ಲೂಡೋ ಆಡಿ 4 ಲಕ್ಷ ಸೋತ ಬೆಂಗಳೂರು ಮಹಿಳೆ : ಇಬ್ಬರು ಮಕ್ಕಳ ಜೊತೆ ಮನೆ ಬಿಟ್ಟು ಪರಾರಿ
ಜೂಜು ಹಲವರ ಮನೆಗಳ ಖುಷಿಯನ್ನೇ ನಾಶವಾಗಿಸಿದೆ. ಅದರಲ್ಲೂ ಆನ್‌ಲೈನ್ ಗೇಮ್ ಚಟಕ್ಕೆ ಬೀಳುವ ಯುವಜನತೆ ಲಕ್ಷ ಲಕ್ಷ ಹಣ ಕಳೆದುಕೊಳ್ಳುತ್ತಿದ್ದಾರೆ. ಬೆಂಗಳೂರಿನ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಲೂಡೋ ಆಡಿ ಬರೋಬ್ಬರಿ 4 ಲಕ್ಷ ರೂಪಾಯಿ ಕಳೆದುಕೊಂಡಿದ್ದು, ಹತಾಶರಾಗಿ ಮಕ್ಕಳ ಜೊತೆ ಮನೆ ಬಿಟ್ಟುಹೋಗಿದ್ದಾರೆ.
4 ಲಕ್ಷ ರೂಪಾಯಿ ಸೋತ ಬಳಿಕ ಮರ್ಯಾದೆಗೆ ಅಂಜಿದ 26 ವರ್ಷದ ಗೃಹಿಣಿಯೊಬ್ಬರು, ತನ್ನ ಗಂಡನಿಗೆ ಕ್ಷಮೆಯಾಚಿಸುವ ಪತ್ರವನ್ನು ಬರೆದಿಟ್ಟು ತನ್ನ ಇಬ್ಬರು ಮಕ್ಕಳೊಂದಿಗೆ ತನ್ನ ಮನೆಯನ್ನು ತೊರೆದಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಒಂದು ಮಗುವಿಗೆ ಆರು ವರ್ಷ, ಇನ್ನೊಂದು ಮಗುವಿಗೆ ಒಂದು ವರ್ಷ ವಯಸ್ಸಾಗಿದೆ.

ಮಹಿಳೆ ಆನ್‌ಲೈನ್ ಗೇಮಿಂಗ್ ಚಟಕ್ಕೆ ಬಿದ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಒಂದು ವರ್ಷದ ಹಿಂದೆ 50,000 ರೂಪಾಯಿ ಕಳೆದುಕೊಂಡು 1.25 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಅಡ ಇಟ್ಟಿದ್ದರು. ಆ ಹಣವನ್ನು ಕೂಡ ಸೋತಿದ್ದು, ನಂತರ ಪತಿಗೆ ತಿಳಿಯದಂತೆ ಸಂಬಂಧಿಕರಿಂದ 1.75 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದಾರೆ.
ಬೆಂಬಿಡದ ವ್ಯಸನ, ಮನೆ ಬಿಟ್ಟ ಮಹಿಳೆ
ಮಹಿಳೆಯ ಗಂಡನಿಗೆ ಈ ವಿಚಾರ ಗೊತ್ತಾದ ಬಳಿಕ ಮತ್ತೆ ಆನ್‌ಲೈನ್‌ನಲ್ಲಿ ಲೂಡೋ ಆಡಲ್ಲ ಎಂದು ಭರವಸೆ ನೀಡಿದ್ದರು. ಆದರೆ ಜುಲೈ 19ರಂದು ಮಹಿಳೆ ಮತ್ತೆ ತನ್ನ ಚಿನ್ನಾಭರಣಗಳನ್ನು ಒತ್ತೆ ಇಟ್ಟು 1.20 ಲಕ್ಷ ರೂಪಾಯಿ ಪಡೆದುಕೊಂಡು ಜೂಜಾಡಿದ್ದಾರೆ, ಇದನ್ನು ತಿಳಿದ ಗಂಡ ಹೆಂಡತಿಯ ಪೋಷಕರಿಗೆ ವಿಷಯ ತಿಳಿಸಿ, ಆಟವಾಡದಂತೆ ಸಲಹೆ ನೀಡಿದ್ದಾರೆ.
ಮಕ್ಕಳ ಜೊತೆ ಮನೆ ಬಿಟ್ಟ ಮಹಿಳೆ
ಆಗಸ್ಟ್ 8ರಂದು ಪತಿ ತನ್ನ ಹಿರಿಯ ಮಗುವನ್ನು ಮಧ್ಯಾಹ್ನ 3 ಗಂಟೆಗೆ ಶಾಲೆಯಿಂದ ಮನೆಗೆ ಬಿಟ್ಟಿದ್ದಾರೆ ಎಂದು ವರದಿಯಾಗಿದೆ. ನಂತರ ಅವರು ಕೆಲಸಕ್ಕೆ ತೆರಳಿದರು. ಆದರೆ, ಸಂಜೆ 4.45ರ ಸುಮಾರಿಗೆ ಪತ್ನಿಗೆ ಕರೆ ಮಾಡಲು ಯತ್ನಿಸಿದಾಗ ಆಕೆ ಸ್ವೀಕರಿಸಲಿಲ್ಲ ಮತ್ತು ಫೋನ್ ಸ್ವಿಚ್ ಆಫ್ ಆಗಿತ್ತು. ಆತಂಕಗೊಂಡ ವ್ಯಕ್ತಿ ಮನೆಗೆ ಬಂದು ನೋಡಿದಾಗ ಬಾಗಿಲಿಗೆ ಬೀಗ ಹಾಕಾಲಾಗಿತ್ತು.
ತನ್ನ ಬಳಿ ಇದ್ದ ಬೇರೊಂದು ಕೀಯಿಂದ ಬಾಗಿಲು ತೆರೆದು ಒಳ ಪ್ರವೇಶಿಸಿದ್ದಾರೆ. ಲಿವಿಂಗ್ ರೂಮಿನಲ್ಲಿ ಪತ್ನಿ ಬರೆದಿಟ್ಟಿದ್ದ ಪತ್ರ ಸಿಕ್ಕಿದೆ, ಪತ್ನಿ ಬರೆದ ಪತ್ರದಲ್ಲಿ, "ನಾನು ನಿಮ್ಮ ಕ್ಷಮೆಯಾಚಿಸುತ್ತೇನೆ, ನಾನು ಮನೆಯಲ್ಲಿಟ್ಟ ಹಣವನ್ನು ತೆಗೆದುಕೊಳ್ಳುತ್ತಿದ್ದೇನೆ, ದಯವಿಟ್ಟು ನನ್ನನ್ನು ಕ್ಷಮಿಸಿ" ಎಂದು ಬರೆದಿದ್ದಾರೆ. ಮನೆಯಲ್ಲಿದ್ದ ಸ್ವಲ್ಪ ಹಣದ ಜೊತೆ ಮಕ್ಕಳನ್ನು ಕರೆದುಕೊಂಡು ಹೋಗಿದ್ದು, ಮಹಿಳೆ ಮತ್ತು ಮಕ್ಕಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.












Click it and Unblock the Notifications