Bengaluru Sunday Rain: ಬೆಂಗಳೂರಿನಲ್ಲಿ ಗಾಳಿಯೊಂದಿಗೆ ಜೋರು ಮಳೆ- ಕಳೆದ ಭಾನುವಾರದ ಅವಾಂತರ ಮತ್ತೆ ಸೃಷ್ಟಿಯಾಗುತ್ತಾ?
ಬೆಂಗಳೂರು ಜೂನ್ 9: ಬೆಂಗಳೂರಿನಲ್ಲಿ ಹಲವೆಡೆ ಮಳೆ ಶುರುವಾಗಿದ್ದು ವಾರಾಂತ್ಯದ ಖುಷಿಯನ್ನು ಹೆಚ್ಚಿದೆ. ನಗರದಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಆವರಿಸಿದ್ದು ಈಗ ಮಳೆ ಶುರುವಾಗಿದೆ. ಇದು ಭಾನುವಾರದ ಮೋಜು ಮಸ್ತಿಗೆ ಸಂತೋಷಯನ್ನು ಹೆಚ್ಚಿಸಿದೆ. ಆದರೆ ಮಳೆ ಕಳೆದ ವಾರದಂತೆ ಅವಾಂತರ ಸೃಷ್ಟಿಸುತ್ತಾ ಎನ್ನುವ ಭೀತಿ ಕೂಡ ಎದುರಾಗಿದೆ.
ಹೌದು.. ನಗರದಲ್ಲಿ ಗಾಳಿಯೊಂದಿಗೆ ಮಳೆ ಆರಂಭವಾಗಿದ್ದು ಮತ್ತೆ ಮರ ಗಿಡಗಳು ಬೀಳುವ ಆತಂಕವೂ ಎದುರಾಗಿದೆ. ವಿಜಯನಗರ, ಕೆಆರ್ ಮಾರುಕಟ್ಟೆ, ರಾರಾಜಿನಗರ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಮಳೆಯಿಂದಾಗಿ ತಂಪಾದ ವಾತಾವರಣ ಆವರಿಸಿದ್ದು ಟೀ-ಕಾಫಿ ಅಂಗಡಿಗಳ ಮುಂದೆ ಜನ ಸೇರಲು ಶುರು ಮಾಡಿದ್ದಾರೆ. ಅಲ್ಲದೆ ಮಿರ್ಚಿ ಬೊಂಡಾ ಹೀಗೆ ಕರಿದ ತಿಂಡಿಗಳಿಗೂ ಬೇಡಿಕೆ ಹೆಚ್ಚಾಗಿದೆ.

ಹೇಳಿ ಕೇಳಿ ಇಂದು ಭಾನುವಾರ. ಹೆಚ್ಚು ಜನ ಕೆಲಸದಿಂದ ವಿಶ್ರಾಂತಿ ಪಡೆದು ಕುಟುಂಬದೊಂದಿಗೆ ಸಮಯ ಕಳೆಯುತ್ತಾರೆ. ಹೀಗಾಗಿ ಟ್ರಾಫಿಕ್ ಜಾಮ್, ರಸ್ತೆಗಳಿಗೆ ನೀರು ನುಗ್ಗಿ ವಾಹನ ಸಂಚಾರ ದಟ್ಟನೆ ಇಂತೆಲ್ಲಾ ಸಮಸ್ಯೆಗಳು ಇಂದು ತೀರಾ ಕಡಿಮೆ. ಅಲ್ಲದೆ ಶಾಪಿಂಗ್, ಔಟಿಂಗ್ ಅಂತ ಸುತ್ತಾಡೋ ಜನಗಳೇ ಹೆಚ್ಚು. ಹೀಗಾಗಿ ಸಿಲಿಕಾನ್ ಸಿಟಿ ಜನ ಮಳೆಯಿಂದ ತೊಂದರೆ ಅನುಭವಿಸುವುದು ತೀರಾ ಕಡಿಮೆ.
ಕಳೆದ ಭಾನುವಾರವೂ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗಿತ್ತು. ಏಕಾಏಕಿ ಸುರಿದ ಮಳೆ ಗಾಳಿಯಿಂದಾಗಿ ನೂರಾರು ಮರ ಗಿಡಗಳು ಬುಡಮೇಲಾಗಿದ್ದವು. ಅನೇಕ ವಾಹನ ಹಾಗೂ ಮನೆಗಳು ಹಾನಿಗೊಳಗಾಗಿದ್ದವು. ರಸ್ತೆಗಳಲ್ಲಿ ನೀರು ನಿಂತು ತಗ್ಗು ಪ್ರದೇಶದ ಮನೆಗಳಿಗೆ ಪ್ರವಾಹದಂತೆ ಮಳೆ ನೀರು ಹರಿದಿತ್ತು. ಅದೃಷ್ಟವಶಾತ್ ಅಂದು ಭಾನುವಾರವಾದ್ದರಿಂದ ಹೆಚ್ಚು ಜನಸಾಮಾನ್ಯರಿಗೆ ತೊಂದರೆಯಾಗಿಲ್ಲ. ಒಂದು ವೇಳೆ ಭಾನುವಾರ ಅಲ್ಲದ ದಿನ ಗಾಳಿಯೊಂದಿಗೆ ಮಳೆಯಾಗಿದ್ದರೆ ಅಪಾಯವಾಗುವ ಸಂಭವವಿತ್ತು.

ಮುಂಗಾರು ಮಳೆ ಚುರುಕು
ರಾಜ್ಯಕ್ಕೆ ಈಗಾಗಲೇ ಮುಂಗಾರು ಮಳೆ ಎಂಟ್ರಿ ಕೊಟ್ಟಿದ್ದು ಚುರುಕುಗೊಂಡಿದೆ. ಕಳೆದ ಕೆಲ ದಿನಗಳಿಂದ ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದ್ದು ಬಿಸಿಲಿನ ತಾಪಮಾನ ತೀರಾ ಕಡಿಮೆಯಾಗಿದೆ. ಅಲ್ಲದೆ ಬೆಂಗಳೂರು ಸಹಜ ವಾತಾವರಣಕ್ಕೆ ಬದಲಾಗಿದೆ. ಹವಾಮಾನ ಇಲಾಖೆಯ ಪ್ರಕಾರ ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗಲಿದೆ. ಈ ಬಾರಿ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ.
ರಾಜ್ಯದಲ್ಲಿ ಯೆಲ್ಲೋ ಅಲರ್ಟ್
ರಾಜ್ಯದಲ್ಲಿ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿಲಾಗಿದೆ. ಕರಾವಳಿ ತೀರದಲ್ಲಿ ಮೀನುಗಾರಿಕೆ ಮಾಡಲು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ವಿಜಯಪುರ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು ಜೂನ್ 12ವರೆಗೆ ಮಳೆ ಮುಂದುವರೆಯಲಿದೆ. ದಕ್ಷಿಣ ಕನ್ನಡ, ಗದಗ, ಕಲಬುರಗಿ, ರಾಯಚೂರು, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ದೇಶದ ಏಳು ರಾಜ್ಯಗಳಿಗೆ ಇಂದು ಆರೆಂಜ್ ಅಲರ್ಟ್ ನೀಡಿದೆ. ಹರಿಯಾಣ, ಪಂಜಾಬ್, ಉತ್ತರಪ್ರದೇಶ ಭಾಗದಲ್ಲಿ ಮೇ 13ರವರೆಗೆ ಮತ್ತು ರಾಜಸ್ಥಾನದಲ್ಲಿ ಮೇ 12ರವರೆಗೆ ಬಿರುಗಾಳಿಯೊಂದಿಗೆ ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಗಳು ಇವೆ.












Click it and Unblock the Notifications