6 ವರ್ಷ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ: ಕಣ್ಣು ತಪ್ಪಿಸಿ ಓಡಾಡಿದ್ರೆ ಮನೆಗೆ ಬರ್ತಾರೆ ಪೊಲೀಸರು!
ಬೆಂಗಳೂರು ಫೆಬ್ರವರಿ 10: ಬೆಂಗಳೂರು ನಗರದಲ್ಲಿ ಇತ್ತೀಚಿಗೆ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ. ಹೀಗಾಗಿ ಮುಂಜಾಗೃತ ದೃಷ್ಟಿಯಿಂದ ಆರು ವರ್ಷದ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಜೊತೆಗೆ ಸಂಚಾರ ನಿಯಮಗಳನ್ನು ಅನುಸರಿಸದವರ ವಿರುದ್ಧ ಸೂಕ್ತ ಕ್ರಮ ಹಾಗೂ ಕಟ್ಟುನಿಟ್ಟಾಗಿ ದಂಡ ವಿಧಿಸಲು ಸಂಚಾರಿ ಪೊಲೀಸರು ಮುಂದಾಗಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ 6 ವರ್ಷ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿ ಬೆಂಗಳೂರು ಸಂಚಾರಿ ಪೊಲೀಸರು ಆದೇಶ ಹೊರಡಿಸಿದ್ದಾರೆ. ಶಾಲೆಗೆ ಬಿಡುವಾಗ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯವಾಗಿ ಹಾಕಬೇಕು ಎಂದು ಸಂಚಾರಿ ಪೊಲೀಸರು ಸೂಚನೆ ನೀಡಿದ್ದಾರೆ.

ಮಕ್ಕಳನ್ನು ಶಾಲೆಗೆ ಬಿಡುವಾಗ ಪೋಷಕರು ತಮ್ಮ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ಮೂರಕ್ಕೂ ಹೆಚ್ಚು ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗೋ ಪೋಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದಾಗಿ ಸಂಚಾರಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಖಾಸಗಿ ಕಾರು, ಶಾಲಾ ಆಟೋ, ಟಿಟಿ ವಾಹನಗಳಲ್ಲಿ ನಿಗದಿ ಮಿತಿಗಿಂತ ಹೆಚ್ಚಿನ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವಂತಿಲ್ಲ. ಒಂದು ವೇಳೆ ನಿಯಮ ಮೀರಿದರೆ ಅಂಥವರ ವಿರುದ್ಧವೂ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.
ಇನ್ನೂ ಕೆಲ ವಾಹನ ಸವಾರರು ರಸ್ತೆ ನಿಯಮವನ್ನು ಅನುಸರಿಸುವುದಿಲ್ಲ. ನಿಯಮ ಮೀರುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಜೊತೆಗೆ ಇಂಥವರು ರಸ್ತೆಯಲ್ಲಿ ಪೊಲೀಸರು ಇದ್ದರೂ ಕೇರ್ ಮಾಡುವುದಿಲ್ಲ. ಪ್ರತಿದಿನ ಸಿಗ್ನಲ್ ಇದ್ದರು ರಸ್ತೆ ದಾಟುವುದು, ಹೆಲ್ಮೆಟ್ ಹಾಕದೇ ಪ್ರಯಾಣ ಮಾಡುವುದು ಹೀಗೆ ಸಂಚಾರ ನಿಯಮ ಉಲ್ಲಂಘನೆ ಮಾಡಿ ನಮಗೂ ಅದಕ್ಕೂ ಸಂಬಂಧವೇ ಇಲ್ಲ ಅನ್ನೋ ರೀತಿ ಇದ್ದಾರೆ. ಇಂಥವರ ವಿರುದ್ಧ ಸಿಲಿಕಾನ್ ಸಿಟಿ ಪೊಲೀಸರು ಬಿಸಿ ಮುಟ್ಟಿಸಲಿದ್ದಾರೆ. ಮನೆ ಮನೆಗೆ ತೆರಳಿ ದಂಡ ವಸೂಲಿ ಮಾಡೋ ಕೆಲಸ ಶುರು ಮಾಡಿದ್ದಾರೆ.
ಬೆಂಗಳೂರಲ್ಲಿ ಪ್ರತಿ ದಿನ 1.2 ಕೋಟಿ ವಾಹನಗಳು ಸಂಚರಿಸುತ್ತವೆ. ಮತ್ತು 2,300 ಹೊಸ ವಾಹನಗಳು ಸೇರ್ಪಡೆಯಾಗುತ್ತಿದೆ. ಹೀಗೆ ಬರುವ ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಟನೆ ಮಾಡ್ತಿದ್ದಾರೆ. ದಂಡ ಹೊಂದಿರೊ ವಾಹನ ಸವಾರರನ್ನು ಪತ್ತೆ ಮಾಡಿ ಮನೆಗೆ ತೆರಳಿ ದಂಡದ ಹಣ ವಸೂಲಿ ಮಾಡ್ತಿದ್ದಾರೆ.ಬೆಂಗಳೂರಲ್ಲಿ 50 ಸಾವಿರಕ್ಕೂ ಅಧಿಕ ದಂಡ ಹೊಂದಿರೊ 2681 ವಾಹನ ಇದ್ದು ದಂಡ ವಸೂಲಿ ಪ್ರಕ್ರಿಯೆ ಕೂಡ ಆರಂಭವಾಗಿದೆ. ಇದುವರೆಗೆ 120 ಜನರಿಂದ ದಂಡ ವಸೂಲಿ ಕೂಡ ಮಾಡಲಾಗಿದೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಆಧರಿತ ಕ್ಯಾಮೆರಾಗಳ ಕಣ್ತಪ್ಪಿಸಿ ಸಂಚಾರ ನಿಯಮ ಉಲ್ಲಂಘಿಸುತ್ತಿರುವ ವಾಹನ ಸವಾರರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸ್ ವಿಭಾಗ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ನಿಯಮ ಉಲ್ಲಂಘಿಸುವವರಿಗೆ ದಂಡದ ಬಿಸಿ ಮುಟ್ಟಿಸುತ್ತಿದೆ.
ಕಳೆದ ಹತ್ತು ದಿನಗಳಿಂದ ನಗರಾದ್ಯಂತ ಫುಟ್‌ಪಾತ್ ರೈಡಿಂಗ್, ಅಪ್ರಾಪ್ತರ ವಾಹನ ಚಾಲನೆ, ನೀರಿನ ಟ್ಯಾಂಕರ್, ನಂಬರ್ ಪ್ಲೇಟ್ ಮರೆ ಮಾಚುತ್ತಿರುವ ವಾಹನ ಸವಾರರನ್ನು ಪತ್ತೆ ಹಚ್ಚಿ ಸಂಚಾರ ಪೊಲೀಸರು ಕೇಸ್ ದಾಖಲಿಸುತ್ತಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ನಿಯಮ ಉಲ್ಲಂಘಿಸಿದ ಸವಾರರ ಬಳಿ ಸ್ಥಳದಲ್ಲಿಯೇ ದಂಡ ವಸೂಲು ಮಾಡುತ್ತಿದ್ದಾರೆ. ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದವರ ವಿರುದ್ಧ ಒಂದೇ ದಿನ 483 ಕೇಸ್ ದಾಖಲಿಸಿದ್ದಾರೆ. ಜತೆಗೆ, ಬೈಕ್‌ಗಳ ಸೈಲೆನ್ಸರ್‌ಗಳಲ್ಲಿ ಮಾರ್ಪಾಡು ಮಾಡಿಕೊಂಡಿರುವ ಸವಾರರನ್ನು ಪತ್ತೆ ಹಚ್ಚಿ 137 ಕೇಸ್ ದಾಖಲಿಸಿ, ದಂಡ ಕಟ್ಟಿಸಿದ್ದಾರೆ.












Click it and Unblock the Notifications