ರಾಜ್ಯದಲ್ಲಿ ಹೆಚ್ಚಿದ ಬಿಸಿಲು: ಕೆಲಸದ ಸಮಯ ಬದಲಾವಣೆಗೆ ಪೌರಕಾರ್ಮಿಕರ ಮನವಿ
ಬೆಂಗಳೂರು, ಏಪ್ರಿಲ್. 10: ಭಾರತೀಯ ಹವಾಮಾನ ಇಲಾಖೆ (ಐಎಂಡಿ) ದೇಶದಲ್ಲಿ ಶಾಖದ ಅಲೆಯ ಮುನ್ಸೂಚನೆ ನೀಡಿದೆ. ಇದೇ ವೇಳೆ ಯಾವುದೇ ವೇತನ ಕಡಿತವಿಲ್ಲದೆ ಅರ್ಧ ದಿನದ ಕೆಲಸದ ಸಮಯವನ್ನು ತಕ್ಷಣವೇ ಜಾರಿಗೊಳಿಸುವಂತೆ ಪೌರಕಾರ್ಮಿಕರು ಮನವಿ ಮಾಡುತ್ತಿದ್ದಾರೆ.
ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಇಲಾಖೆಗಳಿಗೆ ಪತ್ರ ಬರೆದಿರುವ ಅಖಿಲ ಭಾರತ ಕಾರ್ಮಿಕ ಸಂಘಗಳ ಒಕ್ಕೂಟ (ಎಐಸಿಸಿಟಿಯು) ಪತ್ರದಲ್ಲಿ ಕಾರ್ಮಿಕರಿಗೆ ಹೆಚ್ಚುವರಿ ವಿರಾಮ ನೀಡಬೇಕು. ಶಾಖದ ಹೊಡೆತಕ್ಕೆ ಒಳಗಾಗದಂತೆ ತಮ್ಮನ್ನು ರಕ್ಷಿಸಿಕೊಳ್ಳಲು ಕುಡಿಯುವ ನೀರು, ಒಆರ್‌ಎಸ್ ಮತ್ತು ಮಜ್ಜಿಗೆ ನೀಡಬೇಕು ಎಂದಿದೆ.

ಶುದ್ಧ ನೀರು ಮತ್ತು ನೈರ್ಮಲ್ಯದ ಶೌಚಾಲಯಗಳಿಂದ ವಂಚಿತರಾಗಿರುವ ಪೌರಕಾರ್ಮಿಕರು ಶಾಖ ಸಂಬಂಧಿತ ಕಾಯಿಲೆಗಳಿಗೆ ಬಲಿಯಾಗುವ ಅಪಾಯವನ್ನು ಹೊಂದಿರುತ್ತಾರೆ ಎಂದು ಆಗ್ರಹಿಸಿದೆ. ಪೌರಕಾರ್ಮಿಕರು ತಮ್ಮ ದಿನದ ಕೆಲಸವನ್ನು ಬೆಳಗ್ಗೆ 6 ಗಂಟೆಗೆ ಪ್ರಾರಂಭಿಸುತ್ತಾರೆ. ಪ್ರತಿದಿನ ಮಧ್ಯಾಹ್ನ 2 ಗಂಟೆಯವರೆಗೆ ಕೆಲಸ ಮಾಡುತ್ತಾರೆ. ಕೆಲವೊಮ್ಮೆ ಇದನ್ನು ಮಧ್ಯಾಹ್ನ 2.30 ರವರೆಗೆ ವಿಸ್ತರಿಸಲಾಗುತ್ತದೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮಧ್ಯಾಹ್ನ 3 ಗಂಟೆಯವರೆಗೆ ಮನೆಯೊಳಗೆ ಇರಲು ಸೂಚನೆ ನೀಡಿದೆ. ಹೀಗಾಗಿ ಪೌರಕಾರ್ಮಿಕರಕೆಲಸದ ಸಮಯವನ್ನು ಬೆಳಿಗ್ಗೆ 11 ಕ್ಕೆ ಕಡಿತಗೊಳಿಸಬೇಕೆಂದು ಕಾರ್ಮಿಕ ಒಕ್ಕೂಟ ಮನವಿ ಮಾಡಿದೆ. ವಿಪತ್ತು ಪ್ರಾಧಿಕಾರದ ಸುತ್ತೋಲೆಯು ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸುವಂತೆ ಹೇಳುತ್ತದೆ. ಆದರೆ, ಪೌರಕಾರ್ಮಿಕರಿಗೆ ನೀಡಲಾದ ಸಮವಸ್ತ್ರದ ಬಟ್ಟೆಯು ಹೆಚ್ಚಿನ ತಾಪಮಾನಕ್ಕೆ ಸೂಕ್ತವಲ್ಲ ಎಂಬ ಆರೋಪಗಳು ಇವೆ.
ಕಳೆದ ವರ್ಷ ಸರ್ಕಾರವು ಪೌರಕಾರ್ಮಿಕರಿಗೆ ಅರ್ಧ ದಿನದ ಕೆಲಸದ ಸಮಯವನ್ನು ಒದಗಿಸಿದೆ ಎಂದು ಎಐಸಿಸಿಟಿಯು ಸದಸ್ಯೆ ನಿರ್ಮಲಾ ಎಂ. ಪತ್ರದಲ್ಲಿ ತಿಳಿಸಿದ್ದಾರೆ. ಹೀಗಾಗಿ ಹೆಚ್ಚಿನ ತಾಪಮಾನವನ್ನು ಗಮನದಲ್ಲಿಟ್ಟುಕೊಂಡು ನಾವು ಈ ವರ್ಷ ಕೂಡ ಅದೇ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದೇವೆ ಎಂದಿದ್ದಾರೆ.
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಕೂಡ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಪತ್ರ ಬರೆದಿದ್ದು, ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು ಪೌರಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳನ್ನು ನೀಡುವ ಬಗ್ಗೆ ಮನವಿ ಮಾಡಿದೆ.

ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು ಇನ್ನು 3 ತಿಂಗಳ ವರೆಗೂಗೂ ಸಹ ಬಿಸಿಲಿನ ವಾತಾವರಣ ಇರುವುದಾಗಿ ಹವಾಮಾನ ಇಲಾಖೆಯು ವರದಿ ನೀಡಿದ್ದು ಈ ಸಂಬಂಧ ಸಾರ್ವಜನಿಕರಿಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾರ್ಗಸೂಚಿಯನ್ನು ಹೊರಡಿಸಲಾಗಿರುತ್ತದೆ.
ಪೌರಕಾರ್ಮಿಕರು/ಸ್ವಚ್ಚತಾ ಕಾರ್ಮಿಕರು, ಡ್ರೈವರ್ಸ್ ಮತ್ತು ಲೋಡರ್ಸ್ ಕಾರ್ಮಿಕರು ಪ್ರತಿನಿತ್ಯ ಬಿಸಿಲಿನ ನಡುವೆಯೇ ಸ್ವಚ್ಚತಾ ಕಾರ್ಯ ನಿರ್ವಹಿಸುತ್ತಿದ್ದು ಪೌರಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಕೋರಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ ರವರು ಉಲ್ಲೇಖ(2)ರ ಪತ್ರದಲ್ಲಿ ಮನವಿ ಸಲ್ಲಿಸಿರುತ್ತಾರೆ.
ಆದ್ದರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು/ಸ್ವಚ್ಚತಾ ಕಾರ್ಮಿಕರು, ಡ್ರೈವರ್ಸ್ ಮತ್ತು ಲೋಡರ್ಸ್ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಪೌರಕಾರ್ಮಿಕರ ಕೆಲಸದ ಸಮಯದಲ್ಲಿ ಬದಲಾವಣೆ ಮಾಡಲು ಮತ್ತು ಕೆಲಸ ನಿರ್ವಹಿಸುವ ಸ್ಥಳದಲ್ಲಿ ಶುದ್ಧ ಕುಡಿಯುವ ನೀರು, ಟೋಪಿ, ಉತ್ತಮ ಗುಣಮಟ್ಟದ ಆಹಾರ, ವಿಶ್ರಾಂತೆ ಸ್ಥಳ ಮತ್ತು ಪೌರಕಾರ್ಮಿಕರಿಗೆ ಅನುಕೂಲವಾಗುವ ಅಗತ್ಯ ಸೌಲಭ್ಯಗಳನ್ನು ನೀಡಿ ಮುಂಜಾಗ್ರತಾ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನೆ ನೀಡಲು ಕೋರಿದೆ.












Click it and Unblock the Notifications