Cockroach in Food: ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನಲ್ಲಿ ಊಟ ಮಾಡುವಾಗ ಹೈಕೋರ್ಟ್ ವಕೀಲೆಗೆ ಸಿಕ್ತು ಜಿರಳೆ!
ಬೆಂಗಳೂರು ಜನವರಿ 5: ಜಿರಳೆ.... ಜಿರಳೆ... ಜಿರಳೆ..... ಈ ಜಿರಳೆ ಅಡುಗೆ ಮನೆಯಲ್ಲಿ ಓಡಾಡುವುದಕ್ಕಿಂತ ಊಟದಲ್ಲಿ ಸತ್ತು ಸಿಗುವುದೇ ಹೆಚ್ಚಾಗಿದೆ.
ಹೋಮ್ ಡಿಲಿವರಿ ಫುಡ್‌ನಲ್ಲಿ ಜಿರಳೆ, ವಿಮಾನದ ಊಟದಲ್ಲಿ ಜಿರಳೆ, ರೈಲಿನಲ್ಲಿ ನೀಡುವ ಊಟದಲ್ಲೂ ಜಿರಳೆ... ಹೀಗೆ ಊಟಕ್ಕೆ ಉಪ್ಪಿನಕಾಯಿಯಂತೆ ಊಟದಲ್ಲಿ ಜಿರಳೆ ಸಿಗುವುದು ಸಾಮಾನ್ಯವಾಗಿಬಿಟ್ಟಿದೆ. ಈಗ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನಲ್ಲೂ ಊಟದಲ್ಲಿ ಜಿರಳೆ ಕಂಡು ಬಂದಿದೆ. ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನಲ್ಲಿ ಊಟ ಮಾಡುವಾಗ ಹೈಕೋರ್ಟ್ ವಕೀಲೆಗೆ ಜಿರಳೆ ಸಿಕ್ಕಿದೆ. ಗುರುವಾರ ಸಂಜೆ ನಡೆದ ಘಟನೆ ಇದಾಗಿದೆ.

ಬೆಂಗಳೂರಿನ ರಾಜಭವನ ರಸ್ತೆಯಲ್ಲಿರುವ ದಿ ಕ್ಯಾಪಿಟಲ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಕಳೆದ ದಿನ ಸಂಜೆ (ಜನವರಿ 4) ಹೈಕೋರ್ಟ್ ವಕೀಲೆ ದಿ ಕ್ಯಾಪಿಟಲ್ ಹೋಟೆಲ್‌ಗೆ ಊಟಕ್ಕಾಗಿ ಹೋಗಿದ್ದರು. ಈ ವೇಳೆ ಪನ್ನೀರ್ ಗ್ರೇವಿಯನ್ನು ಆರ್ಡರ್ ಮಾಡಿದ್ದರು. ಆದರೆ ಇದನ್ನು ಸೇವಿಸುವಾಗ ಅವರಿಗೆ ಜಿರಳೆ ಕಂಡು ಬಂದಿದೆ. ಇದರಿಂದ ವಕೀಲೆ ಬೆಚ್ಚಿಬಿದ್ದಿದ್ದಾರೆ.
ಹೈಕೋರ್ಟ್ ವಕೀಲೆ ಶೀಲಾ ಅವರಿಗೆ ಪ್ರತಿಷ್ಠಿತ ಹೋಟೆಲ್ ಊಟದಲ್ಲಿ ಜಿರಳೆ ಕಂಡುಬಂದಿದೆ. ಈ ವೇಳೆ ಕೋಪಗೊಂಡ ಅವರು ಹೋಟೆಲ್ ಸಿಬ್ಬಂದಿಗೆ ತರಾಟೆ ತೆಗೆದುಕೊಂಡಿದ್ದಾರೆ. ಆಗ ಸಿಬ್ಬಂದಿ ಉಡಾಫೆ ಮಾತನಾಡಿ ಬೇರೆ ಊಟ ಕೊಡುವುದಾಗಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ಶೀಲಾ ಅವರು ನೇರ ಹೋಟೆಲ್ ಕಿಚನ್‌ಗೆ ತೆರಳಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.

ಹೋಟೆಲ್ ಕಿಚನ್‌ಗೆ ತೆರಳುತ್ತಿದ್ದಂತೆ ಶೀಲಾ ಅವರು ಮತ್ತೊಮ್ಮೆ ಶಾಕ್ ಆಗಿದ್ದಾರೆ. ಆ ಹೋಟೆಲ್ ಕಿಚನ್ ಅವಸ್ಥೆ ಕಂಡು ವಾಕರಿಕೆ ಉಂಟಾಗಿದೆ. ಕಿಚನ್ ಸಂಪೂರ್ಣ ಗಲೀಜು ತುಂಬಿಕೊಂಡಿತ್ತು. ಇದನ್ನು ಕಂಡು ರಸ್ತೆ ಬದಿ ಹೋಟೆಲ್‌ಗಳೇ ಲೇಸು ಎಂದು ಕಿರುಚಾಡಿದ್ದಾರೆ. ಜೊತೆಗೆ ಹೋಟೆಲ್ ಬಗ್ಗೆ ದೂರು ನೀಡಿದ್ದಾರೆ.
ಮತ್ತೊಂದು ವಿಚಾರ ಅಂದರೆ ವಕೀಲೆ ಶೀಲಾ ಅವರ ಕರೆ ಸ್ವೀಕರಿಸಿ ಮಾತನಾಡಿದ ಫುಡ್ ಇನ್ಸ್‌ಪೆಕ್ಟರ್ ಸುಬ್ರಹ್ಮಣ್ಯ ಕೂಡ ಉಡಾಫೆ ಮಾತನಾಡಿದ್ದಾರೆ. ಅವರು ಕೂಡ ಈ ಬಗ್ಗೆ ನಿರ್ಲಕ್ಷ್ಯ ತೋರಿ ಬೇಜವಬ್ದಾರಿತನದ ಮಾತುಗಳನ್ನಾಡಿದ್ದಾರೆ. ನಾಳೆ ಬಂದು ಪರಿಶೀಲಿಸುವುದಾಗಿ ಹೇಳಿದ್ದಾರೆ. ಇದರಿಂದ ಸಿಡಿದ ಶೀಲಾ ಅವರು ಘಟನೆ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ರಸ್ತೆಬದಿ ಅಂಗಡಿಗಿಂತ ಸ್ಟಾರ್ ಹೋಟೆಲ್‌ಗಳೇ ಅದ್ವಾನವಾಗಿವೆ. ಹೀಗಾಗಿ ಸ್ಟಾರ್ ಹೋಟೆಲ್‌ನಲ್ಲಿ ಊಟ ಮಾಡುವವರೆ ಹುಷಾರ್ ಆಗಿರಿ.












Click it and Unblock the Notifications