ಬೆಂಗಳೂರಿನಲ್ಲಿ ಕೊರೊನಾವೈರಸ್ ಹೆಚ್ಚಾಗಲು ಇಲ್ಲಿದೆ ಅಸಲಿ ಕಾರಣ?
ಬೆಂಗಳೂರು, ಆಗಸ್ಟ್.26: ಕೊರೊನಾವೈರಸ್ ಸೋಂಕು ನಿಯಂತ್ರಿಸುವಲ್ಲಿ ಬೆಂಗಳೂರು ಇಡೀ ದೇಶಕ್ಕೆ ಮಾದರಿ ಎನ್ನುವಂತಾಗಿತ್ತು. ಸಿಲಿಕಾನ್ ಸಿಟಿಯನ್ನು ನೋಡಿ ಕಲಿಯುವಂತೆ ಸ್ವತಃ ಕೇಂದ್ರ ಸಚಿವರೇ ಬಾರಿ ಬಾರಿ ಹೇಳುತ್ತಿದ್ದ ದಿನಗಳಿದ್ದವು. ಆದರೆ ಇಂದು ಅದೇ ಐಟಿ ಸಿಟಿ, ಮೆಟ್ರೋ ಸಿಟಿ ಎನಿಸಿರುವ ಬೆಂಗಳೂರಿನ ಚಿತ್ರಣ ಬದಲಾಗಿದೆ.
Recommended Video
ಕಳೆದ ಜೂನ್.09ರಂದು ಬೆಂಗಳೂರಿನಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆ ಮತ್ತು ಪ್ರಮಾಣದ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದರು. ನಗರದ ಒಟ್ಟು ಜನಸಂಖ್ಯೆ ಮತ್ತು ಸೋಂಕಿತ ಪ್ರಕರಣಗಳ ಜೊತೆಗೆ ಹೋಲಿಕೆ ಮಾಡಿರುವ ಮಾಹಿತಿಯಾಧಾರಿತ ಫೋಟೋ ಅದಾಗಿತ್ತು. ಅಂದು ಹೆಮ್ಮೆ ಹುಟ್ಟಿಸಿದ್ದ ನಗರದಲ್ಲಿನ ಇಂದಿನ ಚಿತ್ರಣವು ಸರ್ಕಾರವೇ ತಲೆ ತಗ್ಗಿಸುವಂತೆ ಮಾಡಿದೆ.
ಬೆಂಗಳೂರಿನಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಿಸುವಲ್ಲಿ ಸರ್ಕಾರವು ಎಡವಿದ್ದೆಲ್ಲಿ. ಪ್ರತಿನಿತ್ಯ ಇಂದು 2,000ಕ್ಕಿಂತ ಹೆಚ್ಚು ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ನಗರದಲ್ಲಿ ತಪ್ಪು ಆಗಿದ್ದೆಲ್ಲಿ. ಐಟಿ ಸಿಟಿಯಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವದರ ಹಿಂದಿನ ಕಾರಣವೇನು ಎನ್ನುವುದರ ಕುರಿತು ಒಂದು ವಿಮರ್ಶಾತ್ಮಕ ವರದಿ ನಿಮ್ಮ ಮುಂದೆ.

1 ಕೋಟಿ 25 ಲಕ್ಷ ಜನರ ಪೈಕಿ 450 ಜನರಿಗೆ ಕೊವಿಡ್-19
ಜೂನ್ ತಿಂಗಳ ಅವಧಿಯಲ್ಲಿ ದೇಶಾದ್ಯಂತ 2,60,000 ಮಂದಿಗೆ ಕೊರೊನಾವೈರಸ್ ಸೋಂಕು ದೃಢಪಟ್ಟಿತ್ತು. ವಿಶ್ವದಲ್ಲಿ ಕೊವಿಡ್-19 ಅಟ್ಟಹಾಸ ಮೆರೆಯುತ್ತಿದ್ದರೂ ಬೆಂಗಳೂರಿನಲ್ಲಿ ಮಹಾಮಾರಿಯ ಕಾಟ ಅಷ್ಟಾಗಿ ಕಂಡು ಬಂದಿರಲಿಲ್ಲ. 1 ಕೋಟಿ 25 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ನಗರದಲ್ಲಿ ಕೇವಲ 450 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು. ಇದನ್ನು ಆಧಾರವಾಗಿ ಇಟ್ಟುಕೊಂಡು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಟ್ವೀಟ್ ಮಾಡಿದ್ದರು.

ಬೆಂಗಳೂರನ್ನು ನ್ಯೂಜಿಲೆಂಡ್ ಜೊತೆಗೆ ಹೋಲಿಕೆ
ಸಿಲಿಕಾನ್ ಸಿಟಿಯಲ್ಲಿ ಪತ್ತೆಯಾದ ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳನ್ನು ನ್ಯೂಜಿಲೆಂಡ್ ಜೊತೆಗೆ ಹೋಲಿಕೆ ಮಾಡಲಾಗಿತ್ತು. ನ್ಯೂಜಿಲೆಂಡ್ ಗಿಂತ ಎರಡರಷ್ಟು ಜನಸಂಖ್ಯೆಯನ್ನು ಬೆಂಗಳೂರು ಹೊಂದಿದೆ. ಆದರೆ ನ್ಯೂಜಿಲೆಂಡ್ ನಲ್ಲಿ ಅಂದು 1,150 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ ಕೇವಲ 450 ಮಂದಿಗೆ ಸೋಂಕು ತಗುಲಿರುವ ಬಗ್ಗೆ ಉಲ್ಲೇಖಿಸಲಾಗಿತ್ತು. ಅಂದು ಸಚಿವರು ಮಾಡಿರುವ ಟ್ವೀಟ್ ನ್ನು ಸಾವಿರಾರು ನೆಟ್ಟಿಗರು ರೀ-ಟ್ವೀಟ್ ಮಾಡಿದ್ದರು. ಆದರೆ ಇಂದು ಬೆಂಗಳೂರಿನ ಚಿತ್ರಣ ಬದಲಾಗಿದೆ. ನ್ಯೂಜಿಲೆಂಡ್ ನಲ್ಲಿ ಒಟ್ಟು 1695 ಪ್ರಕರಣಗಳಿದ್ದರೆ, ಸಿಲಿಕಾನ್ ಸಿಟಿಯಲ್ಲಿ 1,12,087 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ಬೆಂಗಳೂರು ಎರಡೂವರೆ ತಿಂಗಳಿನಲ್ಲೇ ಬದಲು
ಜೂನ್ ತಿಂಗಳಿನಲ್ಲಿ ಸಿಲಿಕಾನ್ ಸಿಟಿ ಚಿತ್ರಣ ಇಂದಿನಂತೆ ಇರಲಿಲ್ಲ. ಪ್ರತಿನಿತ್ಯ ಹೆಚ್ಚು ಎಂದರೆ 25 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಆದರೆ ಎರಡೂವರೆ ತಿಂಗಳಿನಲ್ಲೇ ಬೆಂಗಳೂರಿನ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಹಿಂದಿಗಿಂತ 100 ಪಟ್ಟು ಹೆಚ್ಚಿನ ಪ್ರಕರಣಗಳು ಪತ್ತೆಯಾಗುತ್ತಿವೆ. ಇಂದು ಪ್ರತಿನಿತ್ಯ 2500 ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ.

ಲಾಕ್ ಡೌನ್ ಹೊರತು ಬೇರೆ ಮಾರ್ಗ ಕಂಡುಕೊಳ್ಳಲಿಲ್ಲ
ಮಾರ್ಚ್ ತಿಂಗಳಾಂತ್ಯದಲ್ಲಿ ದೇಶಾದ್ಯಂತ ಕೊರೊನಾವೈರಸ್ ಭೀತಿ ಹಿನ್ನೆಲೆ ಲಾಕ್ ಡೌನ್ ಘೋಷಿಸಲಾಗಿತ್ತು. ಜೂನ್ ತಿಂಗಳ ಹೊತ್ತಿಗೆ ಈ ಲಾಕ್ ಡೌನ್ ಸಡಿಲಿಕೆಗೊಳಿಸುವ ವೇಳೆಗೆ ಸರ್ಕಾರವು ಕೊವಿಡ್-19 ಸೋಂಕು ನಿಯಂತ್ರಣಕ್ಕೆ ಅನ್ಯಮಾರ್ಗವನ್ನು ಕಂಡುಕೊಳ್ಳಲಿಲ್ಲ. ಕೇವಲ ಲಾಕ್ ಡೌನ್ ನಿಂದಲೇ ಕೊರೊನಾವೈರಸ್ ಸೋಂಕಿಗೆ ಕಡಿವಾಣ ಹಾಕಬಹುದು ಎಂದುಕೊಂಡಿದ್ದೇ ಸರ್ಕಾರದ ಬಹುಮುಖ್ಯ ತಪ್ಪು ಎನಿಸಿತು. ಲಾಕ್ ಡೌನ್ ತೆರವುಗೊಳ್ಳುತ್ತಿದ್ದಂತೆ ನಗರದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆಯು ಶರವೇಗದಲ್ಲಿ ಬೆಳೆಯಲು ಶುರುವಾಯಿತು. ಸಮುದಾಯದಲ್ಲಿ ಮಹಾಮಾರಿಯು ಅಟ್ಟಹಾಸ ಆರಂಭಿಸಿತು.

ಲಾಕ್ ಡೌನ್ ಅವಧಿಯಲ್ಲಿ ಮೈಮರೆಯಿತಾ ಸರ್ಕಾರ?
ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ ಸಂದರ್ಭದಲ್ಲಿ ಕೊರೊನಾವೈರಸ್ ಸೋಂಕಿನ ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುವುದಕ್ಕೆ ಸರ್ಕಾರಕ್ಕೆ ಮೂರರಿಂದ ನಾಲ್ಕು ತಿಂಗಳ ಕಾಲಾವಕಾಶವಿತ್ತು. ಆದರೆ ಈ ಅವಧಿಯಲ್ಲಿ ರಾಜ್ಯ ಸರ್ಕಾರವು ಮೈಮರೆತು ಕುಳಿತ ಹಾಗೆ ವರ್ತಿಸಿತು. ನಗರದಲ್ಲಿ ಭವಿಷ್ಯದ ದಿನಗಳಲ್ಲಿ ಯಾವ ರೀತಿ ಕ್ರಮಗಳನ್ನು ಜಾರಿಗೊಳಿಸಬೇಕು ಎನ್ನುವುದರ ಬಗ್ಗೆ ಯೋಚಿಸಲಿಲ್ಲ. ಯೋಜನೆಗಳನ್ನೂ ರೂಪಿಸಲಿಲ್ಲ. ಲಾಕ್ ಡೌನ್ ಸಮರ್ಪಕವಾಗಿ ಜಾರಿಗೊಳಿಸಿದರೆ ಕೊರೊನಾವೈರಸ್ ನಿಯಂತ್ರಿಸಬಹುದು ಎಂದು ಸರ್ಕಾರ ನಂಬಿಕೆಯಿಟ್ಟುಕೊಂಡಂತೆ ತೋರುತ್ತದೆ ಎಂದು ಸಾಂಕ್ರಾಮಿಕ ರೋಗತಜ್ಞ ಗಿರಿಧರ್ ಬಾಬು ತಿಳಿಸಿದ್ದಾರೆ.

ಕರ್ನಾಟಕ ಲಾಕ್ ಡೌನ್ ವೇಳೆ ಸರ್ಕಾರ ಮಾಡಿದ ಕೆಲಸವೇನು?
ಕೊರೊನಾವೈರಸ್ ಸೋಂಕು ಹರಡುವಿಕೆ ಮತ್ತು ಲಾಕ್ ಡೌನ್ ನಡುವೆ ರಾಜ್ಯದಲ್ಲಿ ಸಮೀಕ್ಷೆ ನಡೆಸಲಾಯಿತು. 40 ಸಾವಿರ ಆರೋಗ್ಯ ಅಧಿಕಾರಿಗಳು 1 ಕೋಟಿ 60 ಲಕ್ಷ ಮನೆಗಳಿಗೆ ತೆರಳಿ ವೈದ್ಯಕೀಯ ಸಮೀಕ್ಷೆ ನಡೆಸಿದರು. ಮಾಲ್, ಸಿನಿಮಾ ಥಿಯೇಟರ್ ಗಳನ್ನು ಬಂದ್ ಮಾಡಲಾಗಿದ್ದು, ಪಾರ್ಕ್ ಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಮೆಡಿಕಲ್ ಸ್ಟೋರ್ ಗಳಲ್ಲಿ ಪ್ಯಾರಾ ಸಿಟಮಲ್ ರೀತಿಯ ಔಷಧಿಗಳನ್ನು ಖರೀದಿಸುವ ಜನರ ದೂರವಾಣಿ ಸಂಖ್ಯೆಯನ್ನು ಸಂಗ್ರಹಿಸಲಾಯಿತು.

ಕೊರೊನಾವೈರಸ್ ಸೋಂಕಿನ ಬಗ್ಗೆ ದಿವ್ಯನಿರ್ಲಕ್ಷ್ಯ
ಕರ್ನಾಟಕದಲ್ಲಿ ಲಾಕ್ ಡೌನ್ ಜಾರಿಗೊಳಿಸುತ್ತಿದ್ದಂತೆ ಕೊರೊನಾವೈರಸ್ ಸೋಂಕಿನ ಬಗ್ಗೆ ಜನರಲ್ಲಿ ಭೀತಿಯೇ ಹೊರಟು ಹೋಯಿತು. ಮಾರುಕಟ್ಟೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ನೆರೆದ ಜನರು ಹೂವು ತರಕಾರಿ ಮಾರಾಟದಲ್ಲಿ ಬ್ಯುಸಿ ಆಗಿ ಬಿಟ್ಟರು. ಅತಿಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿರುವ ಮಹಾರಾಷ್ಟ್ರ ಮತ್ತು ತಮಿಳುನಾಡಿನಿಂದ ಜನರು ವಲಸೆ ಬಂದಿದ್ದು, ರಾಜ್ಯದಲ್ಲಿ ಸೋಂಕು ಹೆಚ್ಚಾಗುವುದಕ್ಕೆ ಪ್ರಮುಖ ಕಾರಣವಾಗಿ ಬಿಟ್ಟಿತು.

ಅಕ್ಕಪಕ್ಕದ ರಾಜ್ಯಗಳ ಮಧ್ಯೆ ಬೆಂಗಳೂರೇ ಸ್ಯಾಂಡ್ ವಿಚ್?
ಜೂನ್ ತಿಂಗಳ ವೇಳೆಯಲ್ಲಿ ಮಹಾರಾಷ್ಟ್ರದಲ್ಲಿ 45,000 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು. ನೆರೆಯ ತಮಿಳುನಾಡು ರಾಜ್ಯದಲ್ಲಿ 20,000 ಜನಿರಿಗೆ ಕೊವಿಡ್-19 ಸೋಂಕು ಪತ್ತೆಯಾಗಿದ್ದು, ಅತಿಕಡಿಮೆ ಸೋಂಕಿತ ಪ್ರಕರಣಗಳು ದಾಖಲಾಗಿದ್ದ ಬೆಂಗಳೂರು ಸುರಕ್ಷಿತ ಎನಿಸಿ ಬಿಟ್ಟಿತು. ಇದರಿಂದಾಗಿ ಸಾವಿರಾರು ಸಂಖ್ಯೆಯಲ್ಲಿ ನೆರೆ ರಾಜ್ಯದ ಜನರು ಬೆಂಗಳೂರಿಗೆ ವಲಸೆ ಬಂದಿದ್ದು, ಸಿಲಿಕಾನ್ ಸಿಟಿಯಲ್ಲೂ ಸೋಂಕಿತ ಪ್ರಕರಣಗಳು ಹೆಚ್ಚಾದವು ಎಂದು ಕರ್ನಾಟಕದ ಆರೋಗ್ಯ ಆಯುಕ್ತ ಪಂಕಜ್ ಪಾಂಡೆ ತಿಳಿಸಿದ್ದಾರೆ.












Click it and Unblock the Notifications