Namma Metro: ಮರಗಳ ಸ್ಥಳಾಂತರದ ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ
ಬೆಂಗಳೂರು, ನವೆಂಬರ್ 17: 'ನಮ್ಮ ಮಟ್ರೋ' ಮಾರ್ಗ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಯಾವ ಪ್ರದೇಶಗಳಲ್ಲಿ ಎಷ್ಟು ಗಿಡ ನೆಡಲಾಗಿದೆ?. ಈಗಾಗಲೇ ಎಷ್ಟು ಮರಗಳನ್ನು ಸ್ಥಳಾಂತರ ಮಾಡಿದ್ದೀರಿ? ಎಂದು ಕರ್ನಾಟಕ ರಾಜ್ಯ ಹೈಕೋರ್ಟ್ ಪ್ರಶ್ನಿಸಿದೆ. ಈ ಕುರಿತು ವರದಿ ಸಲ್ಲಿಸಲು ಬೆಂಗಳೂರು ಮೆಟ್ರೊ ರೈಲು ಅಭಿವೃದ್ಧಿ ನಿಗಮಕ್ಕೆ (ಬಿಎಂಆರ್‌ಸಿಎಲ್) ಹೈಕೋರ್ಟ್ ಸೂಚಿಸಿದೆ.
ಬೆಂಗಳೂರಿನಾದ್ಯಂತ ಹಲವು ಕಡೆಗಳಲ್ಲಿ ಮೆಟ್ರೋ ಕಾಮಗಾರಿಗಳು ನಡೆಯುತ್ತಿವೆ. ಕೆಲವೆಡೆ ಕಾಮಗಾರಿ ನಡೆಸಲು ರೂಪರೇಷೆ ಸಿದ್ಧಗೊಂಡಿದೆ. ಈ ಸಂಬಂಧ ಮರ ಕಡಿಯುವುದರ ವಿರುದ್ಧ ಹೈಕೋರ್ಟ್‌ಗೆ ಪರಿಸರವಾದಿ ಟಿ.ದತ್ತಾತ್ರೇಯ ದೇವರೆ ಹಾಗೂ 'ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್' ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದೆ.
ಬುಧವಾರ ಈ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಬೆಂಗಳೂರು ಮೆಟ್ರೊ ರೈಲು ಅಭಿವೃದ್ಧಿ ನಿಗಮಕ್ಕೆ (ಬಿಎಂಆರ್‌ಸಿಎಲ್) ನವೆಂಬರ್ 18ರೊಳಗೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿತು.
ನಮ್ಮ ಮೆಟ್ರೋ ಗಿಡಗಳನ್ನು ನೆಟ್ಟಿರುವುದನ್ನು ಯಾವ ಪ್ರಾಧಿಕಾರ ಪರಿಶೀಲಿಸಿದೆ. ಅದಕ್ಕಾಗಿ ನೀಡಿರುವ ಒಪ್ಪಿಗೆ, ನಿರ್ದಿಷ್ಟ ಪ್ರದೇಶದಲ್ಲಿ ನೆಡಲಾಗಿರುವ ಗಿಡಗಳ ಸಂಖ್ಯೆ ಎಷ್ಟು? ಎಂಬುದರ ಬಗ್ಗೆ ಹೈಕೋರ್ಟ್ ಪ್ರಶ್ನಿಸಿತು. ಬಳಿಕ ಈ ಸಂಬಂಧ ಮಾಹಿತಿ ಒಳಗೊಂಡ ವರದಿ ಸಲ್ಲಿಸುವಂತೆ ನ್ಯಾಯಪೀಠ ತಿಳಿಸಿತು.

ನಗರದಲ್ಲಿ ನಡೆಯುತ್ತಿರುವ ಮೆಟ್ರೊ ಕಾಮಗಾರಿಗೆ ಮಧ್ಯಂತರ ತಡೆ ನೀಡಿಲ್ಲ. ಆದರೆ ಗಿಡ ನೆಟ್ಟಿರುವುದು ಮತ್ತು ಮರಗಳ ಸ್ಥಳಾಂತರ ಎಷ್ಟಾಗಿವೆ, ಕೈಗೊಂಡ ಕ್ರಮ ಕುರಿತಂತೆ ಸಮಗ್ರ ವರದಿಯನ್ನು ಸಲ್ಲಿಸಲು ಬಿಎಂಆರ್‌ಸಿಎಲ್‌ಗೆ ಸೂಚಿಸಿತು. ನಂತರ ಅರ್ಜಿ ವಿಚಾರಣೆಯನ್ನು ನವೆಂಬರ್ 22ಕ್ಕೆ ಮುಂದೂಡಿ ನ್ಯಾಯಪೀಠ ಆದೇಶಿಸಿದೆ.
ನಮ್ಮ ಮೆಟ್ರೋ 2ನೇ ಹಂತದಲ್ಲಿ ಕೆ.ಆರ್.ಪುರಂನಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣ (ಕೆಐಎ) ಸಂಪರ್ಕಿಸುವ ಮಾರ್ಗ (2B) ನಿರ್ಮಾಣದಲ್ಲಿ ಭೂಸ್ವಾಧೀನ ಕಾರ್ಯ ಪೂರ್ಣವಾದ ಬಳಿಕ ಎರಡು ವರ್ಷದಿಂದ ಕಾಮಗಾರಿ ನಡೆಯುತ್ತಿದೆ.
ಅದೇ ರೀತಿ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್ ಪುರಂವರೆಗೆ (2A) ಮೆಟ್ರೋ ಮಾರ್ಗ ನಿರ್ಮಾಣ, ಅಲ್ಲದೇ ಇತ್ತೀಚೆಗೆ ಸರ್ಕಾರ ಆರ್.ವಿ ರಸ್ತೆ, ಬೊಮ್ಮಸಂದ್ರ ಮಾರ್ಗವನ್ನು ಹೊಸೂರು ತನಕ ವಿಸ್ತರಿಸುವ ಪ್ರಸ್ತಾವನೆಗೂ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಟೆಂಡರ್ ಕರೆದ ನಂತರ ಕಾಮಗಾರಿಗೆ ಅಗತ್ಯವಾದ ಪ್ರದೇಶದಲ್ಲಿ ಗಿಡ ಮರಗಳನ್ನು ಕಡೆಯಲಾಗುತ್ತದೆ, ಇಲ್ಲವೇ ಸ್ಥಳಾಂತರಿಸಲಾಗುತ್ತದೆ. ಇದನ್ನು ಆಕ್ಷೇಪಿಸಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆಯಾಗಿದೆ.












Click it and Unblock the Notifications