Bengaluru: ಇಂದಿನಿಂದ 3 ದಿನ ಭಾರತೀಯ ತೋಟಗಾರಿಕಾ ಮೇಳ 2025, ಕೇಂದ್ರ ಸಚಿವ ಚಾಲನೆ
ಬೆಂಗಳೂರು, ಫೆಬ್ರವರಿ 27: ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (IIHR) ವತಿಯಿಂದ ಬೆಂಗಳೂರಿನ ಹೆಸರಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ ಗುರುವಾರ ಚಾಲನೆ ನೀಡಲಾಗಿದೆ. ಇಂದಿನಿಂದ ಮೂರು ದಿನಗಳ ಕಾಲ (ಫೆಬ್ರವರಿ 27 ರಿಂದ ಮಾರ್ಚ್ 01) ಬೃಹತ್ ತೋಟಗಾರಿಕಾ ಮೇಳ ನಡೆಯಲಿದೆ. ನವ ನವೀನ ತಂತ್ರಜ್ಞಾನಗಳ ಪ್ರದರ್ಶನ ಮಾತ್ರವಲ್ಲದೇ ಅವುಗಳ ಮಾಹಿತಿ ತಿಳಿಸಲಾಗುತ್ತದೆ. ನೂರಾರು ಮಳಿಗೆಗಳು, ಕಾರ್ಯಾಗಾರ, ಸಂವಾದಗಳು, ಬೀಜ ತಳಿಗಳ ಕುರಿತು ರೈತರು, ತೋಟಗಾರಿಕೆ ಬೆಳೆಗಾರರು ಇಲ್ಲಿ ಮಾಹಿತಿ ಪಡೆಯಲಿದ್ದಾರೆ. ಲಕ್ಷಾಂತರ ಮಂದಿ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಐಐಎಚ್‌ಆರ್ ತಿಳಿಸಿದೆ.
ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (IIHR) ಮತ್ತು ಭಾರತೀಯ ಕೃಷಿ ಸಂಶೋಧನಾ ಪರಿಷತ್ತು (ICAR) ಸಹಕಾರದಲ್ಲಿ ಬೆಂಗಳೂರಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಮೇಳ ಹಮ್ಮಿಕೊಳ್ಳಲಾಗಿದೆ. ವಿಕಸಿತ ಭಾರತಕ್ಕಾಗಿ ತೋಟಗಾರಿಕೆ ಮೇಳ (ಘೋಷಣೆ, ಸಬಲೀಕರಣ ಮತ್ತು ಜೀವನೋಪಾಯ) ಘೋಷವಾಕ್ಯದಡಿ ಮೇಳ ಆರಂಭವಾಗಿದೆ. ಇಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಉದ್ಘಾಟಿಸಲಿದ್ದಾರೆ.

ಮನುಷ್ಯರಲ್ಲಿ ನೆನಪಿನ ಶಕ್ತಿ ಕುಂದಿಸುವ ಆಲ್‌ಝೈಮರ್ ಕಾಯಿಲೆಗೆ ಔಷಧಿ ಗುಣಗಳುಳ್ಳ ಅಣಬೆ ಇದೆ. ಕ್ಯಾನ್ಸರ್ ನಿಯಂತ್ರಿಸಲು ಕ್ಯಾಲ್ಸಿಯಂ ಕೊರತೆ ನೀಗಿಸುವ ಅಣಬೆಗಳು ಕೂಡ ಇಲ್ಲಿಗೆ ಬಂದಿವೆ. ಈ ಆಹಾರಗಳು ಮೆದುಳು ನರಕೋಶಗಳಿಗೆ ಪರಿಣಾಮ ಉಂಟು ಮಾಡುತ್ತವೆ. ರೋಗಗಳ ನಿಯಂತ್ರಣಕ್ಕೆ ಇವೆಲ್ಲ ಸಹಕಾರಿಯಾಗಿವೆ. ಇಂತಹ ಬೆಳೆಗಳ ಪರಿಚಯಿಸಲಾಗಿದೆ. ಅವುಗಳ ಬೆಳೆಯುವುದು, ವಿಧಾನ, ಕಟಾವು ಮಾಹಿತಿ ನೀಡಲಾಗುತ್ತದೆ.
ಆರ್ಕಾ ಟೆಂಡರ್ ಹಲಸಿನಕಾಯಿ ಕಬಾಬ್ ಬಂದಿದೆ. ಅಧಿಕ ನಾರಿನ ಅಂಶವುಳ್ಳ ಹಲಸಿನಕಾಯಿಯನ್ನು ಸಕ್ಕರೆ ಕಾಯಿಲೆ ಇರುವವರು ತಿನ್ನಬಹುದಾಗಿದೆ. ಮಾಂಸಹಾರಿ ಅಲ್ಲ, ಬರೀ ಸಸ್ಯ ಹಾರಿಗಳು ಎನ್ನುವವರು ತಿನ್ನಬಹುದಾಗಿದೆ. ಇದೇ ರೀತಿ ಅನೇಕ ತೋಟಗಾರಿಕೆ ಬೆಳೆಗಳು ಇಲ್ಲಿವೆ.

ಭಾರತದಲ್ಲಿ 350 ಟನ್ ತೋಟಗಾರಿಕೆ ಉತ್ಪಾದನೆ ವಾರ್ಷಿಕವಾಗಿ ಆಗುತ್ತದೆ. ದೇಶದ ಜನರ ಪೌಷ್ಠಿಕತೆ ಸುಧಾರಿಸುವ ನಿಟ್ಟಿನಲ್ಲಿ ಉತ್ಪಾದನೆ ಹೆಚ್ಚಿಸಬೇಕಿದೆ. ದೇಶದ ಆಹಾರ ಉತ್ಪಾದನೆಯಲ್ಲಿ ತೋಟಗಾರಿಕೆ ಮೇಳ ಮಹತ್ವದ ಪಾತ್ರ ನಿರ್ವಹಿಸುತ್ತದೆ.
ಇಂದು ತೋಟಗಾರಿಕೆ ಮೇಳ ಉದ್ಘಾಟನೆ
ಗುರುವಾರ ಬೆಳಗ್ಗೆ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ತೋಟಗಾರಿಕೆ ಮೇಳ ಉದ್ಘಾಟಿಸಲಿದ್ದಾರೆ. ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ್, ಶಾಸಕ ಎಸ್.ಆರ್.ವಿಶ್ವನಾಥ್, ಐಎಸ್‌ಇಸಿ ಡಾ.ಅಶೋಕ್ ದಳವಾಯಿ, ದೆಹಲಿ ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ ಸದಸ್ಯ ಡಾ.ಮೇಜರ್ ಸಿಂಗ್ ಅವರು ಪಾಲ್ಗೊಳ್ಳಲಿದ್ದಾರೆ.
ಇದರೊಂದಿಗೆ ಐಐಎಚ್‌ಆರ್-ಐಸಿಎಆರ್ ನಿರ್ದೇಶಕ ಡಾ.ತುಷಾರ್ ಕಾಂತಿ ಬೆಹೆರಾ ಸೇರಿದಂತೆ ಸಂಶೋಧನಾ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಇರಲಿದ್ದಾರೆ.












Click it and Unblock the Notifications