ಚಾಮರಾಜಪೇಟೆಯಲ್ಲಿ ಭಾರೀ ಪೊಲೀಸ್ ಬಂದೋಬಸ್ತ್!
ಬೆಂಗಳೂರು, ಜನವರಿ 3: ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಶಾಸಕ ಜಮೀರ್ ಅಹಮ್ಮದ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯುತ್ತಿದೆ.
ದೇಶಾದ್ಯಂತ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಭಾರೀ ಪ್ರತಿಭಟನೆ, ಹಿಂಸಾಚಾರಗಳು ನಡೆದಿರುವುದರಿಂದ ಚಾಮರಾಜಪೇಟೆಯಲ್ಲಿ ನಡೆಯುತ್ತಿರುವ ಈ ಪ್ರತಿಭಟನಾ ಸಮಾವೇಶಕ್ಕೆ ಪೊಲೀಸರು ಭಾರೀ ಬಂದೋಬಸ್ತ್ ಕೈಗೊಂಡಿದ್ದಾರೆ. ಸಮಾವೇಶದಲ್ಲಿ ಸುಮಾರು 25 ಸಾವಿರ ಜನ ಸೇರಿದ್ದು, ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಉಮೇಶ್ ಅವರ ನೇತೃತ್ವದಲ್ಲಿ 1 ಸಾವಿರಕ್ಕೂ ಹೆಚ್ಚು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

3 ಡಿಸಿಪಿ, 10 ಡಿವೈಎಸ್‌ಪಿಗಳು, 20 ಇನ್ಸಪೆಕ್ಟರ್‌ಗಳು, 50 ಸಬ್ ಇನ್ಸಪೆಕ್ಟರ್‌ಗಳು ಹಾಗೂ 5 ಕೆಎಸ್‌ಆರ್‌ಪಿ ತುಖಡಿಗಳು ಸೇರಿ ಒಂದು ಸಾವಿರ ಪೊಲೀಸರು ಯಾವುದೇ ದುರ್ಘಟನೆಗಳು ನಡೆಯದಿರುವಂತೆ ಭದ್ರತೆ ಕೈಗೊಂಡಿದ್ದಾರೆ. ಸಮಾವೇಶ ಆರಂಭವಾಗಿದ್ದು, ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಾಕಷ್ಟು ಸಂಖ್ಯೆಯಲ್ಲಿ ಸೇರಿರುವ ಮುಸ್ಲಿಂ ಸಮುದಾಯದವರು ಘೋಷಣೆ ಕೂಗುತ್ತಿದ್ದಾರೆ. ಸಂಜೆ ಆರು ಗಂಟೆಯವರೆಗೆ ಸಮಾವೇಶ ನಡೆಯಲಿದೆ.












Click it and Unblock the Notifications