ನೈಸ್ ರಸ್ತೆ ಯೋಜನೆಯನ್ನು ಸಂಪೂರ್ಣ ವಶಕ್ಕೆ ಪಡೆಯಿರಿ: ಜಂಟಿ ಸುದ್ದಿಗೋಷ್ಠಿಯಲ್ಲಿ ಸರ್ಕಾರಕ್ಕೆ ಒತ್ತಾಯಿಸಿದ ಎಚ್‌ಡಿಕೆ-ಬೊಮ್ಮಾಯಿ

ಬೆಂಗಳೂರು, ಜುಲೈ 21: ಬೆಂಗಳೂರು- ಮೈಸೂರು ನಡುವಿನ ನೈಸ್ ರಸ್ತೆ ಯೋಜನೆಯನ್ನು ಸಂಪೂರ್ಣವಾಗಿ ವಶಕ್ಕೆ ಪಡೆಯಬೇಕೆಂದು ಮಾಜಿ ಮುಖ್ಯಮಂತ್ರಿಗಳಾದ ಎಚ್‌ಡಿ ಕುಮಾರಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿ ಅವರು ಆಗ್ರಹಿಸಿದರು.

ವಿಧಾನಸೌಧದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಇಬ್ಬರು ನಾಯಕರು, 'ಅಕ್ರಮಗಳ ಆಗರವಾಗಿರುವ ಹಾಗೂ ರಾಜ್ಯದ ಜನತೆಗೆ ವಂಚನೆ ಎಸಗಿರುವ ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ - ನೈಸ್ ಯೋಜನೆಯನ್ನು ಸಂಪೂರ್ಣವಾಗಿ ಸರಕಾರದ ವಶಕ್ಕೆ ಪಡೆಯಬೇಕು' ಎಂದು ಒತ್ತಾಯಿಸಿದರು.

HD Kumaraswamy-Basavaraj Bommai Joint Press Meet in Bengaluru- What did the say on NICE project?

ನೈಸ್ ಯೋಜನೆಯನ್ನು ಯಾವ ಮುಲಾಜು ಇಲ್ಲದೆ ಸರಕಾರದ ವಶಕ್ಕೆ ಪಡೆಯಬೇಕು ಹಾಗೂ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ನೈಸ್‌ ಅಕ್ರಮಗಳ ಕುರಿತು ಮಾತನಾಡಿದ ಅವರು, ಜಂಟಿ ಸದನ ಸಮಿತಿ ವರದಿ ಹಾಗೂ ನ್ಯಾಯಾಲಯಗಳು ನೀಡಿರುವ ಆದೇಶದಂತೆ ಇಡೀ ಯೋಜನೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಒಂದು ವೇಳೆ ಯೋಜನೆಯನ್ನು ವಶಕ್ಕೆ ಪಡೆಯದಿದ್ದರೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಸದನದ ಒಳಗೆ ಹಾಗೂ ಹೊರಗೆ ಜಂಟಿ ಹೋರಾಟ ನಡೆಸಲಿವೆ ಎಂದು ಇಬ್ಬರೂ ನಾಯಕರು ಸರಕಾರಕ್ಕೆ ಎಚ್ಚರಿಕೆ ನೀಡಿದರು.

HD Kumaraswamy-Basavaraj Bommai Joint Press Meet in Bengaluru- What did the say on NICE project?

ನೈಸ್ ಅಕ್ರಮ ರಾಜ್ಯದಲ್ಲಿ ಹಾಡುಹಗಲೇ ನಡೆದಿರುವ ದರೋಡೆಯಾಗಿದೆ. ಜನರ ಭೂಮಿ ಹಾಗೂ ಹಣವನ್ನು ಕೊಳ್ಳೆ ಹೊಡೆಯಲಾಗಿದೆ. ಈ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ. ನೈಸ್ ವಿರುದ್ಧದ ನಮ್ಮ ಹೋರಾಟ ಹಲವಾರು ಮಜಲುಗಳನ್ನು ಮುಟ್ಟಲಿದೆ ಕುಮಾರಸ್ವಾಮಿ ತಿಳಿಸಿದರು.

ಎಚ್‌ಡಿ ಕುಮಾರಸ್ವಾಮಿ ಹೇಳಿದ್ದೇನು?

ರಾಜ್ಯದ ಮುಖ್ಯಮಂತ್ರಿ ಭ್ರಷ್ಟಾಚಾರದ ಬಗ್ಗೆ ಉದ್ದುದ್ದ ಮಾತನಾಡುತ್ತಾರೆ. ಆದರೆ ನೈಸ್ ರಸ್ತೆಯ ಅಕ್ರಮದ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಬಸವರಾಜ ಬೊಮ್ಮಾಯಿ ಅವರ ಸರಕಾರದ ಕಾಲದಲ್ಲಿ ಈ ಅಕ್ರಮಕ್ಕೆ ಸಂಬಂಧಿಸಿದಂತೆ ಅನೇಕ ಕ್ರಮಗಳು ಜರುಗಿವೆ. ನ್ಯಾಯಾಲಯಗಳಲ್ಲಿ ನೈಸ್ ವಿರುದ್ಧ, ಸರಕಾರದ ಪರವಾಗಿ ಅನೇಕ ಆದೇಶಗಳು ಬಂದಿವೆ. ಇದಕ್ಕೆ ಹಿಂದಿನ ಬಿಜೆಪಿ ಸರಕಾರದ ಶ್ರಮಿಸಿದೆ. ಅದಕ್ಕಾಗಿ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಅಭಿನಂದಿಸುತ್ತೇನೆ ಎಂದು ಎಚ್‌ಡಿಕೆ ಹೇಳಿದರು.

ಈ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ಕೇಳಿದ್ದೆವು. ಮೊದಲು ಸದನದಲ್ಲಿ ನಿಲುವಳಿ ಸೂಚನೆ ಮಂಡಿಸಿದೆವು. ಬಳಿಕ ಅದನ್ನು ನಿಯಮ 69ಕ್ಕೆ ಬದಲಿಸಿ ಚರ್ಚೆಗೆ ಅವಕಾಶ ಕೊಡುತ್ತೇವೆ ಎಂದರು. ಆದರೂ ಅವಕಾಶ ಸಿಗಲಿಲ್ಲ ಎಂದು ತಿಳಿಸಿದರು.

HD Kumaraswamy-Basavaraj Bommai Joint Press Meet in Bengaluru- What did the say on NICE project?

ನಾಡಿನ ಹಿತಾಸಕ್ತಿ ಕಾಪಾಡಲು ನಾವು ಬಿಜೆಪಿ ಜತೆ ಹೋರಾಟಕ್ಕೆ ಮುಂದಾಗಿದ್ದೇವೆ. ಜನರ ಭೂಮಿ ಕಬಳಿಸುವ ಈ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಹೋರಾಡುತ್ತೇವೆ. ಸರಕಾರ ಸದನ ಸಮಿತಿ ವರದಿ ಇಟ್ಟುಕೊಂಡು ಸುಮ್ಮನಿದ್ದರೆ ಯಾರಿಗೆ ಲಾಭ? ಈ ಯೋಜನೆಯನ್ನೂ ಸ್ಕ್ರಾಪ್ ಮಾಡಿದರೆ ₹30,000 ಕೋಟಿ ಹಣ ಸಿಗುತ್ತದೆ. ಭಾಗ್ಯಗಳಿಗೆ ಅದನ್ನು ಬಳಸಿ ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

ಈಗ ಬ್ರ್ಯಾಂಡ್ ಬೆಂಗಳೂರು ಎಂದು ಜಪ ಮಾಡುತ್ತಿರುವವರೇ ಹಿಂದೆ ನೈಸ್ ನೊಳಕ್ಕೆ ನೈಸಾಗಿ ಸೇರಿಕೊಂಡು ಸಹಕಾರ ನೀಡಿದ್ದರು. ಈಗ ಅವರೇ ಅಧಿಕಾರದಲ್ಲಿ ಇದ್ದಾರೆ. ಅದಕ್ಕೆ ಎರಡೂ ಪಕ್ಷಗಳ ವತಿಯಿಂದ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದೇವೆ. ಅಲ್ಲದೆ; ನೈಸ್ ರಸ್ತೆಯ ಸುತ್ತಮುತ್ತ ನಮ್ಮ ಪಕ್ಷವೂ ಒಳಗೊಂಡಂತೆ ಬೇರೆ ಯಾವುದೇ ಪಕ್ಷದ ರಾಜಕಾರಣಿಗಳ‌ ಭೂಮಿ ಇದ್ದರೆ ಈ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಹೇಳಿದರು.

2012ರೊಳಗೆ ಕಾಂಕ್ರೀಟ್ ರಸ್ತೆ ಮಾಡದೆ ಟೋಲ್ ಸಂಗ್ರಹ ಮಾಡುವಂತಿಲ್ಲ ಎನ್ನುವ ಷರತ್ತು ಯೋಜನೆಯಲ್ಲಿ ಇದೆ. ಆದರೆ, ಅಕ್ರಮವಾಗಿ ಟೋಲ್ ಸಂಗ್ರಹ ಮಾಡಲಾಗಿದೆ. ಈವರೆಗೂ ವಸೂಲು ಮಾಡಲಾಗಿರುವ 1325 ಕೋಟಿ ರೂಪಾಯಿ ಟೋಲ್ ಹಣವನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಸರಕಾರ ಕೂಡಲೇ ಹಣ ವಾಪಸ್ ಪಡೆಯಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

ಈ ಯೋಜನೆ ಬಗ್ಗೆ ಮಾತನಾಡಲೇಬಾರದು ಎಂದು ಮಾಜಿ ಪ್ರಧಾನಿ ದೇವೇಗೌಡರಿಗೆ 2 ಕೋಟಿ, ಮಾಜಿ ಸಚಿವ ಮಾಧುಸ್ವಾಮಿ ಅವರಿಗೆ 5 ಲಕ್ಷ ದಂಡ ಹಾಕಿದ್ದರು. ಈ ಸಂದರ್ಭದಲ್ಲಿ ಬೊಮ್ಮಾಯಿ ಸರ್ಕಾರ ಬಿಗಿ ಕ್ರಮಗಳನ್ನು ಕೈಗೊಂಡು, ಅದರ ಪರಿಣಾಮವಾಗಿ ಒಂದಿಷ್ಟು ನ್ಯಾಯಾಲಯ ಆ ಕಂಪನಿಗೆ ಛೀಮಾರಿ ಹಾಕಿದೆ. ಈಗ ಅಲ್ಲಲ್ಲಿ ವೈಟ್ ಟ್ಯಾಪಿಂಗ್ ರಸ್ತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನೈಸ್ ಅಕ್ರಮ ಇತಿಹಾಸದಲ್ಲಿ ಹಿಂದೆಂದೂ ಕಂಡೂ ಕೇಳರಿಯದ ಅಕ್ರಮ. ಇದರ ವಿರುದ್ಧ ಸದನದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಟಿ.ಬಿ.ಜಯಚಂದ್ರ ದನಿ ಎತ್ತಿದ್ದಾರೆ. ಅದರ ಅಕ್ರಮವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಹೀಗಾಗಿ ಸರಕಾರ ಮೀನಾಮೇಷ ಎಣಿಸದೆ ಯೋಜನೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಇಡೀ ಯೋಜನೆಯ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಹಿಂದಿನ ಬಿಜೆಪಿ ಸರಕಾರದ ವೇಳೆ ಸಂಪುಟದ ಉಪ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿಯು ಅನೇಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಿಫಾರಸು ಮಾಡಿದೆ. ರಸ್ತೆ ಕಾಮಗಾರಿಗೆ ರೈತರಿಂದ ಸ್ವಾಧೀನಕ್ಕೆ ಪಡೆದ ಭೂಮಿಯನ್ನು ಮಾರಾಟ ಮಾಡಿ ರಿಯಲ್ ಎಸ್ಟೇಟ್ ದಂಧೆ ನಡೆಸಲಾಗಿದೆ ಎಂದು ತಿಳಿಸಿದರು.

ಬಸವರಾಜ ಬೊಮ್ಮಾಯಿ‌ ಹೇಳಿದ್ದೇನು?

ನೈಸ್ ಯೋಜನೆಯಲ್ಲಿ ಅಕ್ರಮದ ಬಗ್ಗೆ ನಮ್ಮ ಕಾಲದಲ್ಲಿ ಅನೇಕ ಕ್ರಮಗಳು ಆಗಿವೆ. ಆ ನಿಟ್ಟಿನಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಒಂದಾಗಿ ಹೋರಾಟ ಮಾಡಲು ನಿರ್ಧಾರ ಮಾಡಿವೆ. ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ, ಬದಲಿಗೆ ಅನೇಕ ತಿರುವುಗಳು ಇರುತ್ತವೆ ಎಂದು ಬೊಮ್ಮಾಯಿ ಹೇಳಿದರು.

ಈ ರಸ್ತೆ ಕಾಮಗಾರಿಗೆ ಹೆಚ್ಚುವರಿ ಭೂಮಿಯನ್ನೂ ಪಡೆದುಕೊಳ್ಳಲಾಗಿದೆ. ಈ ಹೆಚ್ಚುವರಿ ಭೂಮಿಯನ್ನು ಏನು ಮಾಡಬೇಕು ಎನ್ನುವ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಸರಕಾರಕ್ಕೆ ಇದೆ ಎಂಬ ಮಾತನ್ನು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಅಲ್ಲದೆ, ಮತ್ತೆ ಹೊಸದಾಗಿ ಜಾಮೀನು ಸ್ವಾಧೀನಕ್ಕೆ ಪಡೆಯುವ ಹುನ್ನಾರವನ್ನು ನೈಸ್ ಕಂಪನಿ ನಡೆಸಿದೆ ಎಂದು ತಿಳಿಸಿದರು.

ಮುಖ್ಯವಾಗಿ ನೈಸ್ ಯೋಜನೆಗೆ ನೀಡಲಾಗಿರುವ ಹೆಚ್ಚುವರಿ ಭೂಮಿಯನ್ನು ಕಾನೂನು ಪ್ರಕಾರವೇ ಹಿಂಪಡೆಯಲು ಸಂಪುಟ ಉಪ ಸಮಿತಿ ಕೂಡ ಸ್ಪಷ್ಟವಾಗಿ ಶಿಫಾರಸು ಮಾಡಿದೆ. ಈ ನಿಟ್ಟಿನಲ್ಲಿ ಈಗಿನ ರಾಜ್ಯ ಸರಕಾರ ನೈಸ್ ಯೋಜನೆಯಿಂದ ಹೆಚ್ಚುವರಿ ಭೂಮಿಯನ್ನು ಈ ಕೂಡಲೇ ವಾಪಸ್ ಪಡೆಯಲು ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.

ಹೆಚ್ಚುವರಿ ಜಮೀನು ಅಂತಿಮವಾಗಿ ರಿಯಲ್ ಎಸ್ಟೇಟ್ ದಂಧೆಗೆ ಬಳಕೆ ಆಗುತ್ತಿದೆ. ಸರಕಾರ ಅದನ್ನು ತಡೆದು ವಶಕ್ಕೆ ಪಡೆಯಬೇಕು. ಈಗಾಗಲೇ ಬೆಂಗಳೂರು ಮೈಸೂರು ನಡುವೆ ಸುಸಜ್ಜಿತ ಎಕ್ಸ್ ಪ್ರೆಸ್ ಹೆದ್ದಾರಿ ನಿರ್ಮಾಣ ಆಗಿರುವುದರಿಂದ ನೈಸ್ ರಸ್ತೆ ಅಗತ್ಯ ಇಲ್ಲ. ಟೋಲ್ ಕೂಡ ಹೆಚ್ಚುವರಿಯಾಗಿ ಸಂಗ್ರಹ ಆಗಿದ್ದು, ಅದರ ಲೆಕ್ಕಪರಿಶೋಧನೆ ನಡೆಸಿ ಹಣವನ್ನು ವಸೂಲಿ ಮಾಡಬೇಕು ಎಂದು ಒತ್ತಾಯಿಸಿದರು.

ಸದನ ಸಮಿತಿ ವರದಿ, ಸಂಪುಟ ಉಪ ಸಮಿತಿ ವರದಿ, ಸುಪ್ರೀಂ ಕೋರ್ಟ್ ಆದೇಶದ ಆಧಾರದಲ್ಲಿ ಸರಕಾರದ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ರಾಜ್ಯ ಸರಕಾರದ ಸ್ಪಷ್ಟ ನಿಲುವು ತಿಳಿಸಬೇಕು. ಈ ಸರಕಾರದಲ್ಲಿ ಇರುವವರು ಈ ಹಿಂದೆ ಈ ಯೋಜನೆಗೆ ಸಂಬಂಧಿಸಿ ಹೇಗೆ ನಡೆದುಕೊಂಡಿದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಈ ಸರಕಾರ ಭ್ರಷ್ಟಾಚಾರದ ವಿರುದ್ದ ಇದೆಯೊ‌ ಇಲ್ಲವೋ ಅನ್ನುವುದು ಈ ಪ್ರಕರಣದಿಂದ ತಿಳಿಯಲಿದೆ ಎಂದು ಬೊಮ್ಮಾಯಿ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಮಾಜಿ ಸಚಿವರಾದ ಅರಗ ಜ್ಞಾನೇಂದ್ರ, ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕಿ ಶಾರದಾಪೂರ್ಯ ನಾಯಕ್, ಶಾಸಕರಾದ ನೆಮಿರಾಜ್ ನಾಯಕ್, ರಾಜೂಗೌಡ, ಕರೆಮ್ಮ ನಾಯಕ್, ಕೆ. ಎ.ತಿಪ್ಪೇಸ್ವಾಮಿ ಸೇರಿದಂತೆ ಅನೇಕರು ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+