ರಥ ಎಳೆಯುವಾಗ ಅಡ್ಡಿಯಾಗುವಂತೆ ಬಿಜೆಪಿಯವರು ಅಡ್ಡ ಬರ್ತಿದ್ದಾರೆ: ಎಚ್‌ಡಿಕೆ ಆರೋಪ
ಬೆಂಗಳೂರು, ಫೆಬ್ರವರಿ 5: ನಾಡಿನ ಜನತೆಗೆ ಉತ್ತಮ ಆಡಳಿತ ಕೊಡಬೇಕೆಂಬ ಉದ್ದೇಶ ನನಗಿದೆ. ಉತ್ತಮವಾದ ಬಜೆಟ್ ಮಂಡನೆ ಮಾಡುತ್ತೇನೆ. ಆದರೆ, ಎಲ್ಲ ಒಳ್ಳೆಯ ಕೆಲಸಗಳಿಗೂ ಬಿಜೆಪಿಯವರು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ರಥ ಎಳೆಯುವಾಗ ಅಡ್ಡಿಯಾಗುವ ರೀತಿಯಲ್ಲಿ, ನಾವು ಒಳ್ಳೆಯ ಕೆಲಸ ಮಾಡಲು ಹೊರಟರೆ ಬಿಜೆಪಿಯವರು ಯಾವಾಗಲೂ ಅಡ್ಡಿಪಡಿಸುತ್ತಿದ್ದಾರೆ. ಆದರೆ, ಇದಾವುದರಿಂದಲೂ ಬಿಜೆಪಿಯವರಿಗೆ ಉಪಯೋಗ ಆಗುವುದಿಲ್ಲ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡುವುದಿಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಅವರ ಹೇಳಿಕೆಗೆ ಉತ್ತರ ಕೊಡುವುದೇ ಅನವಶ್ಯಕ. ಅದು ಉತ್ತರ ಕೊಡುವ ವಿಷಯವೂ ಅಲ್ಲ. ಬಿಜೆಪಿಯವರು ಬೇರಾವುದೋ ಲೋಕದಲ್ಲಿದ್ದಾರೆ. ಅವರು ಆ ಲೋಕದಲ್ಲಿಯೇ ವಿಹರಿಸಿಕೊಂಡು ಇರಲಿ. ನನ್ನ ಕೆಲಸ ನಾನು ಮಾಡುತ್ತೇನೆ ಎಂದಿದ್ದಾರೆ.

ಬಿಜೆಪಿಯವರ ಆಪರೇಷನ್ ಕಮಲಕ್ಕೆ ವಿರುದ್ಧವಾಗಿ ಆ ಪಕ್ಷದ ಶಾಸಕರನ್ನೇ ಸೆಳೆಯುವ ರಿವರ್ಸ್ ಆಪರೇಷನ್ ಮಾಡುವ ಅಗತ್ಯ ನಮಗಿಲ್ಲ. ನಾನು ಯಾವ ಆಪರೇಷನ್‌ಗೂ ಕೈ ಹಾಕಿಲ್ಲ ಎಂದು ಹೇಳಿದ್ದಾರೆ.
ಬಜೆಟ್‌ಗೆ ಅಡ್ಡಿಪಡಿಸೊಲ್ಲ: ಯಡಿಯೂರಪ್ಪ
ಬಜೆಟ್ ಮಂಡನೆ ಸಂದರ್ಭದಲ್ಲಿ ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡುವ ನಿರ್ಧಾರದಿಂದ ಬಿಜೆಪಿ ಹಿಂದಕ್ಕೆ ಸರಿದಿದೆ.
ಕಾಂಗ್ರೆಸ್‌ನ ಅತೃಪ್ತ ಶಾಸಕರನ್ನು ಸೆಳೆಯುವ ಮೂಲಕ ಸಮ್ಮಿಶ್ರ ಸರ್ಕಾರವನ್ನು ದುರ್ಬಲಗೊಳಿಸುವ ಪ್ರಯತ್ನಕ್ಕೆ ಮುಂದಾಗಿದ್ದ ಬಿಜೆಪಿ ಅದರಿಂದ ಸತತ ಹಿನ್ನಡೆ ಅನುಭವಿಸಿತ್ತು. ಕಾಂಗ್ರೆಸ್‌ನಲ್ಲಿರುವ ಎಲ್ಲ ಅತೃಪ್ತ ಶಾಸಕರು ಬಿಜೆಪಿಯ ಜತೆ ಕೈಜೋಡಿಸುತ್ತಾರೆ ಎಂಬ ನಂಬಿಕೆ ಇಲ್ಲ. ಬಿಜೆಪಿ ಸರ್ಕಾರ ಸ್ಥಾಪಿಸಲು 12 ಶಾಸಕರ ಬೆಂಬಲ ಬೇಕಿದೆ. ಆದರೆ, ಕಾಂಗ್ರೆಸ್‌ನಿಂದ ಎಂಟು ಶಾಸಕರ ಬೆಂಬಲ ಸಿಗಬಹುದಷ್ಟೇ. ಇದರಿಂದ ಬಹುಮತಕ್ಕೆ ಅಗತ್ಯ ಸಂಖ್ಯೆ ಸಿಗುವುದಿಲ್ಲ. ಈ ಕಾರಣದಿಂದಾಗಿ ಅವಿಶ್ವಾಸ ನಿರ್ಣಯಕ್ಕೆ ಮುಂದಾಗುವುದು ಬೇಡ ಎಂದು ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಕುಮಾರಸ್ವಾಮಿ ಅವರು ಶುಕ್ರವಾರ ಬಜೆಟ್ ಮಂಡಿಸುವುದಿಲ್ಲ. ಆ ವೇಳೆಗೆ ಸರ್ಕಾರ ಪತನಗೊಳ್ಳಲಿದೆ ಎಂದು ಬಿಜೆಪಿ ಮುಖಂಡರು ಹೇಳಿಕೆ ನೀಡಿದ್ದರು.
ಆದರೆ, ನಾವು ಸರ್ಕಾರವನ್ನು ಅಸ್ಥಿರಗೊಳಿಸುತ್ತಿಲ್ಲ. ಬಜೆಟ್ ಮಂಡನೆಗೂ ನಾವು ಅಡ್ಡಿಪಡಿಸುವುದಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದರು.












Click it and Unblock the Notifications