ರಾಜಕಾಲುವೆ ಒತ್ತುವರಿ: ಬಾಗ್ಮನೆ ಟೆಕ್ ಪಾರ್ಕ್ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ಬ್ರೇಕ್ ..!
ಬೆಂಗಳೂರು,ಸೆ.17. ಬೆಂಗಳೂರು ನಗರದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ಎಚ್ಚೆತ್ತುಕೊಂಡಿರುವ ಬಿಬಿಎಂಪಿ, ರಾಜಕಾಲುವೆ ಒತ್ತುವರಿ ತೆರವಿಗೆ ಕಠಿಣ ಕ್ರಮಗಳನ್ನು ಕೈಗಳ್ಳುತ್ತಿದೆ.
ಅದರ ಭಾಗವಾಗಿ ಬಿಬಿಎಂಪಿ ಟೆಕ್ ಸಿಟಿ ಬಾಗ್ಮನೆ ಟೆಕ್ ಪಾರ್ಕ್ ವಿರುದ್ಧವೂ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದರಿಂದ ಕ್ರಮ ಜರುಗಿಸಲು ಮುಂದಾಗಿತ್ತು. ಆದರೆ ಇದೀಗ ಹೈಕೋರ್ಟ್ ಬಿಬಿಎಂಪಿ ಕ್ರಮಕ್ಕೆ ಬ್ರೇಕ್ ಹಾಕಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೀಡಿರುವ ನೋಟಿಸ್ ಗೆ ಪ್ರತಿಕ್ರಿಯಿಸಲು ಅವಕಾಶ ನೀಡುವವರೆಗೆ ಮಳೆನೀರು ಚರಂಡಿಗಳ (ಎಸ್‌ಡಬ್ಲ್ಯೂಡಿ) ಅತಿಕ್ರಮಣ ಆರೋಪದ ಮೇಲೆ ಎಂ/ಎಸ್ ಬಾಗ್ಮನೆ ಟೆಕ್ ಪಾರ್ಕ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಅಲ್ಲದೆ, ಭೂ ದಾಖಲೆಗಳು ಮತ್ತು ಸರ್ವೆ ಸೆಟ್ಲ್‌ಮೆಂಟ್ ಸಹಾಯಕ ನಿರ್ದೇಶಕರು ನಡೆಸಿದ ರಾಜಕಾಲುವೆಗಳ ಅತಿಕ್ರಮಣಗಳ ಸಮೀಕ್ಷೆಯ ವರದಿಗೆ ಉತ್ತರ ನೀಡುವಂತೆಯೂ ಅರ್ಜಿದಾರರಿಗೆ ಸೂಚನೆಯನ್ನು ನೀಡಿದೆ.
ಮೌಖಿಕ ಸೂಚನೆ: ರಾಜಕಾಲುವೆಗಳ ಆಪಾದಿತ ಅತಿಕ್ರಮಣದ ಆರೋಪದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಯಾವುದೇ ಸಮೀಕ್ಷೆ ನಡೆಸದೆ ಅಥವಾ ಮುಂಚಿತವಾಗಿಯೇ ಮಾಹಿತಿಯನ್ನು ನೀಡದೆ ಮೌಖಿಕ ಸೂಚನೆಗಳನ್ನು ನೀಡುವ ಮೂಲಕ ಟೆಕ್ ಪಾರ್ಕ್‌ನ ಕಾಂಪೌಂಡ್ ಗೋಡೆಗಳನ್ನು ಕೆಡವಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಮೆಸರ್ಸ್ ಬಾಗ್ಮನೆ ಡೆವಲ್ಲಪ್ಪರ್ಸ್ ಪ್ರವೈಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಹಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಮೆಸರ್ಸ್ ಪುರವಂಕರ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಪೂರ್ವ ಪಾರ್ಕ್ರಿಡ್ಜ್ ಎಂಬ ನೆರೆಯ ವಸತಿ ಹೌಸಿಂಗ್ ಪ್ರಾಜೆಕ್ಟ್ ಡೆವಲಪರ್‌ಗಳು ಮತ್ತು ನಿವಾಸಿಗಳ ವಿರುದ್ಧ ದಶಕಕ್ಕೂ ಹೆಚ್ಚು ಹಿಂದೆಯೇ ರಾಜಕಾಲುವೆಗಳ ಅತಿಕ್ರಮಣದ ಆರೋಪವನ್ನು ಹೊರಿಸಲಾಗಿದೆ ಮತ್ತು ಹಲವು ಬಾರಿ ನೋಟಿಸ್‌ಗಳನ್ನು ಸಹ ಸಲ್ಲಿಸಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಪೂರ್ವಾ ಪಾರ್ಕ್‌ರಿಡ್ಜ್‌ನಿಂದ ರಾಜಕಾಲುವೆ ಒತ್ತುವರಿ ಮಾಡಿರುವ ಕಾರಣ ತನ್ನ ಟೆಕ್ ಪಾರ್ಕ್‌ನಲ್ಲಿ ಪ್ರವಾಹದ ಬಗ್ಗೆ ಜೂನ್ 2022 ರಲ್ಲಿ ಬಿಬಿಎಂಪಿಗೆ ದೂರು ನೀಡಿರುವುದಾಗಿ ಅರ್ಜಿದಾರರು ಹೇಳಿದ್ದಾರೆ ಮತ್ತು ಆ ವಸತಿ ಪ್ರದೇಶದಲ್ಲಿನ ಕೆಲವು ವಿಲ್ಲಾಗಳ ಮಾಲೀಕರು ಹೈಕೋರ್ಟ್‌ಗೆ ಮೊರೆ ಹೋಗಿದ್ದರು, 2022 ರ ಆಗಸ್ಟ್‌ನಲ್ಲಿ ವಿಲ್ಲಾ ಮಾಲೀಕರು ತಮಗೆ ಪೂರ್ವ ಸೂಚನೆ ಇಲ್ಲದೆ ಸಮೀಕ್ಷೆ ನಡೆಸಲಾಗಿದೆ ಎಂದು ದೂರಿದ ಕಾರಣ ಹೊಸದಾಗಿ ಸಮೀಕ್ಷೆ ನಡೆಸುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಿತ್ತು ಎಂದು ಅರ್ಜಿದಾರರು ಹೇಳಿದ್ದಾರೆ.
ರಾಜಕಾಲುವೆ ಒತ್ತುವರಿ ಮಾಡಿರುವ ಆರೋಪದ ಮೇಲೆ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸುವ ಉದ್ದೇಶದಿಂದ ಬಿಬಿಎಂಪಿ ಅಧಿಕಾರಿಗಳು 2022ರ ಸೆ.9ರಂದು ಕೇವಲ ಮೌಖಿಕ ಸೂಚನೆ ನೀಡಿದ್ದಾರೆ, ಲಿಖಿತ ನೋಟಿಸ್ ನೀಡಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.
ನೋಟಿಸ್ ಜಾರಿ:
ಆದರೆ ಅರ್ಜಿದಾರರ ವಾದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ವಕೀಲರು, ಪೂರ್ವ ಪಾರ್ಕ್‌ರಿಡ್ಜ್ ನಲ್ಲಿರುವ ಅರ್ಜಿದಾರರು ಮತ್ತು ವಿಲ್ಲಾಗಳ ಮಾಲೀಕರಿಗೆ ನೋಟಿಸ್ ನೀಡಿದ ನಂತರ ಸಹಾಯಕ ನಿರ್ದೇಶಕರು ಸೆ.14ರಂದು ಸಮೀಕ್ಷೆ ನಡೆಸಿದ್ದಾರೆ. ಅದರ ಬೆನ್ನಲ್ಲೇ, ನೋಟಿಸ್ ನೀಡಲಾಗಿದೆ ಎಂದರು.
ಆದರೆ ನ್ಯಾಯಾಲಯ, ಸರ್ವೆ ವರದಿಯ ಪ್ರತಿಯನ್ನು ಅರ್ಜಿದಾರರಿಗೆ ಒದಗಿಸಿ, ರಾಜಕಾಲುವೆ ಒತ್ತುವರಿ ಮಾಡಿರುವುದು ಕಂಡುಬಂದಲ್ಲಿ ಸರ್ವೆ ವರದಿಗೆ ಪ್ರತಿಕ್ರಿಯಿಸಲು ಅವಕಾಶ ನೀಡಿ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಗೆ ಸೂಚಿಸಿದೆ.












Click it and Unblock the Notifications