ನಾಯಿಗೆ ಹೊಯ್ಸಳ ಡಿಕ್ಕಿ; ಪೊಲೀಸರ ವಿರುದ್ಧ ಜನರ ಆಕ್ರೋಶ
ಬೆಂಗಳೂರು, ಡಿಸೆಂಬರ್ 02 : ನಾಯಿಯ ಮೇಲೆ ಹೊಯ್ಸಳ ವಾಹನ ಹತ್ತಿಸಿದ ಪೊಲೀಸರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು. ಅಪಘಾತದಲ್ಲಿ ಗಾಯಗೊಂಡ ನಾಯಿಯನ್ನು ರಕ್ಷಣೆ ಮಾಡಲಾಗಿದ್ದು, ಪ್ರಾಣಿದಯಾ ಸಂಘಕ್ಕೂ ಮಾಹಿತಿ ನೀಡಲಾಗಿದೆ.
ಬೆಂಗಳೂರಿನ ಕೆ. ಆರ್. ಪುರಂನಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಉಪ ಚುನಾವಣೆ ಭದ್ರತೆಯಲ್ಲಿದ್ದ ಪೊಲೀಸರ ಹೊಯ್ಸಳ ವಾಹನ ನಾಯಿಗೆ ಡಿಕ್ಕಿ ಹೊಡೆದಿದೆ. ನಾಯಿಯ ಮೇಲೆ ವಾಹನ ಹತ್ತಿದರೂ ಪೊಲೀಸರು ವಾಹನ ನಿಲ್ಲಿಸಲಿಲ್ಲ.
ಅಪಘಾತದಿಂದಾಗಿ ನಾಯಿ ಜೋರಾಗಿ ಕೂಗುತ್ತಿದ್ದರೂ ವಾಹನವನ್ನೂ ನಿಲ್ಲಿಸದೇ ಪೊಲೀಸರ ಅಲ್ಲಿಂದ ತೆರಳಿದ್ದಾರೆ. ಇದರಿಂದಾಗಿ ಸ್ಥಳೀಯರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು, ನಾಯಿಯನ್ನು ರಕ್ಷಿಸಿ ಉಪಚರಿಸಿದರು.

ಪೊಲೀಸರ ವರ್ತನೆಯನ್ನು ಖಂಡಿಸಿದ ಜನರು ಪ್ರಾಣಿದಯಾ ಸಂಘಕ್ಕೆ ಮಾಹಿತಿ ನೀಡಿದರು. ಪ್ರಾಣಿದಯಾ ಸಂಘದವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಗಸ್ತಿನಲ್ಲಿದ್ದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕಾನೂನುಪಾಲಿಸಲು ಜನರಿಗೆ ತಿಳುವಳಿಕೆ ಹೇಳುವ ಪೊಲೀಸರು ಕರ್ನಾಟಕ ಪೊಲೀಸ್ ಅಧಿನಿಯಮ 1963 ಉಲ್ಲಂಘನೆ ಮಾಡಿದ್ದಾರೆ. ನಾಯಿಗೆ ಹಿಂಸೆ ಮಾಡಿ, ಅದನ್ನು ರಕ್ಷಣೆ ಮಾಡದೇ ಹಾಗೆ ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.
ಕೆ. ಆರ್. ಪುರ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಅದರ ಭದ್ರತೆಗೆ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಡಿಸೆಂಬರ್ 5ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 9ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications