ಬೆಂ.ವಿ.ವಿ. ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್ ನೇಮಕ ರದ್ದು ಎತ್ತಿಹಿಡಿದ ಹೈಕೋರ್ಟ್
ಬೆಂಗಳೂರು, ಮಾರ್ಚ್ 16: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ಡಾ.ಕೆ.ಆರ್. ವೇಣುಗೋಪಾಲ್ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಹೊರಡಿಸಿದ್ದ ಆದೇಶ ರದ್ದುಪಡಿಸಿದ್ದ ಹೈಕೋರ್ಟ್ ಏಕಸದಸ್ಯಪೀಠದ ಆದೇಶವನ್ನು ವಿಭಾಗೀಯಪೀಠ ಬುಧವಾರ ಎತ್ತಿಹಿಡಿದಿದೆ.
ಇದರಿಂದಾಗಿ ಕುಲಪತಿ ವೇಣುಗೋಪಾಲ್ ತಮ್ಮ ಹುದ್ದೆ ತ್ಯಜಿಸಬೇಕಾಗುತ್ತದೆ. ನ್ಯಾಯಾಲಯದ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಅವರು ಈವರೆಗೆ ಕುಲಪತಿಯಾಗಿ ಮುಂದುವರಿದಿದ್ದರು. ಅವರ ಸೇವಾವಧಿ ಜೂನ್ 12ರವರೆಗೆ ಇದೆ, ಆದರೂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹುದ್ದೆ ತ್ಯಜಿಸಬೇಕು, ಇಲ್ಲವೇ ಸುಪ್ರೀಂಕೋರ್ಟ್ ಮೊರೆ ಹೋಗಿ ಕೂಡಲೇ ಹೈಕೋರ್ಟ್ ವಿಭಾಗೀಯಪೀಠದ ಆದೇಶಕ್ಕೆ ತಡೆಯಾಜ್ಞೆ ತರಬೇಕಾದ ಅನಿವಾರ್ಯತೆ ಎದುರಾಗಿದೆ.
ಏಕಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಬೆಂಗಳೂರು ವಿಶ್ವವಿದ್ಯಾಲಯ, ರಾಜ್ಯಪಾಲರ ಕಚೇರಿ, ಡಾ.ಕೆ. ಆರ್. ವೇಣುಗೋಪಾಲ್ ಮತ್ತು ರಾಜ್ಯ ಉನ್ನತ ಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರತ್ಯೇಕ ನಾಲ್ಕು ಮೇಲ್ಮನವಿ ಕುರಿತು ನ್ಯಾಯಮೂರ್ತಿ ಎಸ್.ಸುಜಾತ ಮತ್ತು ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ್ ಅವರಿದ್ದ ವಿಭಾಗೀಯಪೀಠ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು.

ಬುಧವಾರ ನ್ಯಾಯಪೀಠ ತೀರ್ಪು ಪ್ರಕಟಿಸಿದ್ದು, ಎಲ್ಲಾ ಮೇಲ್ಮನವಿಗಳನ್ನು ವಜಾಗೊಳಿಸಿ ಏಕಸದಸ್ಯಪೀಠದ ಆದೇಶ ಎತ್ತಿಹಿಡಿದಿದೆ.
ವಿಭಾಗೀಯಪೀಠದ ತೀರ್ಪು ಏನು?: ''ನಾಲ್ಕು ಮೇಲ್ಮನವಿಗಳನ್ನು ವಜಾಗೊಳಿಸಿರುವ ವಿಭಾಗೀಯಪೀಠ, 2018ರ ಜೂ.12ರಂದು ನೇಮಕ ಆದೇಶ ಹೊರಡಿಸಲಾಗಿದೆ. ಅದಕ್ಕೆ ಸರ್ಕಾರದ ಅನುಮೋದನೆ ಇರಲಿಲ್ಲ. ತದ ನಂತರ 2018ರ ಜೂ.28ರಂದು ಸರ್ಕಾರ ಅನುಮೋದನೆ ನೀಡಿದೆ. ಇದು ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ-2000ರ ಸೆಕ್ಷನ್ 14(4)ರ ಸ್ಪಷ್ಟ ಉಲ್ಲಂಘನೆಯಾಗಿದೆ'' ಎಂದು ಆದೇಶಿಸಿದೆ.
ಅಲ್ಲದೆ, ಸರ್ಕಾರದ ಅನುಮೋದನೆ ಪಡೆದ ನಂತರವೇ ನೇಮಕ ಆದೇಶ ಹೊರಡಿಸಬೇಕಿದೆ. ಅದು ಬಿಟ್ಟು ನೇಮಕಾತಿ ಆದೇಶ ಹೊರಡಿಸಿದ ನಂತರ ಸರ್ಕಾರದ ಅನುಮೋದನೆ ನೀಡಿದರೆ, ಅದು ನೇಮಕದಲ್ಲಿ ಲೋಪವಾದಂತಾಗುತ್ತದೆ. ಆದ್ದರಿಂದ ವೇಣುಗೋಪಾಲ್ ಅವರನ್ನು ಕುಲಪತಿಗೆ ನೇಮಿಸಿದ ಆದೇಶ ರದ್ದುಪಡಿಸಿ ಏಕಸದಸ್ಯಪೀಠ ನೀಡಿರುವ ತೀರ್ಪು ಸರಿ ಇದ್ದು, ಅದರಲ್ಲಿ ಹಸ್ತಕ್ಷೇಪ ಮಾಡಲಾಗದು ಎಂದು ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಡಾ.ಕೆ.ಆರ್.ವೇಣುಗೋಪಾಲ್ ಅವರನ್ನು ಕುಲಪತಿ ಹುದ್ದೆಗೆ ನಾಲ್ಕು ವರ್ಷ ಅವಧಿ ಅಥವಾ ಅವರಿಗೆ 67 ವರ್ಷ ತುಂಬುವವರೆಗೆ, ಈ ಎರಡರಲ್ಲಿ ಯಾವುದು ಮೊದಲು ಘಟಿಸುವುದಕ್ಕೆ ಅಲ್ಲಿಯವರೆಗೆ ನೇಮಕ ಮಾಡಿ 2018ರ ಜೂ.12ರ ಆದೇಶಿಸಲಾಗಿತ್ತು. ಏಕ ಸದಸ್ಯ ನ್ಯಾಯಪೀಠವು 2019ರ ಸೆ.24ರಂದು ವೇಣುಗೋಪಾಲ್ ನೇಮಕ ರದ್ದುಪಡಿಸಿತ್ತು. ಆ ಆದೇಶಕ್ಕೆ ವಿಭಾಗೀಯಪೀಠ ತಡೆಯಾಜ್ಞೆ ನೀಡಿತ್ತು.
ಡಾ.ಕೆ.ಆರ್. ವೇಣುಗೋಪಾಲ್ ನೇಮಕ ಪ್ರಶ್ನಿಸಿ ನಿವೃತ್ತ ಪ್ರೊ.ಸಂಗಮೇಶ್ ಪಾಟೀಲ್ ಹೈಕೋರ್ಟ್ ಮೊರೆ ಹೋಗಿದ್ದರು, ಸರ್ಕಾರದ ಅನುಮೋದನೆ ಇಲ್ಲದೆಯೇ ಡಾ.ವೇಣುಗೋಪಾಲ್ ಅವರನ್ನು ಕುಲಪತಿ ಹುದ್ದೆಗೆ ನೇಮಿಸಿರುವುದು ಕಾನೂನು ಬಾಹಿರ ಎಂದು ವಾದಿಸಿದ್ದರು. ಈ ವಾದ ಪುರಸ್ಕರಿಸಿದ್ದ ಏಕ ಸದಸ್ಯ ಪೀಠ, ಡಾ.ವೇಣುಗೋಪಾಲ್ ಅವರನ್ನು ಕುಲಪತಿಗೆ ನೇಮಿಸಿದ್ದ ಆದೇಶ ರದ್ದುಪಡಿಸಿತ್ತು.












Click it and Unblock the Notifications