ಬಂಜಾರ, ಭೋವಿ, ಕೊರಮ, ಕೊರಚ ಎಸ್‌ಸಿ ಪಟ್ಟಿಯಲ್ಲಿಯೇ ಮುಂದುವರೆಯುತ್ತಾರೆ: ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು, ಮಾರ್ಚ್. 28: ರಾಜ್ಯದಲ್ಲಿ ಒಳಮೀಸಲಾತಿ ಜಾರಿ ಮಾಡಲು ಒಪ್ಪಿಗೆ ಸೂಚಿಸಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಬಿಜೆಪಿ ಸರ್ಕಾರ ಘೊಷಣೆ ಮಾಡಿದೆ. ಚುನಾವಣೆ ಹಿನ್ನೆಲೆ ಮಾಡಿರುವ ಈ ಘೋಷಣೆ ಪಕ್ಷಕ್ಕೆ ಮುಳುವಾಗುವ ಸಾಧ್ಯತೆಯಿದ್ದು, ಈಗಾಗಲೇ ಬಂಜಾರ ಸಮುದಾಯ ಸೋಮವಾರದಿಂದ ತೀವ್ರ ಪ್ರತಿಭಟನೆಯಲ್ಲಿ ತೊಡಗಿಕೊಂಡಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ, ಪ್ರತಿಭಟನೆಗಳ ಬೆನ್ನಲ್ಲೇ ಶಿಕಾರಿಪುರದಲ್ಲಿ ಸೆಕ್ಷನ್ 144 ವಿಧಿಸಲಾಗಿದೆ. ಒಳಮೀಸಲಾತಿ ಘೋಷಣೆಯಿಂದ ಬಂಜಾರ (ಲಂಬಾಣಿ) ಸಮುದಾಯವನ್ನು ಎಸ್‌ಸಿ ಪಟ್ಟಿಯಿಂದ ಹೊರ ತೆಗೆಯಲಾಗುತ್ತದೆ ಎಂಬ ಊಹಾಪೋಹಗಳ ಕಾರಣ ರಾಜ್ಯಾದ್ಯಂತ ಪ್ರತಿಭಟನೆ ವಿಸ್ತರಿಸುತ್ತಿದೆ.
ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ವಡ್ಡರ (ಭೋವಿ), ಲಂಬಾಣಿ (ಬಂಜಾರ), ಕೊರಚ ಮತ್ತು ಕೊರಮ ಜಾತಿಗಳು ಪರಿಶಿಷ್ಟ ಜಾತಿ (ಎಸ್‌ಸಿ) ಪಟ್ಟಿಯಲ್ಲಿ ಮುಂದುವರಿಯಲಿವೆ. ರಾಜ್ಯ ಸರ್ಕಾರವು ಜಸ್ಟಿಸ್ ಸದಾಶಿವ ಆಯೋಗವದ ವರದಿಯನ್ನು ಜಾರಿ ಮಾಡಿಲ್ಲ. ಭವಿಷ್ಯದಲ್ಲಿ ಜಾರಿಗೊಳಿಸದಿರಲು ನಿರ್ಧರಿಸಿದೆ" ಎಂದು ಹೇಳಿದ್ದಾರೆ.

''ಬಂಜಾರ ಸಮುದಾಯದ ಮುಖಂಡರಲ್ಲಿ ಮನವಿ ಮಾಡುತ್ತೇನೆ, ಸದಾಶಿವ ಆಯೋಗದ ವರದಿ ಜಾರಿ ಮಾಡಿಲ್ಲ, ಉಪಸಮಿತಿ ಮೂಲಕ ಒಳಮೀಸಲಾತಿ ಜಾರಿ ಮಾಡಿದ್ದೇವೆ. ಅವರನ್ನು ಎಸ್‌ಸಿ ಪಟ್ಟಿಯಿಂದ ತೆಗೆದುಹಾಕಬಹುದು ಎಂಬ ಆತಂಕವಿದೆ. ಆದರೆ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯ ಎಸ್‌ಸಿ ಸಮುದಾಯದಲ್ಲೇ ಉಳಿಯುವಂತೆ ಶಿಫಾರಸು ಮಾಡಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇನೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಬಂಜಾರ ಸಮುದಾಯದ ಪ್ರತಿಭಟನೆ ಕಾಂಗ್ರೆಸ್ ನ ಷಡ್ಯಂತ್ರ ಮತ್ತು ಇದಕ್ಕೆ ಸ್ಥಳೀಯ ಕಾಂಗ್ರೆಸ್ ನಾಯಕರ ಪ್ರಚೋದನೆ ಇದೆ ಎಂದು ಆರೋಪಿಸಿರುವ ಅವರು, ಭವಿಷ್ಯದಲ್ಲಿ ಸದಾಶಿವ ಆಯೋಗ ಜಾರಿ ಮಾಡುವುದಿಲ್ಲ ಎಂದು ನಿರ್ಧರಿಸಿದ್ದೇವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಂಜಾರ ತಾಂಡಾ ಅಭಿವೃದ್ಧಿ ಮಂಡಳಿ ಆರಂಭಿಸಿದ್ದು, ಯಾವುದೇ ಸಮಸ್ಯೆಗಳಿದ್ದರೆ ಚರ್ಚಿಸಿ ಬಗೆಹರಿಸಿಕೊಳ್ಳಬಹುದು ಎಂದಿದ್ದಾರೆ.
ರಾಜ್ಯ ಸರಕಾರ ಬಂಜಾರ ಸಮುದಾಯಕ್ಕೆ ಶೇ.3ರ ಬದಲು ಶೇ.4.5ರಷ್ಟು ಒಳಮೀಸಲಾತಿ ನೀಡಿದೆ ಎಂದು ತಿಳಿಸಿದ್ದಾರೆ. ಪರಿಶಿಷ್ಟ ಜಾತಿಗೆ ಶೇ.15 ರಿಂದ ಶೇ.17ಕ್ಕೆ ಮೀಸಲಾತಿ ಹೆಚ್ಚಿಸಿದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಸ್‌ಸಿ ಎಡ ಉಪವರ್ಗಕ್ಕೆ ಶೇ.6, ಎಸ್‌ಸಿ ಬಲಕ್ಕೆ ಶೇ.5.5, ಸ್ಪೃಶ್ಯರಿಗೆ ಶೇ.4.5 ಮತ್ತು ಇತರರಿಗೆ ಶೇ.1 ರಷ್ಟು ಮೀಸಲಾತಿ ನೀಡಿ ಪ್ರಸ್ತಾವನೆ ಅಂಗೀಕರಿಸಿದೆ. ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ.

ರಾಜ್ಯ ಸರಕಾರ ಪರಿಶಿಷ್ಟ ಜಾತಿಗೆ (ಎಸ್‌ಸಿ) ಒಳಮೀಸಲಾತಿ ಘೋಷಿಸಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಬಂಜಾರ ಮತ್ತು ಭೋವಿ ಸಮುದಾಯದ ಸದಸ್ಯರು ಸೋಮವಾರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿರುವ ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ ಅವರ ಮನೆ ಮತ್ತು ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಕಲ್ಲು ತೂರಾಟದಿಂದಾಗಿ ಕೆಲವು ಪೊಲೀಸರು ಗಾಯಗೊಂಡಿದ್ದಾರೆ.
ಕರ್ನಾಟಕ ಸಂಪುಟ ಸಭೆ ಕಳೆದ ವಾರ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿಯನ್ನು ನೀಡಲು ನಿರ್ಧರಿಸಿತ್ತು. ಈ ಪ್ರಸ್ತಾವನೆಯನ್ನು ಸಂವಿಧಾನದ ಒಂಬತ್ತನೇ ಶೆಡ್ಯೂಲ್‌ಗೆ ಸೇರಿಸುವಂತೆ ಶಿಫಾರಸು ಮಾಡಿ ರಾಜ್ಯ ಸರ್ಕಾರವೂ ಕೇಂದ್ರಕ್ಕೆ ಪತ್ರ ಬರೆದಿದೆ. ಇದರ ಜೊತೆಗೆ ಒಬಿಸಿಯಲ್ಲಿದ್ದ ಮುಸ್ಲಿವರ ಶೇ.4 ರಷ್ಟು ಮೀಸಲಾತುಯನ್ನು ರದ್ದು ಮಾಡಿದೆ. ಶೇ.4 ರಷ್ಟು ಮೀಸಲಾತಿಯನ್ನು ಪ್ರಬಲ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗರಿಗೆ ಸಮಾನವಾಗಿ ಹಂಚಿದೆ.












Click it and Unblock the Notifications