ಸುಮಲತಾ ಅಂಬರೀಶ್ ರ ಹೃದಯಸ್ಪರ್ಶಿ ಸಂದೇಶದಲ್ಲಿ ಏನಿದೆ?
ಬೆಂಗಳೂರು, ಡಿಸೆಂಬರ್ 1: ನಟಿ- ಅಂಬರೀಶ್ ಅವರ ಪತ್ನಿ ಸುಮಲತಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹೃದಯಸ್ಪರ್ಶಿ ಸಂದೇಶವನ್ನು ಹಾಕಿದ್ದಾರೆ. ಇಂಗ್ಲಿಷಿನಲ್ಲಿರುವ ಆ ಸಂದೇಶದ ಒಕ್ಕಣೆ ಇಂತಿದೆ.
"ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದ. ನಿಮ್ಮ ಪ್ರೀತಿಪೂರ್ವಕ ಮಾತು, ನಡವಳಿಕೆಯು ನಮ್ಮ ಜೀವನದ ಅತ್ಯಂತ ಕತ್ತಲೆ ಹಾಗೂ ನೋವಿನ ಸಮಯದಲ್ಲಿ ನಮಗೆ ಧೈರ್ಯ ನೀಡಿತು. ನಮ್ಮ ಮಗ ಅಭಿಷೇಕ್, ನಾನು ಹಾಗೂ ಅಂಬರೀಶ್ ರ ಕುಟುಂಬದ ಎಲ್ಲರೂ ಕರ್ನಾಟಕದ ಜನರಿಗೆ ಚಿರಋಣಿಗಳು.
"ವಿಶೇಷವಾಗಿ ಮಂಡ್ಯದಲ್ಲಿನ ಅಭಿಮಾನಿಗಳು, ಬೆಂಗಳೂರು, ಕರ್ನಾಟಕ ಮತ್ತು ಆಚೆಗೂ ಇರುವವರು ಇಂತಹ ಪ್ರೀತಿಯ ಹಾಗೂ ರಾಜನಿಗೆ ಸೂಕ್ತವಾದಂಥ ರಾಜ ಮರ್ಯಾದೆಯ ಬೀಳ್ಕೊಡುಗೆ ನೀಡಿದ್ದೀರಿ. ಎಲ್ಲ ಅಗತ್ಯ ವ್ಯವಸ್ಥೆ ಮಾಡಿದ್ದಕ್ಕೆ ಹಾಗೂ ಸರಕಾರಿ ಗೌರವದೊಂದಿಗೆ ಕಳುಹಿಸಿಕೊಟ್ಟಿದ್ದಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಕರ್ನಾಟಕ ಸರಕಾರಕ್ಕೆ ಧನ್ಯವಾದಗಳು.

"ಪೊಲೀಸ್ ಇಲಾಖೆ, ಆರ್ ಎಎಫ್, ಮಂಡ್ಯ ಹಾಗೂ ಬೆಂಗಳೂರಿನ ಜಿಲ್ಲಾ ಅಧಿಕಾರಿಗಳು, ಯಾವುದೇ ತೊಂದರೆ ಇಲ್ಲದೆ ಅವರ ಅಂತ್ಯಕ್ರಿಯೆ ನಡೆಯಲು ದಣಿವರಿಯದೆ ಶ್ರಮಿಸಿದವರಿಗೆ, ಅಂಬರೀಶ್ ರ ಪಯಣದುದ್ದಕ್ಕೂ ಕೊನೆಯಾಗದ ಪ್ರೀತಿ ನೀಡಿದ ಮಂಡ್ಯದ ಜನರಿಗೆ ನನ್ನ ಕೃತಜ್ಞತೆಗಳು.

"ಅವರೊಬ್ಬ ನಟ, ಸೂಪರ್ ಸ್ಟಾರ್, ಕೇಂದ್ರ ಸಚಿವ, ರಾಜ್ಯ ಸಂಪುಟ ಸಚಿವರು, ಹಲವರಿಗೆ ಸ್ನೇಹಿತ ಇವೆಲ್ಲವನ್ನೂ ಮೀರಿ ಅವರು ನಿಮ್ಮ ನಂಬಿಕಸ್ಥ ಹಾಗೂ ಶಾಶ್ವತ ಪ್ರೀತಿಗೆ ಪಾತ್ರರಾದವರು. ಕರ್ನಾಟಕದ ಈ ಪುಣ್ಯಭೂಮಿಯಲ್ಲಿ ಅವರು ಜನಿಸುವುದಕ್ಕೆ ಪಡೆದುಕೊಂಡು ಬಂದಿದ್ದರು. ಮಂಡ್ಯದ ಮಣ್ಣಿನ ಮಗ ಎಂಬ ಹೆಮ್ಮೆ ಅವರ ಪಾಲಿಗಿದೆ" ಎಂದು ಸುಮಲತಾ ಅಂಬರೀಶ್ ಅವರು ಪೋಸ್ಟ್ ಮಾಡಿದ್ದಾರೆ.












Click it and Unblock the Notifications