ಯುಗಾದಿಗಾಗಿ ಬೆಲೆ ಏರಿಕೆಗೆ ತಡೆ, ಹೋಟೆಲ್ ಊಟ ಆಗಲಿದೆ ದುಬಾರಿ!
ಬೆಂಗಳೂರು, ಏಪ್ರಿಲ್ 01: ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾದ ಬಳಿಕ ಅಡುಗೆ ಎಣ್ಣೆಯ ದರದಲ್ಲಿ ಏರಿಕೆಯಾಗಿದೆ. ತೈಲ ದಾಸ್ತಾನು ಕುಸಿತವಾಗಿದ್ದು, ವಿವಿಧ ಕಂಪನಿಗಳ ಅಡುಗೆ ಎಣ್ಣೆಯ ದರಗಳು ಭಾರೀ ಏರಿಕೆ ಕಂಡಿವೆ. ಉಕ್ರೇನ್‌ನಿಂದ ಸೂರ್ಯಕಾಂತಿ ಎಣ್ಣೆ ಆಮದು ಸ್ಥಗಿತವಾಗಿದೆ. ಉಕ್ರೇನ್ ದೇಶದಿಂದಲೇ ಶೇ 70ರಷ್ಟು ಸೂರ್ಯಕಾಂತಿ ಎಣ್ಣೆಯನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಸದ್ಯ ಅದಾನಿ ಸೇರಿದಂತೆ ದೊಡ್ಡ ಸಂಸ್ಥೆಗಳ ದಾಸ್ತಾನು ಮುಗಿಯುತ್ತಾ ಬಂದಿದ್ದು, ಸರಿಯಾಗಿ ಉಗಾದಿ ಹಬ್ಬದ ಸಂದರ್ಭದಲ್ಲಿ ಎಲ್ಲಾ ಅಗತ್ಯ ವಸ್ತುಗಳ ಊಟ-ತಿಂಡಿ ಬೆಲೆ ಏರಿಕೆಯಾಗುವ ಸೂಚನೆ ಸಿಕ್ಕಿದೆ. ನಿರೀಕ್ಷೆಯಂತೆ ಏಪ್ರಿಲ್ ತಿಂಗಳಲ್ಲೇ ಬೆಂಗಳೂರಿನ ಹೋಟೆಲ್, ರೆಸ್ಟೋರೆಂಟ್, ಕೆಫೆಗಳಲ್ಲಿನ ಆಹಾರ ದರ ಪಟ್ಟಿ ಪರಿಷ್ಕರಣೆಗೆ ಒಳಪಡಲಿದೆ. ಗ್ರಾಹಕರ ಜೇಬಿಗೆ ಇನ್ನಷ್ಟು ಕತ್ತರಿ ಬೀಳುವುದು ನಿಶ್ಚಿತವಾಗಲಿದೆ.
ಸೂರ್ಯಕಾಂತಿ ಎಣ್ಣೆ ಬದಲಿಯಾಗಿ ಪಾಮ್ ಆಯಿಲ್, ಸೋಯಾಬಿನ್ ಎಣ್ಣೆ ಬಳಕೆಯತ್ತ ಜನ ವಾಲುತ್ತಿದ್ದಾರೆ. ರಿಫೈಂಡ್ ಕಡ್ಲೇಕಾಯಿ ಎಣ್ಣೆ, ರೈಸ್ ಬ್ರಾನ್ ಎಣ್ಣೆ(ಭತ್ತದ ತೌಡಿನಿಂದ ಮಾಡಿದ ಖಾದ್ಯ ತೈಲ) ಬಳಕೆಗೆ ಸಂಸ್ಥೆಗಳು ಉತ್ತೇಜನ ನೀಡುತ್ತಿದ್ದು, ಈ ಖಾದ್ಯತೈಲಗಳ ಬೆಲೆ ಕೂಡಾ ಸೂರ್ಯಕಾಂತಿ ತೈಲಕ್ಕಿಂತ ಕಡಿಮೆ ಇದೆ. ಆದರೆ, ಬೃಹತ್ ಆಹಾರ ಉದ್ಯಮಕ್ಕೆ ತೈಲ ಬೆಲೆ ಬಿಸಿ ಈಗಾಗಲೇ ತಟ್ಟಿದೆ. ಇನ್ನು ಸ್ವಲ್ಪ ದಿನಗಳಲ್ಲಿ ಅಡುಗೆ ಎಣ್ಣೆಯ ದರ ಏರಿಕೆಯ ಬಿಸಿ ಮನೆ ಮನೆಗೂ ವ್ಯಾಪಿಸಲಿದೆ. ವಡೆ, ಪೂರಿ ಸೇರಿದಂತೆ ವಿವಿಧ ಆಹಾರ ಉತ್ಪನ್ನಗಳ ದರ ಹೋಟೆಲ್‌ಗಳಲ್ಲಿ ಶೇ 10ರಷ್ಟು ಏರಿಕೆಯಾಗಲಿದೆ ಎಂದು ಮಾರ್ಚ್ ತಿಂಗಳಲ್ಲಿ ಬಂದ ವರದಿ ನಿಜವಾಗುತ್ತಿದೆ.
"ಬೆಂಗಳೂರು ನಗರ ಹೋಟೆಲ್ ಮಾಲೀಕರ ಸಂಘವು ಸಭೆ ನಡೆಸಿ ಅಡುಗೆ ಎಣ್ಣೆ ದರ ಏರಿಕೆ, ಊಟ, ತಿಂಡಿ, ಕಾಫಿ, ಟೀ ಬೆಲೆ ಪರಿಷ್ಕರಣೆ ಕುರಿತು ಚರ್ಚೆ ನಡೆಸಲು ಸಮಯ ನಿಗದಿ ಪಡಿಸಿಕೊಂಡಿದ್ದಾರೆ. ಏಪ್ರಿಲ್ 4ರಂದು ಈ ಕುರಿತಂತೆ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದು, ಆಹಾರ ಉತ್ಪನ್ನಗಳ ದರ ಏರಿಕೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಶೇ 10ರಷ್ಟು ಬೆಲೆ ಹೆಚ್ಚಳ ಸಾಧ್ಯತೆಯಿದೆ,'' ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಮುಖ್ಯಸ್ಥರಾದ ಪಿ.ಸಿ ರಾವ್ ಅವರು ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ. ಸಿ. ರಾವ್ ಈ ಕುರಿತು ಮಾತನಾಡಿ, "ಊಟಕ್ಕೆ ಪೂರಿಯೇ ಬೇಕು ಎಂದು ಗ್ರಾಹಕರು ಬೇಡಿಕೆ ಇಡುತ್ತಿದ್ದಾರೆ. ಇಡ್ಲಿ, ವಡೆಗೆ ಬೇಡಿಕೆ ಕಡಿಮೆಯಾಗಿಲ್ಲ. ಸಂಜೆ ಪಕೋಡ, ಬೋಂಡಾ, ಬಜ್ಜಿ ಕೇಳುತ್ತಿದ್ದಾರೆ. ಇವುಗಳಿಗೆ ಎಣ್ಣೆ ಬಳಕೆ ಮಾಡಲೇಬೇಕು" ಎಂದರು.
"ಇಂದಿನ ಖಾದ್ಯ ತೈಲ ಬೆಲೆ ಏರಿಕೆಗೆ ತಕ್ಕಂತೆ ಆಹಾರ ಉತ್ಪನ್ನಗಳ ಬೆಲೆ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ಏಪ್ರಿಲ್ ಎರಡನೇ ವಾರದಿಂದ ಜಾರಿಗೆ ಬರುವಂತೆ ಉತ್ಪನ್ನಗಳ ದರಗಳು ಏರಿಕೆಯಾಗುವ ಸಂಭವವಿದೆ" ಎಂದು ಹೇಳಿದ್ದಾರೆ.

ನಗರದ ಕೆಲವು ಹೋಟೆಲ್‌ಗಳಲ್ಲಿ ಕಳೆದ ವಾರದಿಂದಲೇ ವಡೆ, ಬಜ್ಜಿ, ಪೂರಿಗಳ ದರದಲ್ಲಿ ಏರಿಕೆ ಮಾಡಲಾಗಿದೆ. ಏಪ್ರಿಲ್ ತಿಂಗಳಲ್ಲಿ ಇನ್ನೂ ಕೆಲವು ಉತ್ಪನ್ನಗಳ ದರಗಳಲ್ಲಿ ಏರಿಕೆಯಾಗುವುದು ಖಚಿತವಾಗಿದೆ. ಆದ್ದರಿಂದ ಗ್ರಾಹಕರು ಹೋಟೆಲ್‌ಗೆ ಹೋಗುವ ಮುನ್ನ ಜೇಬು ನೋಡಿಕೊಳ್ಳಬೇಕು. ಚಿಕನ್ ಕಬಾಬ್, ಮೊಟ್ಟೆ ಬೋಂಡಾ, ಗೋಬಿ ಮಂಚೂರಿ ಮುಂತಾದವುಗಳ ದರಗಳಲ್ಲೂ ಏರಿಕೆಯಾಗಿದೆ. ಅಡುಗೆ ಎಣ್ಣೆಯ ದರವು ಹತೋಟಿಗೆ ಬಾರದಿದ್ದರೆ ಮುಂದಿನ ತಿಂಗಳು ಮತ್ತಷ್ಟು ಬೆಲೆ ಏರಿಕೆಯಾಗಲಿದೆ.












Click it and Unblock the Notifications