ಚೀನಾ ಮಹಿಳೆಯ ವೀಸಾ ವಿಸ್ತರಣೆಗೆ ಹೈಕೋರ್ಟ್ ನಕಾರ
ಬೆಂಗಳೂರು, ಆಗಸ್ಟ್ 20: ಆ್ಯಪ್ ವಂಚನೆ ಪ್ರಕರಣದಲ್ಲಿ ಸಿಲುಕಿರುವ ಚೀನಾ ಮೂಲದ ಮಹಿಳೆಯೊಬ್ಬರ ವೀಸಾ ಅವಧಿ ವಿಸ್ತರಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಅಲ್ಲದೇ, ಈ ವಿಚಾರದಲ್ಲಿ ನಿರ್ದೇಶನ ನೀಡಲು ಸಾಧ್ಯವಿಲ್ಲ, ಇದು ಅತ್ಯಂತ ಗಂಭೀರ ವಿಚಾರ ಎಂದು ಅರ್ಜಿಯನ್ನು ವಜಾಗೊಳಿಸಿದೆ.
ಬೆಂಗಳೂರು ನಗರದ ಮಾರತ್ ಹಳ್ಳಿ ಸಮೀಪದ ಗುಂಜೂರಿನ ವಾಸಿ ಚೀನಾ ಮೂಲದ ಮಹಿಳೆ ಹು ಕ್ಸಿಯಾಲಿನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ ತಿರಸ್ಕರಿಸಿದೆ.

ವಾದ-ಪ್ರತಿವಾದ ಆಲಿಸಿ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯ, ವಿಚಾರಣಾ ನ್ಯಾಯಾಲಯಗಳಲ್ಲಿ ಆರೋಪ ಸಾಬೀತಾಗುವವರೆಗೆ ಪ್ರತಿಯೊಬ್ಬ ಆರೋಪಿಯೂ ತನ್ನನ್ನು ತಾನು ಅಮಾಯಕರು, ಅನಗತ್ಯವಾಗಿ ತಮ್ಮನ್ನು ಸಿಲುಕಿಸಿದ್ದಾರೆಂದು ಹೇಳುತ್ತಿರುತ್ತಾರೆ. ಅಂತಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಇದೇ ಬಗೆಯ ಚೀನಾದ ಮತ್ತೊಬ್ಬ ಮಹಿಳೆ ಲಿ ಡೋಂಗ್ ಪ್ರಕರಣದಲ್ಲೂ ವೀಸಾ ವಿಸ್ತರಣೆ ಮನವಿ ಮಾಡಲಾಗಿತ್ತು. ಆಗಲೂ ಕೋರ್ಟ್ ತಿರಸ್ಕರಿಸಿದೆ, ಹಾಗಾಗಿ ಈ ಕೇಸಿನಲ್ಲೂ ಅರ್ಜಿದಾರರಿಗೆ ಪರಿಹಾರ ನೀಡಲಾಗದು ಎಂದು ಆದೇಶಿಸಿದೆ.
ವೀಸಾ ವಿಸ್ತರಣೆ ಅಸಾಧ್ಯ: ವಿದೇಶಿ ಪ್ರಜೆಗಳು ಭಾರತಕ್ಕೆ ಬಂದಿದ್ದಾಗ ವೀಸಾ ಅವಧಿ ಮುಗಿದ ತಕ್ಷಣ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಚೀನಾದ ಮಹಿಳೆ ಲಿ ಡೋಂಗ್ ಪ್ರಕರಣದಲ್ಲೂ ಸಹ ಆಕೆ ಅವಧಿ ಮುಗಿದ ನಂತರವೂ ಭಾರತದಲ್ಲೇ ನೆಲೆಸಿದ್ದರು ಮತ್ತು ವೀಸಾ ವಿಸ್ತರಣೆ ಕೋರಿದ್ದರು. ಆಗಲೂ ನ್ಯಾಯಾಲಯ ತಿರಸ್ಕರಿಸಿತ್ತು. ಅದೇ ಆಧಾರದ ಮೇಲೆ ಈಗಲೂ ಮನವಿ ತಿರಸ್ಕರಿಸಲಾಗುತ್ತಿದೆ ಎಂದು ನ್ಯಾಯಪೀಠ ಹೇಳಿದೆ.
ಕೇರಳ ಮೂಲದ ಅನಾಸ್ ಆಹಮದ್‌ನನ್ನು ಮದುವೆಯಾಗಿರುವ ಅರ್ಜಿದಾರರು, ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸಲಾಗಿದೆ, ತಾವು ಅಮಾಯಕರು. ಎರಡೂ ಪ್ರಕರಣಗಳಲ್ಲಿ ಇನ್ನೂ ತನಿಖೆ ಪೂರ್ಣವಾಗಿಲ್ಲ, ಆದರೆ ತಾವು ತನಿಖೆಗೆ ಮತ್ತು ವಿಚಾರಣೆಗೆ ಸಹಕರಿಸಲು ಸಿದ್ಧ. ಚೀನಾದಲ್ಲಿ ತಮ್ಮ ತಾಯಿಯನ್ನು ನೋಡಲು ತನಗೆ ಹಾಗೂ ತನ್ನ 8 ವರ್ಷದ ಮಗುವಿಗೆ ವೀಸಾ ವಿಸ್ತರಣೆಗೆ ನಿರ್ದೇಶನ ನೀಡಬೇಕೆಂದು ಕೋರಿದ್ದರು.
ಆದರೆ ಕೇಂದ್ರ ಸರಕಾರಿ ವಕೀಲರು, ಈ ಪ್ರಕರಣದಲ್ಲಿ ವೀಸಾ ಮಂಜೂರು ಮಾಡುವ ಪ್ರಶ್ನೆ ಮಾತ್ರವಲ್ಲ, ದೇಶದ ಸಾರ್ವಭೌಮತ್ವ ಪ್ರಶ್ನೆ ಇದೆ. ಜತೆಗೆ ಆರೋಪಿ ವಂಚನೆ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಯಾವುದೇ ಕಾರಣಕ್ಕೂ ಅವರ ವೀಸಾ ವಿಸ್ತರಣೆ ಮಾಡಲಾಗದು ಎಂದು ತಿಳಿಸಿದ್ದರು.
ಏನಿದು ಪ್ರಕರಣ?; ರಾಜೋರ್‌ಪೇ ಸಾಫ್ಟವೇರ್ ಪ್ರೈವೆಟ್ ಲಿಮಿಟೆಡ್ ನೀಡಿದ್ದ ದೂರಿನ ಮೇರೆಗೆ ಸೈಬರ್ ಕ್ರೈಂ ಪೊಲೀಸರು ಹು ಕ್ಸಿಯಾಲಿನ್ ಮತ್ತು ಆಕೆಯ ಪತಿಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆ ಮತ್ತು ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯಿದೆ ಸೇರಿ ಹಲವು ಕಾಯಿದೆಗಳಡಿ ಪ್ರಕರಣ ದಾಖಲಿಸಿದ್ದರು.
ಅಲ್ಲದೇ, ಪತಿ ಅಹಮದ್ ವಿರುದ್ಧ ಜಾರಿ ನಿರ್ದೇಶನಾಲಯ ಹಣ ದುರ್ಬಳಕೆ ತಡೆ ಕಾಯಿದೆ ಅಡಿ ಪ್ರಕರಣ ಹೂಡಿದ್ದರು. ಪತ್ನಿ ಹಾಗೂ ಪತಿ ಇಬ್ಬರೂ ಸಹ ಪವರ್ ಬ್ಯಾಂಕ್ ಆ್ಯಪ್ ಅನ್ನು ಬಳಸಿ ಚೀನಾದ ಸಂಪರ್ಕದೊಂದಿಗೆ ಸಾವಿರಾರು ಜನರಿಗೆ ಹೆಚ್ಚಿನ ಬಡ್ಡಿ ನೀಡುವ ಆಮಿಷವೊಡ್ಡಿ ವಂಚನೆ ಎಸಗಿದ್ದಾರೆ ಎಂಬುದು ಆರೋಪವಾಗಿದೆ.












Click it and Unblock the Notifications