ಕೃಷ್ಣಾ ಮೇಲ್ದಂಡೆ ಯೋಜನೆಗೆ ನೀವು ಕೊಟ್ಟಿದ್ದೆಷ್ಟು ಬುರುಡೆರಾಮಯ್ಯ?: ಬಿಜೆಪಿ
"ಮೇಕೆದಾಟು ನಮ್ಮ ಹಕ್ಕು ಎಂದು ರಾಜ್ಯ ಸರ್ಕಾರ ಹಲವು ಬಾರಿ ಪ್ರತಿಪಾದಿಸಿದ್ದರೂ ವಿಪಕ್ಷ ನಾಯಕರು ಸುಳ್ಳಿನ ಮೆರವಣಿಗೆ ಹೊರಟಿದ್ದಾರೆ. ಎಷ್ಟೆಂದರೂ ಸುಳ್ಳೇ ನಿಮ್ಮ ಮನೆ ದೇವರಲ್ಲವೇ" ಎಂದು 'ಕೂ'ನಲ್ಲಿ ಬಿಜೆಪಿ ಹೇಳಿದೆ. ಕಾಂಗ್ರೆಸ್ ನಡಿಗೆ - ಕೃಷ್ಣೆಯ ಕಡೆಗೆ ಪಾದಯಾತ್ರೆ ಸಂದರ್ಭದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ವಾರ್ಷಿಕ ಹತ್ತು ಸಾವಿರ ಕೋಟಿ ಅನುದಾನ ನೀಡುತ್ತೇನೆ ಎಂದು ಭಾಷಣ ಬಿಗಿದಿರಿ. ಅಂದರೆ ಐದು ವರ್ಷದಲ್ಲಿ ಐವತ್ತು ಸಾವಿರ ಕೋಟಿ! ಆದರೆ ನೀವು ಕೊಟ್ಟಿದ್ದೆಷ್ಟು ಸಿದ್ದರಾಮಯ್ಯನವರೇ? ಎಂದು ಬಿಜೆಪಿ ಪ್ರಶ್ನಿಸಿದೆ.ಕೃಷ್ಣಾ ಮೇಲ್ದಂಡೆಗೆ ವಾರ್ಷಿಕ ಹತ್ತು ಸಾವಿರ ಕೋಟಿ ಅನುದಾನ ಅಸಾಧ್ಯ ಎಂದು ಪತ್ರಿಕೆಗಳು ಅಂದೇ ಬರೆದಿದ್ದವು. ಆದರೆ ಕೂಡಲಸಂಗಮದ ಸತ್ಯತಾಣದಲ್ಲಿ ನಿಂತು ಭಾಷಣ ಮಾಡುವಾಗ ನೀವು ಮಾಧ್ಯಮಗಳನ್ನೇ ತರಾಟೆಗೆ ತೆಗೆದುಕೊಂಡಿರಿ. ಅನುದಾನ ನೀಡಲು ಸಾಧ್ಯವಿದೆ ಎಂದಿರಿ. ಆದರೆ, ಅಧಿಕಾರಕ್ಕೆ ಬಂದಾಗ ಕೃಷ್ಣೆಯನ್ನು ಮರೆತಿರಿ ಎಂದು ಬಿಜೆಪಿ ದೂರಿದೆ.
2013ರಲ್ಲಿ ಮುಖ್ಯಮಂತ್ರಿಯಾದಾಗ ತಾನು ಕೃಷ್ಣಾ ನದಿಯ ತಟದಲ್ಲಿ ನಿಂತು ಆಡಿದ ಮಾತುಗಳನ್ನು ಬುರುಡೆರಾಮಯ್ಯ ಸಂಪೂರ್ಣ ಮರೆತರು. "ವರ್ಷಕ್ಕೆ ಅಲ್ಲಪ್ಪ, ಅದು ಐದು ವರ್ಷಕ್ಕೆ ಹತ್ತು ಸಾವಿರ ಕೋಟಿ "ಎಂದಿದ್ದು ಎಂದು ವಿಷಯಾಂತರ ಮಾಡಿದರು. ದಾಖಲೆ ಮುಂದಿಟ್ಟಾಗ "ಮತಾಂತರ ಕಾಯ್ದೆ" ಸಂದರ್ಭದಲ್ಲಿ ಆದಂತೆ ಪೇಚಿಗೆ ಸಿಲುಕಿದ್ದು ಮರೆತು ಹೋಯ್ತೆ? ಈಗ ಮೇಕೆದಾಟು ವಿಚಾರದಲ್ಲಿ ಸಿದ್ದರಾಮಯ್ಯ ಅವರು ಸುಳ್ಳಿನ ರಾಜಕಾರಣ ಆರಂಭಿಸಿದ್ದಾರೆ. ಮೇಕೆದಾಟು ನಮ್ಮ ಹಕ್ಕು ಎಂದು ರಾಜ್ಯ ಸರ್ಕಾರ ಹಲವು ಬಾರಿ ಪ್ರತಿಪಾದಿಸಿದ್ದರೂ @inckarnataka ಪಕ್ಷದ ನಾಯಕರು ಸುಳ್ಳಿನ ಮೆರವಣಿಗೆ ಹೊರಟಿದ್ದಾರೆ. ಎಷ್ಟೆಂದರೂ ಸುಳ್ಳೇ ನಿಮ್ಮ ಮನೆ ದೇವರಲ್ಲವೇ ಎಂದು ಬಿಜೆಪಿ ಟೀಕಿಸಿದೆ.
ಕಳೆದ ವಾರ ಕೃಷ್ಣಾ ಮೇಲ್ದಂಡೆ ಮೂರನೇ ಹಂತಕ್ಕೆ ಸಂಬಂಧಿಸಿದಂತೆ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಅಧಿಸೂಚನೆ ಆದಷ್ಟು ಶೀಘ್ರ ಪ್ರಕಟವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್‌ನಲ್ಲಿ ಕೃಷ್ಣಾ ನದಿ ನೀರಿನ ತಕರಾರು ಕುರಿತು ವಿಚಾರಣೆ ನಡೆಯುತ್ತಿದ್ದು, ಮುಂದಿನ ವಿಚಾರಣೆ ಜನವರಿ 10ಕ್ಕೆ ನಿಗದಿಯಾಗಿದೆ ಎಂದು ತಿಳಿಸಿದರು. ಅಧಿಸೂಚನೆಯನ್ನು ಪ್ರಕಟಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ಕರ್ನಾಟಕ ಮತ್ತು ಮಹಾರಾಷ್ಟ್ರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿವೆ. ಸ್ಪಷ್ಟನೆ ನೀಡಲು ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರಕ್ಕೂ ಸೂಚಿಸಿದೆ ಎಂದರು.

ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಮೇಲ್ಮನವಿಯನ್ನು ತೆಲಂಗಾಣ ಹಿಂದಕ್ಕೆ ಪಡೆದಿದೆ. ಇದರಿಂದ ರಾಜ್ಯದ ಹಾದಿ ಸುಗಮವಾಗಿದೆ. ಕೇಂದ್ರವು ಆದಷ್ಟು ಬೇಗ ಸುಪ್ರೀಂಕೋರ್ಟ್‌ನಲ್ಲಿ ತನ್ನ ನಿಲುವು ಪ್ರಕಟಿಸಲಿದೆ ಎಂದೂ ಹೇಳಿದ್ದಾರೆ.

ಕಳಸಾ ಮತ್ತು ಬಂಡೂರಿ ಕುಡಿಯುವ ನೀರು ಪೂರೈಕೆ ಯೋಜನೆಗೆ 7.50 ಟಿಎಂಸಿ ಅಡಿ ನೀರಿನ ಅಗತ್ಯವಿದ್ದು, ಸದ್ಯಕ್ಕೆ 3.90 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. ಸುಪ್ರೀಂಕೋರ್ಟ್ನಲ್ಲಿ ಈ ಕುರಿತು ವ್ಯಾಜ್ಯ ಇದ್ದರೂ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಒಪ್ಪಿಗೆ ನೀಡಿದೆ. ಆದರೆ 3.90 ಟಿಎಂಸಿ ಅಡಿ ಅಥವಾ 7.50 ಟಿಎಂಸಿ ಅಡಿ ನೀರಿನ ಬಳಕೆಗೆ ಯೋಜನೆ ರೂಪಿಸಬೇಕೋ ಎಂಬ ಗೊಂದಲ ನಿವಾರಿಸಿಕೊಳ್ಳಲು ಸ್ವಲ್ಪ ಕಾಲಾವಕಾಶ ಬೇಕಾಯಿತು. ಈಗ ಆ ಗೊಂದಲ ನಿವಾರಣೆಯಾಗಿದ್ದು, ಪರಿಷ್ಕೃತ ವಿಸ್ತೃತ ಯೋಜನಾ ವರದಿ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಪರಿಸರ ಇಲಾಖೆಯ ಒಪ್ಪಿಗೆ ಸಿಗುವ ನಿರೀಕ್ಷೆಯಲ್ಲಿದ್ದೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.












Click it and Unblock the Notifications