Hebbal Flyover: ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಕಾಮಗಾರಿ ಮತ್ತೆ ಆರಂಭ, ತಗಲುವ ವೆಚ್ಚ ಎಷ್ಟು ಕೋಟಿ?-ಇಲ್ಲಿದೆ ಮಾಹಿತಿ
ಬೆಂಗಳೂರು, ಫೆಬ್ರವರಿ, 29: ಬೆಂಗಳೂರಿನ ಹೊರವಲಯದಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಬ್ಬಾಳ ಫ್ಲೈಓವರ್ ಮೋಲಕವೇ ಹೋಗಬೇಕಾಗುತ್ತದೆ. ಇನ್ನು ಸ್ಥಗಿತಗೊಂಡಿದ್ದ ಈ ಮೇಲ್ಸೇತುವೆ ವಿಸ್ತರಣೆ ಕಾಮಗಾರಿಯನ್ನು ಮತ್ತೆ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಯನ್ನು ವೇಗದಲ್ಲಿ ಮಾಡಲಾಗುತ್ತಿದೆ. ಹಾಗಾದರೆ ಇದಕ್ಕೆ ತಗಲುವ ವೆಚ್ಚ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಫ್ಲೈಓವರ್ ಯೋಜನೆಯ ಮೊದಲ ಹಂತದಲ್ಲಿಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಿಂದ ಬೆಂಗಳೂರು ಕಡೆಗೆ ಮೂರು ಪಥದ 715 ಮೀಟರ್ ಮೇಲ್ಸೇತುವೆ ಮತ್ತು ಯಶವಂತಪುರ- ಕೆ.ಆರ್.ಪುರ ಮಾರ್ಗದಲ್ಲಿ ಮೂರು ಪಥದ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿಯನ್ನು ಬಿಡಿಎ ಕೈಗೆತ್ತಿಕೊಂಡು ಸುಮಾರು 7 ತಿಂಗಳಾಗಿತ್ತು. ಆರ್ಥಿಕ ಸಮಸ್ಯೆ ಇದ್ದುದರಿಂದ ಕೆಲವು ದಿನ ಸ್ಥಗಿತಗೊಳಿಸಲಾಗಿದ್ದು, ಇದೀಗ ಮತ್ತೆ ಆರಂಭ ಮಾಡಲಾಗಿದೆ.

ಇನ್ನು ಕಳೆದ ಒಂದು ದಶಕದಿಂದ ನಿಂತಿದ್ದ ಈ ಮೇಲ್ಸೇತುವೆ ವಿಸ್ತರಣೆ ಕಾಮಗಾರಿಯನ್ನು ಜುಲೈ ತಿಂಗಳಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಅಂದಿನಿಂದ ಈವರೆಗೆ ಈ ಭಾಗದಲ್ಲಿ ಧೂಳು, ಸಂಚಾರ ದಟ್ಟಣೆ, ಬಸ್ ನಿಲುಗಡೆ ಸೇರಿದಂತೆ ಹಲವು ಸಮಸ್ಯೆಗಳು ತಲೆದೂರಿವೆ. ಇದೀಗ ಮಂದಗತಿಯ ಕಾಮಗಾರಿ ಹಿನ್ನೆಲೆ ಈ ಭಾಗದಲ್ಲಿ ಮತ್ತಷ್ಟು ಅವಾಂತರಗಳಾಗುತ್ತಲೇ ಇವೆ.
ಎಸ್ಟೀಮ್ ಮಾಲ್‌ನಿಂದ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆವರೆಗೆ ಮೂರು ಪಥದ ಮೇಲುಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಯೋಜನೆಗೆ ಒಟ್ಟಾರೆ 350 ಕೋಟಿ ರೂಪಾಯಿ ಅಂದಾಜು ವೆಚ್ಚ ನಿಗದಿಪಡಿಸಲಾಗಿದೆ. ಈ ಪೈಕಿ ಕಾಮಗಾರಿಗೆ ಮೊದಲ ಹಂತದಲ್ಲಿ 94 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಮೊದಲ ಹಂತದ ಯೋಜನೆಗೆ ಹಣದ ಕೊರತೆಯಿಲ್ಲ. ಆದರೆ ಎರಡನೇ ಹಂತದ ಯೋಜನೆಯ ವೇಳೆಗೆ ಹಣ ಹೊಂದಿಸಲಾಗುವುದು ಎಂಬುದು ಬಿಡಿಎ ಅಧಿಕಾರಿಗಳ ಹೇಳಿಕೆಯಾಗಿದೆ.
ಈ ನಡುವೆ ಶಿವರಾಮ ಕಾರಂತ ಬಡಾವಣೆಯ ಹಣ ಬಳಸಿಕೊಳ್ಳುವ ಕುರಿತು ಬಿಡಿಎ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಆದರೆ, ಕಾರಂತ ಬಡಾವಣೆ ನಿವೇಶನಗಳ ಹಂಚಿಕೆ ಕಾರ್ಯ ಯಾವಾಗ ನಡೆಯುವುದೋ ಎಂಬ ಪ್ರಶ್ನೆ ಇದೀಗ ಕಾಡುತ್ತಿದೆ. ಹೆಬ್ಬಾಳ ಮೇಲ್ಸೇತುವೆಯು ಸದ್ಯ ಎರಡು ಪಥವನ್ನು ಹೊಂದಿದೆ.
ಈಗಿನ ಮೇಲ್ಸೇತುವೆ ಪಕ್ಕದಲ್ಲೇ ಬ್ಯಾಪ್ಟಿಸ್ಟ್ ಆಸ್ಪತ್ರೆಯಿಂದ ಹೆಬ್ಬಾಳ ಕೆರೆವರೆಗೆ 94 ಕೋಟಿ ರೂಪಾಯಿ ವೆಚ್ಚದಲ್ಲಿಒಟ್ಟು 715 ಮೀಟರ್ ಉದ್ದದ ಸೇತುವೆ ನಿರ್ಮಿಸಲಾಗುತ್ತಿದೆ. ಕೆಂಪೇಗೌಡ ವಿಮಾನ ನಿಲ್ದಾಣದ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಪ್ರಯಾಣಿಸುವವರಿಗೆ ಇದರಿಂದ ಅನುಕೂಲ ಆಗಲಿದೆ.
ಈ ಮೇಲ್ಸೇತುವೆಯಲ್ಲಿ ಮೇಖ್ರಿ ವೃತ್ತದ ಕಡೆಯಿಂದ ವಿಮಾನ ನಿಲ್ದಾಣದ ಕಡೆಗೆ ದ್ವಿಪಥ ರಸ್ತೆ ಹಾಗೂ ಅದರ ಪಕ್ಕದಲ್ಲೇ ಇರುವ ಮತ್ತೊಂದು ಏಕಪಥ ರಸ್ತೆಯ ಮೂಲಕ ಪ್ರಯಾಣ ಮಾಡಬಹುದು.
ಆದರೆ ವಿಮಾನ ನಿಲ್ದಾಣ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಬರುವುದಕ್ಕೆ ದ್ವಿಪಥ ರಸ್ತೆ ಮಾತ್ರ ಇದೆ. ಕೆ.ಆರ್.ಪುರ ಕಡೆಯಿಂದ ಬರುವ ರಸ್ತೆ ಇದನ್ನು ಸೇರಿಕೊಳ್ಳುತ್ತದೆ. ನಗರದಿಂದ ವಿಮಾನ ನಿಲ್ದಾಣದ ಕಡೆಗೆ ಹೋಗುವ ವಾಹನಗಳ ಸಂಖ್ಯೆಗಿಂತ ವಿಮಾನ ನಿಲ್ದಾಣ ಕಡೆಯಿಂದ ನಗರದ ಕಡೆಗೆ ಪ್ರಯಾಣಿಸುವ ವಾಹನಗಳ ಸಂಖ್ಯೆ ಪ್ರಮಾಣ ಹೆಚ್ಚಾಗಿದೆ.












Click it and Unblock the Notifications