ಬಿಬಿಎಂಪಿ ಚುನಾವಣೆ ವೇಳಾಪಟ್ಟಿಗೆ ಶುಕ್ರವಾರದ ಗಡುವು
ಬೆಂಗಳೂರು, ಜುಲೈ 13 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ವೇಳಾಪಟ್ಟಿಯ ಕುರಿತು ಶುಕ್ರವಾರದೊಳಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಹೈಕೋರ್ಟ್ ರಾಜ್ಯ ಚುನಾವಣಾ ಆಯೋಗಕ್ಕೆ ಆದೇಶ ನೀಡಿದೆ. ಜುಲೈ ಅಂತ್ಯದೊಳಗೆ ವೇಳಾಪಟ್ಟಿ ಪ್ರಕಟಿಸುತ್ತೇವೆ ಎಂದು ಆಯೋಗ ಕೋರ್ಟ್‌ಗೆ ಹೇಳಿಕೆ ನೀಡಿದೆ.
ಸಿ.ವಿ.ಮುರಳಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಅವರ ನೇತೃತ್ವದ ವಿಭಾಗೀಯ ಪೀಠ, ಶುಕ್ರವಾರದೊಳಗೆ ಚುನಾವಣೆ ವೇಳಾಪಟ್ಟಿ ಕುರಿತು ಅಂತಿಮ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದೆ. [ಬಿಬಿಎಂಪಿ ಚುನಾವಣೆ ಮುಂದೂಡಿದ ಸುಪ್ರೀಂಕೋರ್ಟ್]

ಮೊದಲು ಪ್ರಕಟಿಸಿದ ವೇಳಾಪಟ್ಟಿಯನ್ನು ವಾಪಸ್ ಪಡೆದಿದ್ದು ಏಕೆ? ಎಂದು ಹೈಕೋರ್ಟ್ ಚುನಾವಣಾ ಆಯೋಗದ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. ಸುಪ್ರೀಂಕೋರ್ಟ್ ಆದೇಶದ ಅನ್ವಯ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆಯೋಗದ ಪರ ವಕೀಲರು ಕೋರ್ಟ್‌ಗೆ ಮಾಹಿತಿ ನೀಡಿದರು. [ಪಾಲಿಕೆ ಚುನಾವಣೆ ವೇಳಾಪಟ್ಟಿ ವಾಪಸ್]
ಈಗ ಯಾವುದೇ ತೊಡಕಿಲ್ಲ ಜುಲೈ 17ರ ಶುಕ್ರವಾರದೊಳಗೆ ಚುನಾವಣೆಯ ವೇಳಾಪಟ್ಟಿಯ ಬಗ್ಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳಿ ಎಂದು ಕೋರ್ಟ್ ಸೂಚನೆ ನೀಡಿತು. ಆಯೋಗದ ಪರ ವಕೀಲರು ಮುಚ್ಚಿದ ಲಕೋಟೆಯಲ್ಲಿ ಸಂಭಾವ್ಯ ವೇಳಾಪಟ್ಟಿಯ ಪ್ರತಿಯನ್ನು ಕೋರ್ಟ್‌ಗೆ ಸಲ್ಲಿಸಿದರು. [ಬಿಬಿಎಂಪಿಯನ್ನು 5 ಭಾಗ ಮಾಡಿ]
ಜುಲೈ ಅಂತ್ಯದೊಳಗೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುತ್ತೇವೆ ಎಂದು ಆಯೋಗದ ಪರ ವಕೀಲರು ಕೋರ್ಟ್‌ಗೆ ಹೇಳಿಕೆ ನೀಡಿದರು. ಬಿಬಿಎಂಪಿ ಚುನಾವಣೆ ದಿನಾಂಕ ಎಂದು ಪ್ರಕಟವಾಗಲಿದೆ? ಎಂಬುದು ಸದ್ಯದ ಪ್ರಶ್ನೆ.
ರಾಜ್ಯ ಚುನಾವಣಾ ಆಯೋಗ ಜುಲೈ 28ರಂದು ಬಿಬಿಎಂಪಿ ಚುನಾವಣೆ ನಡೆಸಲಾಗುತ್ತದೆ ಎಂದು ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಆದರೆ, ಸುಪ್ರೀಂಕೋರ್ಟ್ ಚುನಾವಣೆಯನ್ನು 8 ವಾರಗಳ ಕಾಲ ಮುಂದೂಡಿ, ಹೊಸ ವೇಳಾಪಟ್ಟಿ ಪ್ರಕಟಿಸುವಂತೆ ಆಯೋಗಕ್ಕೆ ಸೂಚನೆ ನೀಡಿತ್ತು.












Click it and Unblock the Notifications