ಚಿಕಿತ್ಸೆ ವೇಳೆ ಎಚ್‌ಐವಿ: ಕೇಸ್ ದಾಖಲಿಸದ ಪೊಲೀಸರಿಗೆ ಕೋರ್ಟ್ ತರಾಟೆ
ಬೆಂಗಳೂರು, ಏಪ್ರಿಲ್ 13: ಚಿಕಿತ್ಸೆ ವೇಳೆ ನೀಡಿದ ರಕ್ತದಿಂದ ತಮಗೆ ಎಚ್‌ಐವಿ ಸೋಂಕು ತಗುಲಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ನೀಡಿದ್ದ ದೂರಿನ ಸಂಬಂಧ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿರುವ ಪೊಲೀಸರ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಪೊಲೀಸರು ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ್ದಕ್ಕೆ ಮತ್ತು ಮಡಿವಾಳ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಕುರಿತು ಸರ್ಕಾರಿ ವಕೀಲರನ್ನು ತರಾಟೆಗೆ ತೆಗೆದುಕೊಂಡ ಪೀಠ, ನೀವು ನೀಡುತ್ತಿರುವ ಸಮಜಾಯಿಷಿ ತೃಪ್ತಿಕರವಾಗಿಲ್ಲ. ಒಂದಕ್ಕೊಂದು ತಾಳೆಯಾಗದ ವಿವರಣೆ ನೀಡುತ್ತಿದ್ದೀರಿ. ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ, ವಸ್ತುನಿಷ್ಠವಾಗಿ ಮತ್ತು ಸಮರ್ಥಚಾಗಿ ನಡೆಯಬೇಕು. ಹೀಗಾಗಿ ಕೋರ್ಟ್ ಮೇಲ್ವಿಚಾರಣೆಯಲ್ಲಿ ಪ್ರಕರಣದ ತನಿಖೆ ನಡೆಯಲಿ. ಈ ಸಂಬಂಧ ಪ್ರತಿ 15 ದಿನಗಳಿಗೊಮ್ಮೆ ತನಿಖೆಯ ವರದಿಯನ್ನು ನ್ಯಾಯಾಲಯಕ್ಕೆ ನೀಡಬೇಕು ಎಂದು ಆದೇಶಿಸಿ ವಿಚಾರಣೆ ಮುಂದೂಡಿದೆ.

ಲಕ್ಕಸಂದ್ರದ 45 ವರ್ಷದ ಮಹಿಳೆಯೊಬ್ಬರು ಪ್ರತಿಷ್ಠಿತ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ 2014ರಲ್ಲಿ ಚಿಕಿತ್ಸೆ ಪಡೆದಿದ್ದರು. ಈ ವೇಳೆ ಅವರಿಗೆ ರಕ್ತ ನೀಡಲಾಗಿತ್ತು. ಆಸ್ಪತ್ರೆಯಲ್ಲಿ ನೀಡಿದ ರಕ್ತದಿಂದ ನನಗೆ ಎಚ್ಐವಿ ಸೋಂಕು ತಗುಲಿದೆ ಎಂಬುದು ಮಹಿಳೆಯ ಆಕ್ಷೇಪಣೆ. ಈ ಕುರಿತಂತೆ ನಾನು ನೀಡಿದ ದೂರನ್ನು ಪೊಲೀಸರು ತಕ್ಷಣ ಸ್ವೀಕರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಮತ್ತು ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಲಾಗಿದೆ ಎಂದು ದೂರಿರುವ ಮಹಿಳೆ, ಈ ಕುರಿತು ಆಸ್ಪತ್ರೆ ಆಡಳಿತ ಮಂಡಳಿ ಮತ್ತು ಪೊಲೀಸರು ನನ್ನ ಅಹವಾಲಿಗೆ ಮಾನ್ಯತೆ ನೀಡುತ್ತಿಲ್ಲ. ಆದ್ದರಿಂದ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿದ್ದಾರೆ.












Click it and Unblock the Notifications