೊಟ್ಟರು, ನಂತರ ಸಿದ್ದರಾಮಯ್ಯ, ಖರ್ಗೆ, ಪರಮೇಶ್ವರ್, ಕೆ.ಎಚ್.ಮುನಿಯಪ್ಪ ಮೈತ್ರಿ ಸರ್ಕಾರ ಮಾಡೋಣ ಎಂದು ಹೇಳಿದರು. ಖರ್ಗೆ ಸಿಎಂ ಆಗಲಿ ಎಂದೇ ನಾನು ಹೇಳಿದ್ದೆ, ಆದರೆ ಅವರೇ ಕುಮಾರಸ್ವಾಮಿ ಅವರನ್ನು ಸಿಎಂ ಮಾಡೋಣ ಎಂದಿದ್ದರು ಎಂದು ದೇವೇಗೌಡ ಹೇಳಿದರು.
ಮೈತ್ರಿ ಸರ್ಕಾರಕ್ಕೆ ನನ್ನಿಂದ ಯಾವುದೇ ಆತಂಕ ಇಲ್ಲ, ನಾನು ರಾಹುಲ್ ಗಾಂಧಿಗೆ ದೂರು ನೀಡಿದ್ದೇನೆ ಎನ್ನುವುದು ಅಪ್ಪಟ ಸುಳ್ಳು ಎಂದು ದೇವೇಗೌಡ ಅವರು ಹೇಳಿದರು.

ದೂರು ನೀಡಿರುವ ಬಗ್ಗೆ ಮಾಹಿತಿ ಇಲ್ಲ: ದೇವೇಗೌಡ
ಕೆಲವು ನಾಯಕರು ಮೈತ್ರಿ ಸರ್ಕಾರದ ಬಗ್ಗೆ ಹೈಕಮಾಂಡ್‌ಗೆ ದೂರು ನೀಡಿದ್ದಾರೆ ಎಂದು ಮಾಧ್ಯಮಗಳಿಂದಷ್ಟೆ ನನಗೆ ಗೊತ್ತಾಗಿದೆ. ವೈಯಕ್ತಿಕ ಮಾಹಿತಿ ಇಲ್ಲ, ಹಾಗೇನಾದರೂ ಆಗಿದ್ದರೆ ಆ ಬಗ್ಗೆ ನಾನೇನೂ ಪ್ರತಿಕ್ರಿಯೆ ನೀಡಲಾರೆ, ಸರ್ಕಾರ ರಚಿಸುವುದು ಕಾಂಗ್ರೆಸ್‌ಗೆ ಬೇಕಾಗಿತ್ತು, ನಾವು ಅವರ ಬಳಿ ಹೋಗಿರಲಿಲ್ಲ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು.

ನನ್ನ ಹೇಳಿಕೆ ತಪ್ಪಾಗಿ ವರದಿ ಆಗಿದೆ: ದೇವೇಗೌಡ
ಮಧ್ಯಂತರ ಚುನಾವಣೆಗೆ ತಯಾರಾಗಿ ಎಂದು ನೀಡಿದ್ದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಹೇಳಿದ್ದು ಪುರಸಭೆ, ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳ ಬಗ್ಗೆ ಸರ್ಕಾರದ ಬಗ್ಗೆ ನನಗೆ ಯಾವ ದೂರುಗಳೂ ಇಲ್ಲ ಎಂದು ಅವರು ಹೇಳಿದರು.

'ಸಿದ್ದರಾಮಯ್ಯ ಸಲಹೆ ಮೇರೆಗೆ ಸಚಿವ ಸ್ಥಾನ ಕೊಟ್ಟಿದ್ದೇವೆ'
ಸಿದ್ದರಾಮಯ್ಯ ಅವರ ಸಲಹೆಯಂತೆ ನಮ್ಮ ಒಂದು ಸಚಿವ ಸ್ಥಾನವನ್ನು ಪಕ್ಷೇತರ ಶಾಸಕರಿಗೆ ಬಿಟ್ಟುಕೊಟ್ಟಿದ್ದೇವೆ. ಒಂದು ನಿಗಮ ಮಂಡಳಿ ಸ್ಥಾನವನ್ನೂ ಬಿಟ್ಟುಕೊಟ್ಟಿದ್ದೇವೆ ಎಂದು ದೇವೇಗೌಡ ಅವರು ಹೇಳಿದರು.

'ಮುಸ್ಲೀಮರಿಗೆ ಹೆಚ್ಚು ಅವಕಾಶ ಕೊಟ್ಟಿರುವುದು ನಾವೇ'
ಮುಸ್ಲೀಮರಿಗೆ ಜೆಡಿಎಸ್‌ನಿಂದ ಅವಕಾಶ ನೀಡಿಲ್ಲ ಎಂಬ ಬಗ್ಗೆ ಮಾತನಾಡಿದ ದೇವೇಗೌಡ ಅವರು, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅತಿ ಹೆಚ್ಚು ಮುಸ್ಲಿಂರಿಗೆ ಅವಕಾಶ ನೀಡಿದ್ದು ಮತ್ತು ಗೆದ್ದು ಬಂದದ್ದು ನಮ್ಮ ಪಕ್ಷದಿಂದಲೇ ಎಂದು ಅವರು ಹೇಳಿದರು.

ವಿಶ್ವನಾಥ್ ಮನವೊಲಿಕೆ ಮುಂದುವರೆದಿದೆ: ದೇವೇಗೌಡ
ವಿಶ್ವನಾಥ್ ಅವರ ರಾಜೀನಾಮೆ ವಿಚಾರವಾಗಿ ಮಾತನಾಡಿದ ದೇವೇಗೌಡ ಅವರು, ವಿಶ್ವನಾಥ್ ಅವರ ಮನವೊಲಿಸುವ ಪ್ರಯತ್ನಗಳು ನಡೆಯುತ್ತಿವೆ ಇಂದು ಹಿಂದುಳಿದ ವರ್ಗಗಗಳ ಮುಖಂಡರ ಸಭೆ ಕರೆಯಲಾಗಿದೆ, ಸಭೆಯ ನಂತರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಚುನಾವಣೆಯಲ್ಲಿ ಸೋತವರ ಸಭೆ ಕರೆದಿದ್ದೇವೆ: ದೇವೇಗೌಡ
ಚುನಾವಣೆಯಲ್ಲಿ ಸೋತವರ ಸಭೆಯನ್ನೂ ಕರೆದಿದ್ದು, ಅವರಿಗೆ ಉತ್ಸಾವ ತುಂಬುವ ಕಾರ್ಯ ಮಾಡಲಾಗುತ್ತದೆ, ಶುಕ್ರವಾರ ಸಮಾವೇಶವನ್ನು ಹಮ್ಮಿಕೊಂಡಿದ್ದು, ಪಕ್ಷವನ್ನು ಮತ್ತೆ ಬಲಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ ಎಂದು ದೇವೇಗೌಡ ಅವರು ಹೇಳಿದರು.












Click it and Unblock the Notifications