ಆಕಾಶಕ್ಕೇ ತೂತು ಬಿದ್ದಂತೆ ಬೆಂಗಳೂರಲ್ಲಿ ಮಳೆಯೋ ಮಳೆ
Recommended Video

ಬೆಂಗಳೂರು, ಸೆಪ್ಟೆಂಬರ್ 2: ಕುಡಿಯಲು ನೀರು ಕೇಳಿದರೆ ಸ್ನಾನ ಮಾಡಿ, ಉಳಿಯುವಷ್ಟು ನೀರು ಮೈ ಮೇಲೆ ಸುರಿದಂತಾಗಿದೆ ಬೆಂಗಳೂರಿಗರ ಸ್ಥಿತಿ. ಶುಕ್ರವಾರ ಮಧ್ಯರಾತ್ರಿಯಿಂದ ಸುರಿಯಲು ಆರಂಭಿಸಿದ ಮಳೆ ಶನಿವಾರವೂ ಮುಂದುವರಿದಿದೆ. ಮನೆಗಳಿಗೆ ನೀರು ನುಗ್ಗಿದೆ ಅನ್ನುವುದು ಒಂದು ಕಡೆಯಾದರೆ, ಟ್ರಾಫಿಕ್ ಜಾಮ್ ಗೆ ಜನ ರೋಸತ್ತಿದ್ದಾರೆ.
ಜಯನಗರ, ಬನಶಂಕರಿ, ಕಾರ್ಪೋರೇಷನ್, ಎಚ್ ಎಸ್ ಆರ್ ಲೇಔಟ್, ಯಶವಂತಪುರ, ಮಹಾಲಕ್ಷ್ಮಿ ಲೇಔಟ್ ಸೇರಿದಂತೆ ಇಡೀ ಬೆಂಗಳೂರು ಮಳೆಯಲ್ಲಿ ನೆನೆದು ತೊಪ್ಪೆಯಾಗಿದೆ. ಈ ರೀತಿ ಭರ್ಜರಿ ಮಳೆಯಾಗುವ ಬಗ್ಗೆ ಕರ್ನಾಟಕ ಹವಾಮಾನ ಇಲಾಖೆಯು ಮುಂಚಿತವಾಗಿಯೇ ಸೂಚನೆ ನೀಡಿತ್ತು.

ಮಳೆಯಿಂದ ಆದ ಅನಾಹುತಗಳು ಹಾಗೂ ತಕ್ಷಣ ಕೈಗೊಳ್ಳಬೇಕಾದ ಕ್ರಮಗಳನ್ನು ಪರಿಶೀಲಿಸಲು ಮೇಯರ್ ಪದ್ಮಾವತಿ ನಗರ ಪ್ರದಕ್ಷಿಣೆ ನಡೆಸಿದ್ದಾರೆ. ತಗ್ಗಿನ ಪ್ರದೇಶಗಳಲ್ಲಿನ ಮನೆಗಳ ಪರಿಸ್ಥಿತಿ ತೀರಾ ಗಂಭೀರವಾಗಿದೆ. ಕೆಲವೆಡೆ ಮರಗಳು ಧರೆಗುರುಳಿವೆ ಎಂದು ತಿಳಿದುಬಂದಿದೆ. ಇನ್ನೂ ಕೆಲವೆಡೆ ವಿದ್ಯುತ್ ವ್ಯತ್ಯಯವಾಗಿದೆ.

ಒಂದು ಕಡೆ ಮಳೆ ಆರ್ಭಟ, ಸಂಚಾರ ದಟ್ಟಣೆಗೆ ವಾಹನ ಸವಾರರು ಮನೆ ಸೇರಲು ಪರದಾಡುತ್ತಿದ್ದಾರೆ. ಬೆಂಗಳೂರಿಗರ ವಾರಾಂತ್ಯ ಮಳೆಯ ಜತೆ ಹೆಣಗುವುದರಲ್ಲೇ ಕಳೆದುಹೋದರೂ ಅಚ್ಚರಿಯಿಲ್ಲ.
ಬೆಂಗಳೂರಿನಲ್ಲಿ ಇನ್ನೂ ಐದು ದಿನ ಜೋರು ಮಳೆಯಾಗುವ ಸಾಧ್ಯತೆಗಳಿವೆ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ್ ಒನ್ಇಂಡಿಯಾ ಕನ್ನಡ ಮಾತನಾಡಿ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications