Holiday: ಬೆಂಗಳೂರಿನ ಈ ಭಾಗದ ಕಾಲೇಜುಗಳಿಗೆ ಫೆಬ್ರವರಿ 13, 14ರಂದು ರಜೆ; ಕಾರಣವೇನು?
ಬೆಂಗಳೂರಿನ ಯಲಹಂಕ ವಾಯುನೆಲೆ ಸುತ್ತಮುತ್ತ ಇರುವ ಪದವಿ ಕಾಲೇಜುಗಳಿಗೆ ಫೆಬ್ರವರಿ 13 ಮತ್ತು 14 ರಂದು ರಜೆ ಘೋಷಣೆ ಮಾಡಲಾಗಿದೆ. ಈ ಎರಡೂ ದಿನ ಏರ್ ಶೋ ನಡೆಯುವ ಕಾರಣ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪದವಿ ಕಾಲೇಜುಗಳ ತರಗತಿ ರದ್ದುಗೊಳಿಸಿ ಕಾಲೇಜು ಶಿಕ್ಷಣ ಇಲಾಖೆ ಮಂಗಳವಾರ ಆದೇಶ ಹೊರಡಿಸಿದೆ.
ಯಲಹಂಕ ಮತ್ತು ಏರ್ ಫೋರ್ಸ್ ಸ್ಟೇಷನ್ ಸುತ್ತಮುತ್ತ ಇರುವ ಕಾಲೇಜುಗಳಿಗೆ ಈ ಆದೇಶ ಅನ್ವಯವಾಗಲಿದೆ. ಫೆಬ್ರವರಿ 13 ಮತ್ತು 14 ರಂದು ನಗರದ ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ಏರ್ ಶೋ ನಡೆಯಲಿದೆ. ಏಷ್ಯಾದ ಅತಿ ದೊಡ್ಡ ಏರ್ ಶೋ ಇದಾಗಿದ್ದು, ದೇಶ ವಿದೇಶದಿಂದ ಏರ್ ಶೋ ನೋಡಲು ಜನ ಆಗಮಿಸುತ್ತಾರೆ.

ಸಾರ್ವಜನಿಕರು ಮಾತ್ರವಲ್ಲದೆ ವಿವಿಧ ಕ್ಷೇತ್ರದ ಗಣ್ಯರು ಕೂಡ ಇದರಲ್ಲಿ ಭಾಗವಹಿಸಲಿದ್ದು, ಮುಂಜಾಗ್ರತಾ ಕ್ರಮವಾಗಿ ಸರ್ಕಾರಿ ಪ್ರಥಮ ದರ್ಜೆ, ಖಾಸಗಿ ಅನುದಾನಿತ ಕಾಲೇಜುಗಳ ತರಗತಿಗಳನ್ನು ರದ್ದು ಮಾಡುವಂತೆ ಶಿಕ್ಷಣ ಇಲಾಖೆ ಸೂಚನೆ ಕೊಟ್ಟಿದೆ.
ಬೆಂಗಳೂರು ಏರ್ ಶೋಗೆ ಸಕಲ ಸಿದ್ಧತೆ
ಏರೋ ಇಂಡಿಯಾ 2025 ಏರ್ ಶೋಗೆ ಭರದಿಂದ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಬೆಂಗಳೂರು ಏರ್ ಶೋ ತನ್ನದೇ ಆದ ಆಕರ್ಷಣೆಯನ್ನು ಹೊಂದಿದ್ದು ಎರಡು ವರ್ಷಕ್ಕೊಮ್ಮೆ ನಡೆಯುವ ಈ ಕಾರ್ಯಕ್ರಮ ಲಕ್ಷಾಂತರ ವೀಕ್ಷಕರನ್ನು ಆಕರ್ಷಿಸುತ್ತದೆ. ಬಾನಂಗಳದಲ್ಲಿ ವಿಮಾನಗಳ ರೋಮಾಂಚನಕಾರಿ ಸಾಹಸವನ್ನು ನೋಡುವುದು ಕಣ್ಣಿಗೆ ಹಬ್ಬವೇ ಸರಿ. ವರ್ಷಕ್ಕೊಮ್ಮೆ ಬರುವ ಇಂತಹ ಅವಕಾಶವನ್ನು ನೋಡಲು ಜನ ತುದಿಗಾಲಲ್ಲಿ ನಿಂತಿರುತ್ತಾರೆ.
ಏರ್ ಶೋ ನಡೆಯುವ ಸಂದರ್ಭದಲ್ಲಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಮತ್ತು ಹೋಗುವ ವಿಮಾನಗಳ ಹಾರಾಟದಲ್ಲಿ ಕೂಡ ವ್ಯತ್ಯಯವಾಗಲಿದೆ. ಏರ್ ಶೋ ನಡೆಯುವ ಸಮಯದಲ್ಲಿ ಇಲ್ಲಿ ಕಾರ್ಯಾಚರಣೆ ನಿಲ್ಲಿಸಲಾಗುತ್ತದೆ.
ಮುಂಜಾಗ್ರತಾ ಕ್ರಮವಾಗಿ ಏರ್ ಶೋ ನಡೆಯುವ ಯಲಹಂಕ ವಾಯುನೆಲೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಪ್ರತಿ ವರ್ಷ ಇದು ಸಾಮಾನ್ಯವಾಗಿದ್ದು ಯಲಹಂಕ ವಲಯದ ಏರ್ ಪೋರ್ಸ್ ಕೇಂದ್ರದಿಂದ 13 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಾಂಸದ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ. 26 ದಿನಗಳ ಕಾಲ ಈ ಪ್ರದೇಶದಲ್ಲಿ ಮಾಂಸ ಮಾರಾಟಕ್ಕೆ ಅವಕಾಶವಿರುವುದಿಲ್ಲ ಎಂದು ಬಿಬಿಎಂಪಿ ಆದೇಶ ಹೊರಡಿಸಿದ್ದು, ಆದೇಶ ಉಲ್ಲಂಘಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.












Click it and Unblock the Notifications