Heavy Rain: ಬೆಂಗಳೂರಲ್ಲಿ ಮತ್ತೆ ಧಾರಾಕಾರ ಮಳೆ, ಮೋಡ: ದೀಪಾವಳಿ ಶಾಪಿಂಗ್‌ಗೆ ಅಡ್ಡಿ!
ಬೆಂಗಳೂರು ಅಕ್ಟೋಬರ್ 19: ದೀಪಾವಳಿ ಹಬ್ಬ ಇನ್ನೇನು ದೂರವಿಲ್ಲ. ಇದಕ್ಕೆ ಬೇಕಾದ ಸಿದ್ಧತೆಗಳು ಖರೀದಿಗಳನ್ನು ಈಗಾಗಲೇ ಜನ ಶುರು ಮಾಡಿದ್ದಾರೆ. ಆದರೆ ಹಬ್ಬದ ತಯಾರಿಯಲ್ಲಿರುವ ಜನರಿಗೆ ವಾರಾಂತ್ಯದ ಮಳೆ ಬೇಸರ ತಂದಿದೆ. ವಾರಾಂತ್ಯ ಸುರಿಯುತ್ತಿರುವ ಮಳೆ ಹಬ್ಬದ ಖರೀದಿಗೆ ತೊಂದರೆಯನ್ನುಂಟು ಮಾಡಿದೆ. ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಗೆ ಮಳೆರಾಯ ಅಡ್ಡಿಯನ್ನುಂಟು ಮಾಡಿದ್ದಾನೆ. ಮಳೆಯಿಂದಾಗಿ ಜನ ಮನೆಬಿಟ್ಟು ಹೊರ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರಿನಲ್ಲಿ ಇಂದು ಮತ್ತೆ ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿದೆ. ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಮಳೆ ಜೋರಾಗಿದ್ದು ನಿರಂತರ ಮಳೆ ಸಿಲಿಕಾನ್ ಸಿಟಿಯನ್ನು ತಂಪಾಗಿಸಿದೆ. ಅಕ್ಟೋಬರ್ ತಿಂಗಳಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದ್ದು ಹಬ್ಬದ ತಯಾರಿಯಲ್ಲಿರುವ ಜನರಿಗೆ ಹಾಗೂ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಮಾರಾಟಗಾರರಿಗೆ ಅಡ್ಡಿಯಾಗಿದೆ. ಪೂಜಾ ಸಾಮಾಗ್ರಿಗಳು, ಅಲಂಕಾರಿಕ ವಸ್ತುಗಳು ಹಾಗೂ ಹೂವು ಹಣ್ಣು ವ್ಯಾಪಾರ ಮಾಡುವ ವ್ಯಾಪಾರಿಗಳಿಗೂ ಇದರಿಂದ ಸಾಕಷ್ಟು ತೊಂದರೆಯಾಗಿದೆ.

ಹೌದು... ಬೆಂಗಳೂರಿನಲ್ಲಿ ಅಕ್ಟೋಬರ್ ತಿಂಗಳ ಆರಂಭದಿಂದಲೇ ಮಳೆ ಹೆಚ್ಚಾಗಿದೆ. ಮಧ್ಯಾಹ್ನ, ಸಂಜೆ, ರಾತ್ರಿ ಎನ್ನದೇ ಗುಡುಗು, ಮಿಂಚು, ಗಾಳಿ ಸಹಿತ ಮಳೆಯಾಗುತ್ತಿದೆ. ಪ್ರಸ್ತುತ ನಗರದ ಮೆಜೆಸ್ಟಿಕ್, ಜಯನಗರ, ವಿಜಯನಗರ, ಶಾಂತಿನಗರ, ಸುಂಕದಕಟ್ಟೆ, ರಾಜಾಜಿನಗರ, ಕೆಆರ್ ಮಾರುಕಟ್ಟೆ, ಗಾಂಧಿ ಬಜಾರ್, ರಾಜರಾಜೇಶ್ವರಿ ನಗರ, ಜಾಲಹಳ್ಳಿ, ಕೋರಮಂಗಲ ಮತ್ತಿತರ ಕಡೆ ಮಳೆ ಅಬ್ಬರಿಸುತ್ತಿದೆ.
ಮಳೆ ಅರ್ಭಟಕ್ಕೆ ಅಲ್ಲಲ್ಲಿ ರಸ್ತೆಗಳಲ್ಲಿ ಮಳೆ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ. ಸಂಜೆವರೆಗೂ ಮಳೆ ಮುಂದುವರೆಯುವ ಲಕ್ಷಣವಿದ್ದು ಕಪ್ಪು ಮೋಡ ಆವರಿಸಿದೆ. ಆನೇಕಲ್, ಜಿಗಣಿ, ಬನ್ನೇರುಘಟ್ಟ ಚಂದಾಪುರ ಹಲವೆಡೆ ಮಳೆ ಆಗಿದ್ದು, ರಸ್ತೆಯಲ್ಲಿಯೇ ಮಳೆ ನೀರು ನಿಂತಿದೆ. ಹೀಗಾಗಿ ಪಾದಚಾರಿಗಳು ಪರದಾಡುವಂತಾಗಿದೆ.
ಮುಂದಿನ ಐದು ದಿನಗಳವರೆಗೆ ಬೆಂಗಳೂರು ಸೇರಿ ರಾಜ್ಯದ 15ಕ್ಕೂ ಅಧಿಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಘೋಷಿಸಿದೆ. ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ತುಮಕೂರಿನಲ್ಲಿ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಹಿಂಗಾರು ಮಳೆ ಆರ್ಭಟ ಜೋರಾಗಿದ್ದು, ಕರಾವಳಿ ಮತ್ತು ಮಲೆನಾಡಿಗೆ ಸೀಮಿತವಾಗಿದ್ದ ಮಳೆ ಅಬ್ಬರ ಇದೀಗ ಒಳನಾಡು ಜಿಲ್ಲೆಗಳಿಗೂ ವಿಸ್ತರಣೆಯಾಗಿದೆ. ರಾಜ್ಯದಲ್ಲಿ ಮಳೆಯ ವಾತಾವರಣ ಕಂಡು ಬರುತ್ತಿದ್ದು, ಬಹುತೇಕ ಜಿಲ್ಲೆಗಳಲ್ಲಿ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿದೆ.
ಬೆಂಗಳೂರಿನಲ್ಲಿ ಮುಂಜಾನೆಯಿಂದಲೇ ಮೋಡ ಮುಸುಕಿದ ವಾತಾವರಣವಿದ್ದು, ವಿಜಯನಗರ, ಕೋಲಾರದಲ್ಲಿ ಸಾಧಾರಣ ಮಳೆಯಾಗಲಿದೆ. ನಾಪೋಕ್ಲು, ಬಂಡೀಪುರ, ಕಾರ್ಕಳ, ನರಗುಂದ, ರಾಮನಗರ, ಮಸ್ಕಿ, ಕನಕಪುರ, ಮಾಗಡಿ, ಎಚ್ಡಿ ಕೋಟೆ, ಮುಂಡಗೋಡು, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಶಿವಮೊಗ್ಗ, ಕುಮಟಾ, ಲಕ್ಷ್ಮೇಶ್ವರ, ಕೊಟ್ಟಿಗೆಹಾರ, ಹಾಸನ, ಹೊಸಕೋಟೆ, ಶ್ರವಣಬೆಳಗೊಳ, ಕೋಲಾರ, ತ್ಯಾಗರ್ತಿ, ಪೊನ್ನಂಪೇಟೆ, ಹೊನ್ನಾಳಿ, ಮೈಸೂರಿನಲ್ಲಿ ಮಳೆಯಾಗಿದೆ.












Click it and Unblock the Notifications