ಬಿಡಿಎ ಅಧ್ಯಕ್ಷರಾಗಿ ಎಸ್.ಆರ್.ವಿಶ್ವನಾಥ್ ನೇಮಕ ರದ್ದುಗೊಳಿಸಲು ಹೈಕೋರ್ಟ್ ನಕಾರ
ಬೆಂಗಳೂರು,ಸೆ.3. ಬಿಡಿಎ ಅಧ್ಯಕ್ಷರಾಗಿ ನೇಮಕಗೊಂಡಿರುವ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್. ವಿಶ್ವನಾಥ್ ಹೈಕೋರ್ಟ್ ನಿಂದ ಬಿಗ್ ರಿಲೀಫ್ ಸಿಕ್ಕಿದೆ.
ಅವರ ನೇಮಕ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ, ಆದರೆ ಇನ್ನು ಮುಂದೆ ಬಿಡಿಎ ಅಧ್ಯಕ್ಷರು ಮತ್ತು ಸದಸ್ಯರ ನೇಮಕಕ್ಕೆ ಪ್ರತ್ಯೇಕ ವಿಶೇಷ ನಿಯಮಾವಳಿ ರೂಪಿಸಬೇಕು ಎಂದು . ಹೈಕೋರ್ಟ್ ವಿಭಾಗೀಯಪೀಠ ಸರ್ಕಾರಕ್ಕೆ ಸೂಚನೆ ನೀಡಿದೆ. ಹಾಗಾಗಿ ವಿಶ್ವನಾಥ್ ಬಿಡಿಎ ಅಧ್ಯಕ್ಷರಾಗಿ ಮುಂದುವರಿಯುವುದು ಆಬಾಧಿತವಾಗಿದೆ.
ವಿಶ್ವನಾಥ್ ಅವರನ್ನುಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಕೋರಿ ಬೆಂಗಳೂರಿನ ವಕೀಲ ಎ.ಎಸ್. ಹರೀಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠವು ಈ ತೀರ್ಪು ನೀಡಿದೆ.

ನ್ಯಾಯಪೀಠ ತನ್ನ ಆದೇಶದಲ್ಲಿ ಬಿಡಿಎ ಅಧ್ಯಕ್ಷರಾಗಿ ಲಾಭದಾಯಕ ಹುದ್ದೆ ಹೊಂದಿದ್ದಾರೆಂಬ ಆರೋಪದಡಿ ಶಾಸಕ ಸ್ಥಾನದಿಂದ ಎಸ್.ಆರ್.ವಿಶ್ವನಾಥ್ ಅವರನ್ನು ಅನರ್ಹಗೊಳಿಸುವಂತೆ ಕೋರಿ ಅರ್ಜಿದಾರರ ಸಲ್ಲಿಸಿರುವ ಮನವಿ ರಾಜ್ಯಪಾಲರ ಪರಿಶೀಲನೆಯಲ್ಲಿದೆ. ನ್ಯಾಯಾಲಯ ರಾಜ್ಯಪಾಲರ ಕಚೇರಿಗೆ ನಿರ್ದೇಶನ ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.
ಎರಡೆರಡು ಹುದ್ದೆ:
ಅರ್ಜಿದಾರರ ಪರ ವಕೀಲರು, ಕಾನೂನು ಪ್ರಕಾರ ಶಾಸಕರು ಸರ್ಕಾರದ ಅಧೀನ ಸಂಸ್ಥೆಗೆ ಸಂಬಂಧಿಸಿದ ಸಮಿತಿಯಲ್ಲಿ ಅಧ್ಯಕ್ಷರಾಗಿರಬಹುದು. ಆದರೆ, ಬಿಡಿಎ ಸಮಿತಿಯಲ್ಲ. ಅದೊಂದು ಶಾಸನಾತ್ಮಕವಾಗಿ ರಚಿಸಲ್ಪಟ್ಟಿರುವ ಪ್ರಾಧಿಕಾರವಾಗಿದ್ದು, ಅದಕ್ಕೆ ಅಧ್ಯಕ್ಷರಾಗಿ ಶಾಸಕ ಎಸ್.ಆರ್. ವಿಶ್ವನಾಥ್ ನೇಮಕಗೊಂಡು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಆ ಅಧ್ಯಕ್ಷ ಹುದ್ದೆಗೆ ವೇತನ ಪಡೆಯುತ್ತಿದ್ದಾರೆ. ಈ ವಿಚಾರವನ್ನು ನ್ಯಾಯಾಲಯಕ್ಕೆ ಶಾಸಕರೇ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದರು.
ಅಲ್ಲದೆ, ಎಸ್.ಆರ್. ವಿಶ್ವನಾಥ್ ಅವರು ಲಾಭದಾಯಕ ಹುದ್ದೆ ಹೊಂದಿದ್ದು, ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಕೋರಿದರು.ಒಂದೇ ವೇತನ: ಶಾಸಕ ಎಸ್.ಆರ್. ವಿಶ್ವನಾಥ್ ಪರ ವಕೀಲರು ವಾದ ಮಂಡಿಸಿ, ಶಾಸಕರನ್ನು ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕ ಮಾಡಲು ಕಾನೂನಿನಲ್ಲಿ ಅವಕಾಶ ಇದೆ. ವಿಶ್ವನಾಥ್ ಅವರು ಶಾಸಕ ಸ್ಥಾನಕ್ಕೆ ವೇತನ ಹಾಗೂ ಭತ್ಯೆ ಪಡೆಯುತ್ತಿಲ್ಲ.ಕೇವಲ ಬಿಡಿಎ ಅಧ್ಯಕ್ಷ ಹುದ್ದೆಗೆ ವೇತನ ಹಾಗೂ ಭತ್ಯೆ ಪಡೆಯುತ್ತಿದ್ದಾರೆ. ಹಾಗಾಗಿ ಅವರು ಬಿಡಿಎ ಅಧ್ಯಕ್ಷ ಹುದ್ದೆ ಅಂತಹ ಲಾಭದಾಯಕ ಹುದ್ದೆ ಹೊಂದಿದ್ದಾರೆ ಎಂದು ಹೇಳಲಾಗದು. ಆದ್ದರಿಂದ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದರು.
ಪ್ರಕರಣದ ಹಿನ್ನೆಲೆ:
ಸಂವಿಧಾನದ ಪರಿಚ್ಛೇದ 191(1) (ಎ) ಪ್ರಕಾರ ಸಂಸದರು ಹಾಗೂ ಶಾಸಕರಾಗಿರುವವರು ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ಯಾವುದೇ ಲಾಭದಾಯಕ ಹುದ್ದೆ ಹೊಂದುವಂತಿಲ್ಲ. ಒಂದು ವೇಳೆ ಲಾಭದಾಯಕ ಹುದ್ದೆ ಹೊಂದಿದ್ದರೆ ಶಾಸಕ ಅಥವಾ ಸಂಸದ ಸ್ಥಾನದಿಂದ ಅನರ್ಹರಾಗುತ್ತಾರೆ. ಎಸ್.ಆರ್.ವಿಶ್ವನಾಥ್ ಶಾಸಕರಾಗಿ ಆಯ್ಕೆಯಾದ ಬಳಿಕ ಬಿಡಿಎ ಅಧ್ಯಕ್ಷರೂ ಆಗಿ ನೇಮಕವಾಗಿದ್ದಾರೆಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.
ಅಲ್ಲದೆ, ಎಸ್.ಆರ್. ವಿಶ್ವನಾಥ್ ಅವರು ಬಿಡಿಎ ಅಧ್ಯಕ್ಷ ಹುದ್ದೆಗೆ ವೇತನ ಮತ್ತು ಭತ್ಯೆ ಸೇರಿದಂತೆ ಒಟ್ಟು 1.92 ಲಕ್ಷ ರೂ. ಪಡೆದುಕೊಳ್ಳುತ್ತಿದ್ದಾರೆ. ಹಾಗಾಗಿ, ಎರಡು ಹುದ್ದೆಗೆ ಸರ್ಕಾರದಿಂದ ವೇತನ ಪಡೆದುಕೊಳ್ಳುತ್ತಿರುವ ಕಾರಣ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.












Click it and Unblock the Notifications