ಕೌರವನಿಗೂ ಅಂಟಿತು ಕೊರೊನಾವೈರಸ್; ಗೃಹ ದಿಗ್ಬಂಧನದಲ್ಲಿ ಬಿ.ಸಿ.ಪಾಟೀಲ್!
ಬೆಂಗಳೂರು, ಜುಲೈ.31: ಕೊರೊನಾವೈರಸ್ ಸೋಂಕು ಯಾವಾಗ, ಯಾರಿಗೆ, ಯಾವ ರೀತಿಯಲ್ಲಿ ಅಂಟಿಕೊಳ್ಳುತ್ತೆ ಎನ್ನುವುದನ್ನು ಊಹಿಸುವುದಕ್ಕೆ ಆಗುತ್ತಿಲ್ಲ. ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಿ.ಸಿ. ಪಾಟೀಲ್ ಅವರಿಗೂ ಕೊವಿಡ್-19 ಸೋಂಕು ತಗಲಿರುವುದು ಪತ್ತೆಯಾಗಿದೆ.
ಇದೀಗ ಬಂದ ವರದಿಯ ಪ್ರಕಾರ ನನಗೆ ಕೊರೋನಾವೈರಸ್ ಪಾಸಿಟಿವ್ ಎಂದು ದೃಢಪಟ್ಟಿದೆ. ಬೆಂಗಳೂರಿನ ನನ್ನ ನಿವಾಸದಲ್ಲಿ ಹೋಂ ಕ್ವಾರಂಟೈನ್ ಆಗುತ್ತಿದ್ದೇನೆ ಎಂದು ಸ್ವತಃ ಶಾಸಕ ಬಿ.ಸಿ ಪಾಟೀಲ್ ಅವರೇ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ.
ಕೊಪ್ಪಳ ಜಿಲ್ಲೆಗೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ನನ್ನ ಜೊತೆ ಆಗಮಿಸಿದ ಐದು ಜನ ಸಿಬ್ಬಂದಿಗೂ ಕೊರೊನಾವೈರಸ್ ಪಾಸಿಟಿವ್ ಎಂದು ವರದಿ ಬಂದಿದೆ. ಅಲ್ಲದೇ ಇತ್ತೀಚೆಗೆ ನನ್ನನ್ನು ಹಿರೇಕೆರೂರು ಹಾಗೂ ಕೊಪ್ಪಳ ಭಾಗದಲ್ಲಿ ಭೇಟಿಯಾದ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರು, ಯಾರಿಗಾದರೂ ಕೊವಿಡ್-19 ಲಕ್ಷಣ ಕಂಡುಬಂದಲ್ಲಿ ಕೂಡಲೇ ಪರೀಕ್ಷೆಗೆ ಒಳಗಾಗಿ ಎಂದು ಶಾಸಕ ಬಿ.ಸಿ ಪಾಟೀಲ್ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಯಾರೂ ಆತಂಕ ಪಡುವ ಅಗತ್ಯವಿಲ್ಲ, ಕೋವಿಡ್ ವಿರುದ್ಧ ಗೆಲ್ಲುವ ವಿಶ್ವಾಸವಿದೆ, ಜೊತೆಗೆ ನಿಮ್ಮೆಲ್ಲರ ಆಶೀರ್ವಾದ ಮತ್ತು ಹಾರೈಕೆ ಇರಲಿ ಎಂದಿದ್ದಾರೆ.

ಶಾಸಕರ ಪತ್ನಿ ಸೇರಿ ಐವರಿಗೆ ಕೊರೊನಾವೈರಸ್:
ಇನ್ನು, ಶಾಸಕ ಬಿ.ಸಿ.ಪಾಟೀಲ್ ಅವರಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗುವ ಮೊದಲೇ ತಮ್ಮ ಪತ್ನಿಗೆ ಸೋಂಕು ತಗಲಿರುವ ಬಗ್ಗೆ ಮಾಹಿತಿ ನೀಡಿದ್ದರು. "ನನ್ನ ಶ್ರೀಮತಿ, ಅಳಿಯ ಹಾಗೂ ಹಿರೇಕೆರೂರಿನ ನಿವಾಸದ ಸಿಬ್ಬಂದಿ ವರ್ಗದವರು ಸೇರಿದಂತೆ ಒಟ್ಟು ಐವರಿಗೆ ಕೊರೊನಾ ಪಾಸಿಟಿವ್ ಎಂದು ದೃಢಪಟ್ಟಿದೆ. ಅವರನ್ನು ನಿರ್ದಿಷ್ಟವಾದ ಕೊವಿಡ್ ಕೇರ್ ಸೆಂಟರ್ ಗೆ ಸೇರಿಸಲಾಗಿದೆ. ಅವರೆಲ್ಲ ಬೇಗ ಗುಣಮುಖರಾಗಿ ಬರಲಿ ಎಂದು ಪ್ರಾರ್ಥಿಸುತ್ತೇನೆ. ನಿಮ್ಮೆಲ್ಲರ ಹಾರೈಕೆಯೂ ಇರಲಿ" ಎಂದು ಶಾಸಕರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು.












Click it and Unblock the Notifications