ಭೂ ಸ್ವಾಧೀನ; ಬಿಡಿಎಗೆ ಹೈಕೋರ್ಟ್ ತಪರಾಕಿ, 25 ಸಾವಿರ ದಂಡ!
ಬೆಂಗಳೂರು, ಅಕ್ಟೋಬರ್ 27; ಬಡವಾಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡ ಭೂಮಿಗೆ ಬದಲಾಗಿ ಅದರ ಮಾಲೀಕರಿಗೆ ಐದು ದಶಕ ಕಳೆದರೂ ಪರಿಹಾರ ನೀಡದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕ್ರಮವನ್ನು ಕರ್ನಾಟಕ ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ. ಅಲ್ಲದೆ, ಬಿಡಿಎ ಇನ್ನಾದರೂ ಬುದ್ದಿ ಕಲಿಯಲಿ ಎಂದು ಕಿವಿಮಾತು ಹೇಳಿರುವ ನ್ಯಾಯಾಲಯ, ಭವಿಷ್ಯದಲ್ಲಿ ಇಂತಹ ನಿರ್ಲಕ್ಷ್ಯ ಮರುಕಳಿಸಬಾರದು ಎಂದು 25 ಸಾವಿರ ರೂ. ದಂಡ ವಿಧಿಸಿದೆ.
ಬೆಂಗಳೂರಿನ ಆರ್. ಟಿ. ನಗರದ ಕಾವಲಬೈರಸಂದ್ರ ನಿವಾಸಿ ಎ. ಲಕ್ಷ್ಮೀಪತಿ ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಲೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯಪೀಠ ಈ ಆದೇಶ ಮಾಡಿದೆ. ಭೂಮಾಲೀಕರಿಗೆ ಪಾವತಿಸಬೇಕಾದ 45,150 ರೂ. ಪರಿಹಾರ ಮೊತ್ತ ಹಾಗೂ ದಂಡದ ರೂಪದಲ್ಲಿ ಹೆಚ್ಚುವರಿಯಾಗಿ 25 ಸಾವಿರ ರೂ.ಗಳನ್ನು ನಾಲ್ಕು ವಾರಗಳಲ್ಲಿ ಪಾವತಿಸಬೇಕು ಎಂದು ಆದೇಶಿಸಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.

ಭೂಪರಿಹಾರ ಸಂಬಂಧ 2022ರ ನವೆಂಬರ್ 3ರಂದು ಏಕಸದಸ್ಯ ನ್ಯಾಯಪೀಠ ಆದೇಶಿಸಿತ್ತು. ಅದನ್ನು ಬಿಡಿಎ ಪಾಲಿಸಿರಲಿಲ್ಲ. ಅದಕ್ಕಾಗಿ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು. ಮುಖ್ಯ ಕಾರ್ಯದರ್ಶಿ ವಂದಿತ ಶರ್ಮಾ, ಬಿಡಿಎ ಆಯುಕ್ತ ಕುಮಾರ ನಾಯ್ಕ್ , ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಆರೋಪಿಗಳನ್ನಾಾಗಿ ಮಾಡಲಾಗಿತ್ತು.
ಏನಿದು ಪ್ರಕರಣ?; ಬಡಾವಣೆ ನಿರ್ಮಾಣಕ್ಕೆ ಮಠದಹಳ್ಳಿಯಲ್ಲಿ ಅರ್ಜಿದಾರರಿಗೆ ಸೇರಿದ 3 ಎಕರೆ ಜಮೀನನ್ನು 1972-73ರಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿದೆ. ಅದಕ್ಕೆ 45,150 ರೂ. ಪರಿಹಾರ ಸಹ ನಿಗದಿಯಾಗಿದೆ. ಆದರೆ, ಐದು ದಶಕ ಕಳೆದರೂ ಪರಿಹಾರ ಸಿಕ್ಕಿಲ್ಲ. ನ್ಯಾಯ ಪಡೆದುಕೊಳ್ಳಲು ಭೂಮಿ ಕಳೆದರುಕೊಂಡವರು ಕಚೇರಿಯಿಂದ ಕಚೇರಿಗೆ ಅಲೆದಿದ್ದಾರೆ.
ಕೋರ್ಟ್ ಮೆಟ್ಟಿಲೇರಿದ್ದಾರೆ. ಏಕಸದಸ್ಯ ನ್ಯಾಯಪೀಠ ಭೂಮಾಲೀಕರ ಪರವಾಗಿ ಆದೇಶವೂ ಮಾಡಿದೆ, ಅದನ್ನೂ ಪಾಲಿಸಿಲ್ಲ. ಅದಕ್ಕಾಾಗಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಬೇಕಾಯಿತು, ಕಾನೂನು ಹೋರಾಟ ನಡೆಸಲು ಆರ್ಥಿಕ ಸಮಸ್ಯೆಯನ್ನೂ ಸಹ ಎದುರಿಸಬೇಕಾಯಿತು.
ಇದು ಬಿಡಿಎಗೆ ಬಿಸಿ ಮುಟ್ಟಿಸುವಂತಹ ಪ್ರಕರಣ. ಬಿಡಿಎ ಬುದ್ಧಿ ಕಲಿಯಬೇಕು ಮತ್ತು ಭವಿಷ್ಯದಲ್ಲಿ ಈ ರೀತಿ ಆಗಬಾರದು ಎಂದು ಬಿಡಿಎಗೆ 25 ಸಾವಿರ ರೂ. ದಂಡ ವಿಧಿಸಲಾಗುತ್ತಿದೆ. ಆ ಹಣವನ್ನು ಬಿಡಿಎ ಜಮೀನು ಕಳೆದುಕೊಂಡವರಿಗೆ ಪಾವತಿಸಬೇಕು ಎಂದು ನ್ಯಾಯಪೀಠ ಹೇಳಿದೆ.












Click it and Unblock the Notifications