ವಾಹನ ಸವಾರರೇ ಇತ್ತ ಗಮನಿಸಿ, ಜುಲೈ 15 ರವರೆಗೆ ಹೆಬ್ಬಾಳ ಸರ್ವಿಸ್ ರಸ್ತೆ ಬಂದ್
ಬೆಂಗಳೂರು, ಜುಲೈ. 02: ಹೆಬ್ಬಾಳ ಮೇಲ್ಸೇತುವೆಗೆ ಮತ್ತೊಂದು ರ್‍ಯಾಂಪ್ ಅಳವಡಿಸುವ ಕಾಮಗಾರಿ ನಡೆಯುತ್ತಿರುವುದರಿಂದ ಕಳೆದ ಎರಡು ವಾರಗಳಿಂದ ರಸ್ತೆಯಲ್ಲಿ ಸಂಚಾರಕ್ಕೆ ಜಾಗ ಕಿರಿದಾಗಿದೆ. ಹೆಬ್ಬಾಳ ಮೇಲ್ಸೇತುವೆ ನಂತರ ರಸ್ತೆ ಬಂದ್ ಆಗಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಇದೇ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಮುಂಭಾಗದ ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಹೆಬ್ಬಾಳ ಪೊಲೀಸ್ ಠಾಣೆ ಮುಂಭಾಗದಿಂದ ಬೆಂಗಳೂರು ಕಡೆಗೆ ಹಾದು ಹೋಗುವ ಸರ್ವಿಸ್ ರಸ್ತೆ ಶುಕ್ರವಾರದಿಂದ ಸಂಚಾರ ಸಂಪೂರ್ಣ ಬಂದ್ ಆಗಿರುವುದರಿಂದ ಹೆಬ್ಬಾಳದಲ್ಲಿ ಟ್ರಾಫಿಕ್ ಸಮಸ್ಯೆ ಮುಂದುವರಿದಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೊಸ ರ‍್ಯಾಂಪ್ ಅಳವಡಿಕೆ ಕಾಮಗಾರಿ ಕೈಗೆತ್ತಿಕೊಂಡಿದ್ದು, ಎಸ್ಟೀಮ್ ಮಾಲ್‌ನಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆಯವರೆಗೆ ವಿಸ್ತರಿಸಲಿದೆ.

ಹೆಬ್ಬಾಳ ರಸ್ತೆಯ ಜನಸಂದಣಿಯನ್ನು ಕಡಿಮೆ ಮಾಡಲು ತೆಗೆದುಕೊಂಡ ಕ್ರಮಗಳಲ್ಲಿ ಅಸ್ತಿತ್ವದಲ್ಲಿರುವ ಮೇಲ್ಸೇತುವೆಗೆ ಇಳಿಜಾರುಗಳನ್ನು ಸೇರಿಸುವುದು ಒಂದಾಗಿದೆ. ಹೀಗಾಗಿಯೇ 700 ಅಡಿ ಉದ್ದದ ಮತ್ತೊಂದು ರ್‍ಯಾಂಪ್ ಅಳವಡಿಕೆ ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾಮಗಾರಿ ನಡೆಸುತ್ತಿದೆ. ಜುಲೈ 15ರ ವರೆಗೂ ಕೆಲಸ ನಡೆಯಲಿರುವ ಕಾರನ ಸರ್ವಿಸ್ ರಸ್ತೆ ಬಂದ್ ಮಾಡಲಾಗುತ್ತದೆ.
"ಸಂಚಾರ ಸಲಹೆ. ಹೆಬ್ಬಾಳ ಫ್ಲೈಓವರ್ ರ‍್ಯಾಂಪ್ ನಿರ್ಮಾಣದಿಂದಾಗಿ ಹೆಬ್ಬಾಳದಲ್ಲಿ (ನಗರದ ಕಡೆಗೆ) ಸರ್ವಿಸ್ ರಸ್ತೆಯನ್ನು ಮುಚ್ಚಲಾಗಿದ್ದು. ನಗರದ ಕಡೆಗೆ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆವಿದ್ದು. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಬದಲಿ ಮಾರ್ಗದಲ್ಲಿ ಚಲಿಸಲು ಕೋರಿದೆ. ಈ ಕೆಲಸವು 15ನೇ ಜುಲೈ 2023 ರವರೆಗೆ ಮುಂದುವರಿಯುತ್ತದೆ. ದಯಮಾಡಿ ಸಹಕರಿಸಿ." ಎಂದು ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಮಾಹಿತಿ ನೀಡಿದೆ.
ಕನಿಷ್ಠ ಒಂದು ತಿಂಗಳ ಕಾಲ ಸರ್ವೀಸ್ ರಸ್ತೆಯನ್ನು ಮುಚ್ಚಲಾಗುವುದು ಎಂದು ಸಂಚಾರ (ಉತ್ತರ) ಡಿಸಿಪಿ ಸಚಿನ್ ಘೋರ್ಪಡೆ ತಿಳಿಸಿದ್ದಾರೆ. "ರಸ್ತೆಯಲ್ಲಿ ಎರಡು ಭಾಗಗಳಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಬಿಡಿಎ ಮತ್ತು ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಲು ನಾವು ಪ್ರಯತ್ನಿಸುತ್ತಿದ್ದೇವೆ, ಆದರೆ ತಾಂತ್ರಿಕವಾಗಿ ಅದು ಸಾಧ್ಯವಿಲ್ಲ ಎಂದು ಅವರು ಹೇಳುತ್ತಿದ್ದಾರೆ. ಅದು ಆಗದಿದ್ದಲ್ಲಿ ಸೋಮವಾರದಿಂದ ಭೂಪಸಂದ್ರದಿಂದ ಹೆಬ್ಬಾಳ ಮೇಲ್ಸೇತುವೆ ಕೆಳಗಿನ ನಗರಕ್ಕೆ ಬರುವ ವಾಹನ ಸಂಚಾರವನ್ನು ಸಂಜಯನಗರದ ಕಡೆಗೆ ತಿರುಗಿಸಲಾಗುವುದು. ಅಲ್ಲಿಂದ ಅವರು ನಗರದೊಳಗೆ ಬರಬಹುದು" ಎಂದು ಸಚಿನ್ ಘೋರ್ಪಡೆ ಹೇಳಿದ್ದಾರೆ.
ಇನ್ನೂ ಒಂದು ವರ್ಷದವರೆಗೆ ರ್‍ಯಾಂಪ್‌ಗಳನ್ನು ಸೇರಿಸುವ ಕೆಲಸ ನಡೆಯಲಿದ್ದು, ಅದಕ್ಕೆ ತಕ್ಕಂತೆ ಹೆಬ್ಬಾಳ ಮೇಲ್ಸೇತುವೆ ಬಳಿ ಸಂಚಾರ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications