ಬೆಂಗಳೂರಿನ ಜನಪ್ರಿಯ ಚಿತ್ರಮಂದಿರದ ಮಹಿಳೆಯರ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಪತ್ತೆ
ಬೆಂಗಳೂರಿನ ಮಡಿವಾಳದಲ್ಲಿರುವ ಸಂಧ್ಯಾ ಥಿಯೇಟರ್‌ನಲ್ಲಿ ಅಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಥಿಯೇಟರ್‌ನಲ್ಲಿರುವ ಮಹಿಳೆಯರ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಪತ್ತೆಯಾಗಿದೆ. ಕ್ಯಾಮೆರಾ ಕಂಡು ಹೆಣ್ಣುಮಕ್ಕಳು ಬೆಚ್ಚಿಬಿದ್ದಿದ್ದಾರೆ. ವಿಕೃತ ಕಾಮುಕನೊಬ್ಬ ರಹಸ್ಯ ಕ್ಯಾಮೆರಾವನ್ನು ಅಳವಡಿಸಿ ಥಿಯೇಟರ್‌ಗೆ ಬರುವ ಮಹಿಳೆಯರ ವಿಡಿಯೋ ಸೆರೆಹಿಡಿಯುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶೌಚಾಲಯಕ್ಕೆ ತೆರಳಿದ್ದ ಮಹಿಳೆಯರು ಮತ್ತು ಯುವತಿಯರು ಕ್ಯಾಮೆರಾವನ್ನು ಗಮನಿಸಿದ ತಕ್ಷಣ ಆಘಾತಕ್ಕೊಳಗಾಗಿದ್ದು, ವಿಷಯವನ್ನು ಸಾರ್ವಜನಿಕರಿಗೆ ತಿಳಿಸಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳೀಯರು ಆ ಆರೋಪಿಯನ್ನು ಹಿಡಿದು ಥಳಿಸಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದಾರೆ. ಆರೋಪಿಯ ಗುರುತು, ಈ ಕೃತ್ಯದ ಹಿಂದಿನ ಉದ್ದೇಶ ಹಾಗೂ ಈ ಹಿಂದೆ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆಯೇ ಅಥವಾ ಇದು ಮೊದಲ ಅಪರಾಧವೇ ಎಂಬುದರ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಮಡಿವಾಳದ ಸಂಧ್ಯಾ ಚಿತ್ರಮಂದಿರದಲ್ಲಿ ಮಹಿಳೆಯರ ಶೌಚಾಲಯದಲ್ಲಿ ಕ್ಯಾಮೆರಾ ಇಟ್ಟು ಅವರ ಖಾಸಗಿತನಕ್ಕೆ ಧಕ್ಕೆ ತರಲಾಗಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ. ಮೊದಲಿಗೆ ಮಹಿಳೆಯೊಬ್ಬರ ಕೈಗೆ ಶೌಚಾಲಯದಲ್ಲಿ ಅಡಗಿಸಿಟ್ಟಿದ್ದ ಕ್ಯಾಮೆರಾ ಸಿಕ್ಕಿಬಿದ್ದಿದೆ. ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಮಹಿಳೆಯರಿಂದ ಸ್ಥಳದಲ್ಲಿ ಭಾರಿ ಗದ್ದಲ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.
ಆರೋಪಿ ಸಿಕ್ಕಿಬಿದ್ದಿದ್ದೇಗೆ?
ಈ ಚಿತ್ರಮಂದಿರದಲ್ಲಿ ತೆಲುಗು ಭಾಷೆಯ "ನುವ್ವು ನಾಕು ನಚ್ಚಾವು" ಸಿನಿಮಾ ಪ್ರದರ್ಶನವಾಗುತ್ತಿತ್ತು. ತೆಲುಗು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ನೋಡಲು ಬಂದಿದ್ದರು. ಈ ವೇಳೆ ಶೌಚಾಲಯಕ್ಕೆ ಹೋದ ಮಹಿಳೆಯರಿಗೆ ಅಲ್ಲಿದ್ದ ಸೀಕ್ರೆಟ್ ಕ್ಯಾಮೆರಾ ಇರುವುದು ಗೊತ್ತಾಗಿ ಕೂಡಲೇ ಅಲ್ಲಿದ್ದವರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಕ್ಯಾಮರಾ ಇಟ್ಟಿದ್ದ ಆರೋಪಿ ಯುವಕನನ್ನು ಹಿಡಿದಿದ್ದು, ಗೂಸಾ ಕೊಟ್ಟಿದ್ದಾರೆ. ಇದು ಅತ್ಯಂತ ಗಂಭೀರ ಅಪರಾಧವಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ ಎಲ್ಲಿದೆ? ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂಬ ಒತ್ತಾಯ ಕೇಳಿಬಂದಿದೆ.
On Jan 4, 2026: A guy caught filming videos in ladies washroom at SANDHYA THEATRE, Madiwala, Bengaluru 😡
— ಸನಾತನ (𑀲𑀦𑀸𑀢𑀦) (@sanatan_kannada) January 5, 2026
Hidden camera found during movie screening – youth detained after public outrage.
Law should treat such people very strictly!#WomenSafety #Voyeurism #Bengaluru… pic.twitter.com/dWc1bnjL2O
ಥಿಯೇಟರ್‌ಗಳಲ್ಲಿ ಮಹಿಳಾ ಸಿಬ್ಬಂದಿ ನೇಮಿಸಿ
ಮಹಿಳಾ ಶೌಚಾಲಯಗಳು, ಟ್ರಯಲ್ ರೂಮ್‌ಗಳು, ಬಟ್ಟೆ ಬದಲಾವಣೆ ಕೊಠಡಿಗಳಲ್ಲಿ ರಹಸ್ಯ ಕ್ಯಾಮರಾ ಅಳವಡಿಸುವುದನ್ನು ಗಂಭೀರ ಅಪರಾಧವಾಗಿ ಪರಿಗಣಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಮಹಿಳಾ ಸುರಕ್ಷತಾ ಕಾನೂನುಗಳಡಿ ಶೀಘ್ರ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳ ವ್ಯವಸ್ಥೆ ತರಬೇಕು. ಇಂತಹ ಕೃತ್ಯಗಳಲ್ಲಿ ಸಿಕ್ಕಿಬಿದ್ದವರಿಗೆ ಜಾಮೀನು ಕಠಿಣಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಾಲ್, ಥಿಯೇಟರ್, ಬಸ್ ನಿಲ್ದಾಣ, ರೈಲು ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಆಂಟಿ-ಸ್ಪೈ ಕ್ಯಾಮೆರಾ ಡಿಟೆಕ್ಟರ್ ಸಾಧನಗಳ ಬಳಕೆಯನ್ನು ಕಡ್ಡಾಯಗೊಳಿಸಬೇಕು. ಸಾರ್ವಜನಿಕ ಶೌಚಾಲಯಗಳಲ್ಲಿ ನಿಯಮಿತವಾಗಿ ಸುರಕ್ಷತಾ ಪರಿಶೀಲನೆ ಮಾಡಬೇಕು. ಮಹಿಳಾ ಸಿಬ್ಬಂದಿ ಮೂಲಕ ನಿಯಮಿತ ತಪಾಸಣೆ ನಡೆಸಬೇಕು. ಥಿಯೇಟರ್, ಮಾಲ್‌ಗಳ ಮಾಲೀಕರಿಗೆ ಸುರಕ್ಷತಾ ಮಾನದಂಡ ಪಾಲನೆ ಕಡ್ಡಾಯಗೊಳಿಸಿ, ನಿಯಮ ಉಲ್ಲಂಘಿಸಿದರೆ ದಂಡ ಅಥವಾ ಪರವಾನಗಿ ರದ್ದು ಮಾಡುವ ಎಚ್ಚರಿಕೆ ನೀಡಬೇಕು ಎಂದಿದ್ದಾರೆ.












Click it and Unblock the Notifications