ವೇದಿಕೆ ಮೇಲೆ ಸಿಟ್ಟು ಪ್ರದರ್ಶನ: ಕ್ಷಮೆ ಕೋರಿದ ಯಡಿಯೂರಪ್ಪ
ಬೆಂಗಳೂರು, ಜನವರಿ 17: ವೇದಿಕೆ ಮೇಲೆ ವಚನಾನಂದ ಸ್ವಾಮಿಗಳ ಮಾತಿಗೆ ಬೇಸರ ವ್ಯಕ್ತಪಡಿಸಿದ್ದಕ್ಕೆ ಸಿಎಂ ಯಡಿಯೂರಪ್ಪ ಕ್ಷಮೆ ಯಾಚಿಸಿದ್ದಾರೆ.
ಹರಿಹರದ ಹರ ಜಾತ್ರೆ ಕಾರ್ಯಕ್ರಮದಲ್ಲಿ ವಚನಾನಂದ ಸ್ವಾಮೀಜಿಗಳ ಮಾತಿಗೆ ವೇದಿಕೆ ಮೇಲೆ ಯಡಿಯೂರಪ್ಪ ಸಿಟ್ಟಾಗಿದ್ದರು. ವಚನಾನಂದ ಅವರ ಜೊತೆ ವಾಗ್ವಾದ ಮಾಡಿದ್ದರು. ವಚನಾನಂದ ಸ್ವಾಮೀಜಿ ಆಡಿದ ಮಾತು, ಯಡಿಯೂರಪ್ಪ ವರ್ತನೆ ಎರಡೂ ವಿವಾದ ಉಂಟು ಮಾಡಿದ್ದವು.
ಹರಿಹರದಲ್ಲಿ ನಡೆದ ಘಟನೆಗೆ ಕ್ಷಮೆ ಕೋರಿರುವ ಸಿಎಂ ಯಡಿಯೂರಪ್ಪ, 'ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ' ಎಂದಿದ್ದಾರೆ.

'ವಿವಿಧ ಸಮಾಜಗಳ ಒತ್ತಡ ವಚನಾನಂದ ಸ್ವಾಮೀಜಿ ಅವರ ಮೇಲೆ ಇತ್ತು, ಹಾಗಾಗಿ ಅವರು ಹಾಗೆ ಮಾತನಾಡಿರಬಹುದು, ಅದರ ಬಗ್ಗೆ ಹೆಚ್ಚಿನ ಚರ್ಚೆ ಅನಗತ್ಯ' ಎಂದು ಪ್ರಕರಣಕ್ಕೆ ಪೂರ್ಣ ವಿರಾಮ ಪ್ರಯತ್ನ ಯಡಿಯೂರಪ್ಪ ಮಾಡಿದ್ದಾರೆ.
'ಮುಖ್ಯಮಂತ್ರಿಯಾಗಿ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲಿದೆ. ಎಲ್ಲಾ ಸ್ವಾಮೀಜಿಗಳು ನನ್ನ ಮೇಲೆ ಪ್ರೀತಿ, ವಿಶ್ವಾಸವಿಟ್ಟಿದ್ದಾರೆ' ಎಂದಿದ್ದಾರೆ.
'ನನ್ನ ಮೇಲಿನ ಪ್ರೀತಿ, ಸಲುಗೆ ಇಂದಲೇ ಸ್ವಾಮೀಜಿ ಹಾಗೆ ಮಾತನಾಡಿದ್ದಾರೆ. 'ಬೈದವರನ್ನೇ ಬಂಧುಗಳು' ಎಂಬ ಬಸವಣ್ಣನವರ ಮಾತಿನ ಪರಿಪಾಲನೆ ಮಾಡುವವನು ನಾನು' ಎಂದು ಯಡಿಯೂರಪ್ಪ ಹೇಳಿದ್ದಾರೆ.
'ಪಂಚಲಸಾಲಿ ಸಮುದಾಯಕ್ಕೆ ಮೂರು ಸಚಿವ ಸ್ಥಾನ ಕೊಡದೇ ಇದ್ದರೆ ಸಮುದಾಯವದವರು ನಿಮಗೆ ನೀಡಿರುವ ಬೆಂಬಲವನ್ನು ಹಿಂಪಡೆಯುತ್ತೇನೆ, ರಾಜಕೀಯವಾಗಿ ನಿಮ್ಮ ಕೈಬಿಡುತ್ತೇವೆ' ಎಂದು ವಚನಾನಂದ ಸ್ವಾಮೀಜಿ ಅವರು ವೇದಿಕೆ ಮೇಲೆ ಯಡಿಯೂರಪ್ಪ ಅವರಿಗೆ ಹೇಳಿದ್ದರು.
ಇದರಿಂದ ಸಿಟ್ಟಿಗೆದ್ದ ಯಡಿಯೂರಪ್ಪ ವಚನಾನಂದರ ಮಾತನ್ನು ಅರ್ಧಕ್ಕೆ ನಿಲ್ಲಿಸುವಂತೆ ಸೂಚಿಸಿ, ಹೀಗೆಲ್ಲಾ ಬೆದರಿಕೆ ಹಾಕಬೇಡಿ ಎಂದಿದ್ದರು. ವೇದಿಕೆಯಲ್ಲಿಯೇ ಇದ್ದ ಮುರಗೇಶ ನಿರಾಣಿ ಅವರ ಮೇಲೂ ಯಡಿಯೂರಪ್ಪ ಸಿಟ್ಟಾದರು.












Click it and Unblock the Notifications