ಗುತ್ತಿಗೆದಾರನ ಮನೆಯಿಂದ 1 ಕೋಟಿ ದರೋಡೆ
ಬೆಂಗಳೂರು, ಜ.8 : ಮಲ್ಲೇಶ್ವರಂನ ಮನೆಯೊಂದರಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದು ಸುಮಾರು ಒಂದು ಕೋಟಿ ರೂ.ಮೌಲ್ಯದ ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಬುಧವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಮಲ್ಲೇಶ್ವರಂ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಮಲ್ಲೇಶ್ವರಂ 7ನೇ ಅಡ್ಡರಸ್ತೆಯಲ್ಲಿರುವ ಗುತ್ತಿಗೆದಾರ ಕುಮಾರ್ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಕುಮಾರ್ ಅವರು ಕುಟುಂಬ ಸಮೇತರಾಗಿ ನಾಮಕರಣ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ಸಮಯದಲ್ಲಿ ಮನೆಗೆ ನುಗ್ಗಿದ ಕಳ್ಳರು ಅರ್ಧ ಕೆಜಿ ಚಿನ್ನ, ವಜ್ರದ ಆಭರಣ, ನಗದು ಸೇರಿದಂತೆ ಸುಮಾರು 1 ಕೋಟಿ ರೂ.ಗಳ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

ಬುಧವಾರ ಬೆಳಗ್ಗೆ ಕುಮಾರ್ ಅವರು ಮನೆಗೆ ಮರಳಿದಾಗ ದರೋಡೆ ಬಗ್ಗೆ ತಿಳಿದು ಬಂದಿದೆ. ತಕ್ಷಣ ಅವರು ಮಲ್ಲೇಶ್ವರಂ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಲ್ಲೇಶ್ವರಂ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಕುಮಾರ್ ಅವರು ಮನೆಯಲ್ಲಿ ಇರುವುದಿಲ್ಲ ಎಂಬುದನ್ನು ಅರಿತ ಪರಿಚಯಸ್ಥರೆ ಈ ಕೃತ್ಯ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನೆ ವಿವರ : ನಾಮಕರಣಕ್ಕಾಗಿ ಗುತ್ತಿಗೆದಾರ ಕುಮಾರ್ ಕುಟುಂಬ ಸದಸ್ಯರೊಂದಿಗೆ ಹೊರಗೆ ಹೋಗಿದ್ದರು. ಈ ಸಂದರ್ಭದಲ್ಲಿ ಮನೆಯ ಹಿಂಬಾಗಿಲ ಬೀಗ ಮೀಟಿ ಒಳ ನುಗ್ಗಿರುವ ಕಳ್ಳರು, 25 ಲಕ್ಷ ಮೌಲ್ಯದ 538 ಗ್ರಾಂ ಚಿನ್ನದ ಆಭರಣ, ವಜ್ರದ ಓಲೆ ಹಾಗೂ ನೆಕ್ಲೆಸ್ ದೋಚಿ ಪರಾರಿಯಾಗಿದ್ದಾರೆ.
ಇವುಗಳಲ್ಲಿ 250 ಗ್ರಾಂ ಕಾಸಿನ ಸರ, 65 ಗ್ರಾಂನ ಚಿಕ್ಕ ಕಾಸಿನ ಸರ, 30 ಗ್ರಾಂನ ಕಾಸಿನ ಸರ, 100ನ 6 ಬಳೆಗಳು, ಒಂದು ವಜ್ರದ ನೆಕ್ಲೆಸ್ ಹಾಗೂ ಎರಡು ವಜ್ರದ ಓಲೆಗಳು ಸೇರಿವೆ. ರಾತ್ರಿ ಸುಮಾರು 9.30ರ ವೇಳೆಗೆ ಈ ಕಳ್ಳತನ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.












Click it and Unblock the Notifications