ಮೂರು ವರ್ಷದ ಹಿಂದೆ ಸ್ಥಗಿತಗೊಂಡಿದ್ದ ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಕಾಮಗಾರಿಗೆ ಚಾಲನೆ

ಬೆಂಗಳೂರು, ಜ. 02: ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಕಾಮಗಾರಿಗೆ ಕೊನೆಗೂ ಚಾಲನೆ ದೊರೆತಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಹೆಬ್ಬಾಳ ಮೇಲ್ಸೇತುವೆಯ ವಿಸ್ತರಣೆಯ ಕೆಲಸವನ್ನು ಪ್ರಾರಂಭಿಸಿದೆ.

ಹೆಬ್ಬಾಳ ಮೇಲ್ಸೇತುವೆಯಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ ಆಗಬೇಕಿದ್ದ ಎರಡು ಲೈನ್‌ನ ಕಾಮಗಾರಿಯು ಏಪ್ರಿಲ್ 2019 ರಲ್ಲಿ ಸ್ಥಗಿತಗೊಂಡಿತ್ತು. ಈ ವಿಸ್ತರಣೆ ಕಾಮಗಾರಿಗೆ ಜನವರಿ 1 ರ ಭಾನುವಾರದಂದು ಬಿಡಿಎ ಅಧ್ಯಕ್ಷ ಎಸ್‌ಆರ್ ವಿಶ್ವನಾಥ್ ಭೂಮಿಪೂಜೆ ನೆರವೇರಿಸಿದ್ದಾರೆ.

ಸಿಲಿಕಾನ್ ಸಿಟಿಯ ಹೆಬ್ಬಾಳ ಜಂಕ್ಷನ್‌ ಅಂದರೆ ಮೊದಲು ನೆನಪಾಗುವುದು ಟ್ರಾಫಿಕ್, ಹೀಗಾಗಿ ಅತಿಹೆಚ್ಚು ವಾಹನ ದಟ್ಟಣೆ ಉಂಟಾಗುತ್ತಿದ್ದು, ಇದರ ನಿವಾರಣೆಗೆ ಮೇಲ್ಸೇತುವೆ ವಿಸ್ತರಣೆ ಮಾಡಲು ಉದ್ದೇಶಿಸಲಾಗಿತ್ತು. ಈಗ ಯೋಜನೆಯ ಮೊದಲ ಹಂತದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಿಂದ ಬೆಂಗಳೂರು ಕಡೆಗೆ ಮೂರು ಪಥದ ಮೇಲ್ಸೇತುವೆ ರಸ್ತೆ, ಯಶವಂತಪುರ - ಕೆ.ಆರ್. ಪುರ ಮಾರ್ಗದಲ್ಲಿ ಮೂರು ಪಥದ ಅಂಡರ್ ಪಾಸ್ ನಿರ್ಮಾಣವಾಗಲಿದೆ.

Hebbal flyover expansion project work resumed in Bengaluru

ಈ ಮೇಲ್ಸೇತುವೆ ಹಿಂದೆ ಎರಡು ಪ್ರತ್ಯೇಕ ಮೆಟ್ರೋ ಲೈನ್‌ಗಳು ಹಾದು ಹೋಗಲಿವೆ ಎಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) 2019 ರಲ್ಲಿ ಬಿಡಿಎನಿಂದ ನಡೆಯುತ್ತಿದ್ದ ಹೆಬ್ಬಾಳ ಮೇಲ್ಸೇತುವೆ ಯೋಜನೆಯ ಕೆಲಸವನ್ನು ಸ್ಥಗಿತಗೊಳಿಸಿತ್ತು.

ಭೂಮಿಪೂಜೆ ಸಮಾರಂಭದಲ್ಲಿ ಮಾತನಾಡಿದ ಬಿಡಿಎ ಅಧ್ಯಕ್ಷ ಎಸ್‌ಆರ್ ವಿಶ್ವನಾಥ್, "ಒಟ್ಟು 225 ಕೋಟಿ ರೂ.ವೆಚ್ಚದ ಈ ಯೋಜನೆಗೆ ಅಗತ್ಯ ಅನುದಾನ ಬಂದಿದೆ. 80 ಕೋಟಿ ಅಂದಾಜು ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿ ಆರಂಭವಾಗಿದೆ. ಆರಂಭದಲ್ಲಿ 26 ತಿಂಗಳೊಳಗೆ ಯೋಜನೆ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು ಆದರೆ ಗುತ್ತಿಗೆದಾರರಿಗೆ ಒಂದು ವರ್ಷದ ಗಡುವು ನೀಡಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.

ಜೊತೆಗೆ "ಕೆಆರ್ ಪುರಂನಿಂದ ನಾಗವಾರ ರಸ್ತೆಗೆ ಮೇಲ್ಸೇತುವೆ ನಿರ್ಮಾಣ ಮತ್ತು ಕೆಆರ್ ಪುರಂ ಮತ್ತು ನಾಗವಾರಕ್ಕೆ ಸಂಪರ್ಕ ಕಲ್ಪಿಸುವ ಲೂಪ್ ತೆರವು ಮಾಡುವ ಯೋಜನೆಯ ಎರಡನೇ ಹಂತದ ಕಾಮಗಾರಿ ಮುಂದಿನ ತಿಂಗಳ ಅಂತ್ಯದ ವೇಳೆಗೆ ಆರಂಭವಾಗಲಿದೆ" ಎಂದಿದ್ದಾರೆ.

Hebbal flyover expansion project work resumed in Bengaluru

ಬಿಡಿಎ ವತಿಯಿಂದ ಮೇಲ್ಸೇತುವೆ ವಿಸ್ತರಣೆ ಮಾಡಿರುವುದನ್ನು ಸ್ವಾಗತಿಸಿದ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ತಮ್ಮ ಕ್ಷೇತ್ರದಲ್ಲಿರುವ ಹೆಬ್ಬಾಳ ಜಂಕ್ಷನ್‌ನಿಂದ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾಮಗಾರಿಯನ್ನು ವಿಳಂಬ ಮಾಡದೆ ಪೂರ್ಣಗೊಳಿಸುವಂತೆ ಸಲಹೆ ನೀಡಿದರು.

ಈ ವೇಳೆ ಹೆಬ್ಬಾಳ ಶಾಸಕ ಭೈರತಿ ಸುರೇಶ್, ಬಿಬಿಎಂಪಿ ಅಧಿಕಾರಿಗಳು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+