ಗೃಹ ಸಚಿವ ಜಿ ಪರಮೇಶ್ವರ ರಾಜೀನಾಮೆ ಸನ್ನಿಹಿತ: ಪರಂ ಹೇಳಿದ್ದೇನು ?
ಗೃಹ ಸಚಿವ ಜಿ ಪರಮೇಶ್ವರ ಅವರು ಇಷ್ಟರಲ್ಲೇ ರಾಜೀನಾಮೆ ಕೊಡಲಿದ್ದಾರೆಯೇ, ಹೌದು ಜಿ ಪರಮೇಶ್ವರ ಅವರು ಮಾತನಾಡಿರುವುದು ನೋಡಿದರೆ, ಈ ರೀತಿಯ ಅನುಮಾನವೊಂದು ಸೃಷ್ಟಿಯಾಗಿದೆ. ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಆಕ್ಷೇಪಗಳು ಕೇಳಿ ಬರುತ್ತಲ್ಲೇ ಇವೆ.
ಇದೀಗ ಕೊಲೆ ಪ್ರಕರಣದ ಆರೋಪಿ ದರ್ಶನ್ ಗೆ ಕಾರಾಗೃಹದಲ್ಲಿ ರಾಜಾತಿಥ್ಯ ನೀಡಿದ ವಿಚಾರವು ಸಹ ತೀವ್ರ ಚರ್ಚೆಗೆ ಕಾರಣವಾಗಿದೆ. ಗೃಹ ಸಚಿವ ಜಿ. ಪರಮೇಶ್ವರ ಅವರ ಕಾರ್ಯವೈಖರಿಯ ಬಗ್ಗೆಯೂ ಕೆಲವೊಮ್ಮೆ ಅಸಮಾಧಾನ ಮೂಡಿದ್ದು ಇದೆ.

ಅಲ್ಲದೇ ಗೃಹ ಸಚಿವ ಜಿ. ಪರಮೇಶ್ವರ ಅವರು ಮೃದುಧೋರಣೆ ಅನುಸರಿಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಲ್ಲೇ ಇವೆ. ಇದೀಗ ಜಿ. ಪರಮೇಶ್ವರ ಅವರೇ ಪಕ್ಷ ನೀಡಿದ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿದ್ದೇನೆ ಎಂದು ಹೇಳುವ ಮೂಲಕ ನಿರ್ಗಮನದ ಮುನ್ಸೂಚನೆ ನೀಡಿದ್ದಾರೆಯೇ ಎನ್ನುವ ಪ್ರಶ್ನೆ ಎದುರಾಗಿದೆ.
ಹೋಮ್‌ಮಿನಿಸ್ಟರ್ ಪರಮೇಶ್ವರ ಹೇಳಿದ್ದೇನು ?
ನಾನು ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿ. ಪಕ್ಷದಲ್ಲಿ ಯಾವುದೇ ಕೆಲಸ ವಹಿಸಿದರು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದು ಗೃಹ ಸಚಿವ ಪರಮೇಶ್ವರ ಹೇಳಿದ್ದಾರೆ. ದೆಹಲಿ ಭೇಟಿ ವೇಳೆ ರಾಹುಲ್ ಗಾಂಧಿ ಅವರು ನನ್ನನ್ನು ಪ್ರತ್ಯೇಕವಾಗಿ ಕರೆದು ಮಾತನಾಡಿಸಿದ್ದು ನಿಜ. ನೀವೆಲ್ಲ ನೋಡಿದ್ದೀರಿ. ಪಕ್ಷ ವಹಿಸಿದ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ.
ಪಕ್ಷದ ವಿಚಾರದಲ್ಲಿ ಅವರು ನನಗೆ ಏನು ಹೇಳಬೇಕು, ಹೇಳಿದ್ದಾರೆ. ಅದನ್ನು ಬಿಟ್ಟು ಬೇರೆ ಯಾವ ವಿಚಾರವೂ ಚರ್ಚೆಯಾಗಿಲ್ಲ. ನಾನು ಪಕ್ಷದಲ್ಲಿ ಹಿರಿಯ ಇರಬಹುದು. ಆ ಪ್ರಶ್ನೆ ಮೂಡಿಲ್ಲ. ಅದರ ಬಗ್ಗೆ ನಾನು ಉತ್ತರವನ್ನು ನೀಡುವುದಿಲ್ಲ ಎಂದು ಹೇಳಿದರು.
ಸಿ.ಎಂ ಸಿದ್ದರಾಮಯ್ಯ ಅವರ ವಿರುದ್ಧದ ಪ್ರಾಸಿಕ್ಯೂಷನ್ ವಿಚಾರದ ಬಗ್ಗೆ ಮಾತನಾಡಿದ ಅವರು, ರಾಜ್ಯಪಾಲರ ನಿರ್ಣಯವನ್ನು ಕೋರ್ಟ್ ಪರಿಗಣಿಸುವುದಿಲ್ಲ ಎಂಬ ನಿರೀಕ್ಷೆ ಇದೆ.
ಸಿಎಂ ಅವರ ಸಹಿ, ಯಾವುದೇ ರೀತಿಯ ದಾಖಲೆಗಳಿಲ್ಲ. ರಿಜಿಸ್ಟ್ರೇಷನ್ ಅಲ್ಲಿಯೂ ಸಹ ಅವರ ಹೆಸರು ಉಲ್ಲೇಖವಾಗಿಲ್ಲ. ಇದೆಲ್ಲವನ್ನು ನ್ಯಾಯಾಲಯ ಗಮನಿಸಿಯೇ ತೀರ್ಮಾನ ಕೊಡುತ್ತದೆ ಎಂದುಕೊಂಡಿದ್ದೇನೆ ಎಂದರು.
ನ್ಯಾಯಾಲಯ ಏನೇ ತೀರ್ಪು ಕೊಟ್ಟರು, ಮುಖ್ಯಮಂತ್ರಿಯವರ ಜೊತೆ ಹೈಕಮಾಂಡ್ ನಿಲ್ಲಲಿದೆ. ನಾವೆಲ್ಲರು ಸಹ ಸಿಎಂ ಜೊತೆ ಇರುತ್ತೇವೆ. 29ರ ನಂತರದ ಬೆಳವಣಿಗೆ ಬಗ್ಗೆ ನೋಡೋಣ. ಕೋರ್ಟ್ ತೀರ್ಪು ಏನು ಬರುತ್ತದೆ ಎಂಬುದರ ಮೇಲೆ ಚರ್ಚೆ ಆಗಲಿದೆ ಎಂದರು.
ಮೈತ್ರಿ ಪಕ್ಷಗಳ ಪ್ರಾಸಿಕ್ಯೂಷನ್ ಗೆ ಒತ್ತಾಯಿಸಿ ರಾಜಭವನ ಚಲೋ ಬಗ್ಗೆ ಮಾತನಾಡಿದ ಅವರು, ರಾಜ್ಯಪಾಲರ ನಡೆಯ ಬಗ್ಗೆ ಒಂದಷ್ಟು ಚರ್ಚೆ ಮಾಡಿ ತೀರ್ಮಾನಗಳನ್ನು ಮಾಡಿದ್ದೇವೆ. ಪಕ್ಷದ ಅಧ್ಯಕ್ಷರು ಈಗಾಗಲೇ ತಿಳಿಸಿದ್ದಾರೆ. ಪಕ್ಷದ ವತಿಯಿಂದ ರಾಜ್ಯದಾದ್ಯಂತ ಪ್ರತಿಭಟನೆಯನ್ನು ಮಾಡುತ್ತೇವೆ ಎಂದರು.
ಎಲ್ಲ ಸಚಿವರು, ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ರಾಜ್ಯಪಾಲರಿಗೆ ಮನವಿ ಸಲ್ಲಿಸುವ ನಿರ್ಧಾರ ಮಾಡಿದ್ದೇವೆ. ಅಷ್ಟರೊಳಗೆ ಕೋರ್ಟ್‌ನಲ್ಲಿ ಏನೆಲ್ಲ ತೀರ್ಮಾನ ಆಗುತ್ತದೆ ಎಂಬುದನ್ನು ನೋಡಬೇಕಿದೆ. ಆನಂತರ ರಾಷ್ಟ್ರಪತಿಯವರನ್ನು ಭೇಟಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಆ.31ರಂದು ರಾಜಭವನ ಚಲೋ ಮಾಡುತ್ತೇವೆ.
ಶಾಸಕರು ಬಂದು ಹೇಳಿದರೆ ನಾವು ಕೇಳುತ್ತಿದ್ದೆವು ಅನ್ನಬಹುದು. ಹಾಗಾಗಿ ಆ ಪ್ರಯತ್ನವನ್ನು ಕೂಡ ನಾವು ಮಾಡುತ್ತಿದ್ದೇವೆ. ಬಿಜೆಪಿಯವರು ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡುವುದಾದರೆ, ನಾವು ರಾಷ್ಟ್ರಮಟ್ಟದಲ್ಲೇ ಮಾಡಬೇಕಲ್ಲವೇ ಎಂದು ಅವರು ಪ್ರಶ್ನಿಸಿದರು.
ನಮ್ಮ ಪಕ್ಷ ಇಂಡಿಪೆಂಡೆಂಟ್ ಆಗಿ ಮಾಡುತ್ತೀವಾ ಅಥವಾ ಇಂಡಿಯಾ ಒಕ್ಕೂಟ ಸೇರಿ ಮಾಡುವುದೇ ಎನ್ನುವ ವಿಚಾರವನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು.












Click it and Unblock the Notifications