ಪರಿಶಿಷ್ಟರಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡಲು ಚಿಂತನೆ: ದೇವೇಗೌಡ
ಬೆಂಗಳೂರು, ಜೂನ್ 26: ಕಾವೇರಿ ನದಿ ವಿವಾದ ಮತ್ತೆ ಭುಗಿಲೆದ್ದಿದ್ದರೂ ಮಾತನಾಡದ ಮಂಡ್ಯ ಸಂಸದರ ಬಗ್ಗೆ ನಾನು ಮಾತನಾಡುವುದಿಲ್ಲ. ಮಂಡ್ಯ ಸಂಸದರ ಕುರಿತು ನಾನು ಕಾಮೆಂಟ್ ಮಾಡುವುದಿಲ್ಲ. ನಾನೇಕೆ ಅವರ ಬಗ್ಗೆ ಹೇಳಲಿ? ಎಂದು ಸಂಸದೆ ಸುಮಲತಾ ಅಂಬರೀಷ್ ಅವರಿಗೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಟಾಂಗ್ ನೀಡಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವುದು ಭ್ರಷ್ಟ ಸರ್ಕಾರ ಎಂಬ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಆರೋಪಕ್ಕೆ ಪ್ರಜ್ವಲ್ ರೇವಣ್ಣ ಸಮರ್ಥವಾಗಿ ಉತ್ತರ ನೀಡಿದ್ದಾನೆ. ತಂದೆ ಮತ್ತು ಚಿಕ್ಕಪ್ಪನ ಹೋರಾಟದ ಬಗ್ಗೆ ಆತನಿಗೆ ತಿಳಿದಿದೆ. ಇದಲ್ಲದೆ ಮಂಡ್ಯದ ರೈತರ ಬೆಳೆಗಳಿಗೆ ಎರಡು ಟಿಎಂಸಿ ನೀರು ಕೊಡಿ ಎಂದು ಸಂಸತ್‌ನಲ್ಲಿ ಧ್ವನಿ ಎತ್ತಿದ್ದಾನೆ ಎಂಬುದಾಗಿ ಮೊಮ್ಮಗನನ್ನು ದೇವೇಗೌಡರು ಶ್ಲಾಘಿಸಿದರು.
ಪ್ರಜ್ವಲ್ ರೈತನ ಹೊಟ್ಟೆಯಲ್ಲಿ ಹುಟ್ಟಿಬಂದವನು. ಊರಲ್ಲಿ ಚೆನ್ನಾಗಿ ಬೆಳೆ ಬೆಳೆಯುತ್ತಾನೆ. ಈ ಮಾತು ಸುಳ್ಳು ಎನಿಸಿದ್ದರೆ, ಬನ್ನಿ ನಾನು ಕರೆದುಕೊಂಡು ಹೋಗಿ ತೋರಿಸುತ್ತೇನೆ. ನಿಜವಾದ ರೈತನ ಕೆಲಸ ಪ್ರಜ್ವಲ್ ಮಾಡುತ್ತಿದ್ದಾನೆ. ಕುಮಾರಸ್ವಾಮಿ ಈಗ ಅಲ್ಲಿ ಕೃಷಿ ಮಾಡಲು ಭೂಮಿ ಖರೀದಿಸಿದ್ದಾರೆ. ಅದಕ್ಕಾಗಿ ನಿಖಿಲ್ ಕೂಡ ಓಡಾಡುತ್ತಿದ್ದಾನೆ ಎಂದರು.

ಬಿಜೆಪಿಯವರ ಅಪಪ್ರಚಾರದಿಂದಾಗಿ ಜನರು ಕುಮಾರಸ್ವಾಮಿ ಅವರಿಗೆ ಕೇವಲ 37 ಸೀಟುಗಳನ್ನು ನೀಡಿದರು. ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದಾಗ ಬಿಜೆಪಿಯವರು ಟೀಕೆಗಳನ್ನು ಮಾಡಿದರು. ಆದರೂ ಸಿದ್ದರಾಮಯ್ಯ ಅವರ ಕಾರ್ಯಕ್ರಮಗಳನ್ನು ಮುಂದುವರಿಸುವುದರ ಜತೆಗೆ ಸಾಲಮನ್ನಾ ಮಾಡುವ ನಿರ್ಧಾರ ತೆಗೆದುಕೊಂಡರು. 10-20 ಲಕ್ಷ ಸಾಲವನ್ನು ಯಾರೋ ತೆಗೆದುಕೊಂಡಿದ್ದರೆ ಪಾಪ ಅದನ್ನು ಇವರು ತೀರಿಸಲು ಸಾಧ್ಯವೇ? ಎಂದು ಹೇಳಿದರು.
ವರ್ಷಕ್ಕೆ ಆರು ಸಾವಿರ ರೂಪಾಯಿ ಕೊಡುವ ಕಾರ್ಯಕ್ರಮಕ್ಕೆ ಇಡೀ ದೇಶದಾದ್ಯಂತ ಪ್ರಚಾರ ಮಾಡುತ್ತೀರಿ. ಸುಮ್ಮನೆ ಮಾತನಾಡಲು ನಮಗೂ ಬರುತ್ತದೆ. ಜನರಿಗೆ ನಾವು ಯಾವಾಗಲೂ ಮೋಸ ಮಾಡಲು ಆಗುವುದಿಲ್ಲ. ಪಾಪ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿ ಜನರ ಸಮಸ್ಯೆ ಆಲಿಸುತ್ತಿದ್ದಾರೆ. ಆಡಳಿತವನ್ನೂ ಸಮರ್ಪಕವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಹೀಗಿರುವಾಗ ಕುಮಾರಸ್ವಾಮಿಗೆ ತೊಂದರೆ ಕೊಟ್ಟರೆ ಹೇಗೆ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.
ನಮ್ಮ ಪಕ್ಷದಲ್ಲಿ ಆರು ಮಂದಿ ಪರಿಶಿಷ್ಟರಿದ್ದಾರೆ. ಅವರಿಗೆ ನಾನು ಏನನ್ನೂ ಮಾಡಿಲ್ಲ ಎಂಬ ಅಸಮಾಧಾನವಿದೆ. ಅದು ನನಗೆ ತಿಳಿಯುತ್ತದೆ. ಪರಿಶಿಷ್ಟರಿಗೇ ರಾಜ್ಯಾಧ್ಯಕ್ಷ ಸ್ಥಾನ ನೀಡಲು ಚಿಂತನೆ ನಡೆಸಲಾಗುತ್ತಿದೆ ಎಂದು ದೇವೇಗೌಡ ತಿಳಿಸಿದರು.
ಮಧು ಬಂಗಾರಪ್ಪ ಅವರಿಗೆ ಅಧ್ಯಕ್ಷ ಸ್ಥಾನ ನಿಭಾಯಿಸುವ ಅರ್ಹತೆ ಮತ್ತು ಶಕ್ತಿ ಇದೆ. ಪಕ್ಷದ ಎಲ್ಲ ಮುಖಂಡರನ್ನೂ ಕರೆದು ಸಭೆ ನಡೆಸಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.












Click it and Unblock the Notifications