ಹರಿಕಥಾ ವಿದ್ವಾಂಸ ಗುರುರಾಜುಲು ನಾಯ್ಡು ಪುತ್ರಿ ಶೋಭಾ ನಾಯ್ಡು ವಿಧಿವಶ
ಬೆಂಗಳೂರು, ಏಪ್ರಿಲ್ 13 : ಹರಿಕಥಾ ವಿದ್ವಾಂಸ ಗುರುರಾಜುಲು ನಾಯ್ಡು ಪುತ್ರಿ ಶೋಭಾ ನಾಯ್ಡು ವಿಧಿವಶರಾಗಿದ್ದಾರೆ. ತಂದೆಯ ವಿರೋಧದ ನಡುವೆಯೂ ಹರಿಕಥೆಗೆ ಕಟ್ಟುಬಿದ್ದಿದ್ದ ಶೋಭಾ ನಾಯ್ಡು ಮೂರು ದಶಕಕ್ಕೂ ಹೆಚ್ಚು ಕಾಲ ಕಲಾ ಸೇವೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಶೋಭಾ ನಾಯ್ಡು ವಿಧಿವಶರಾಗಿದ್ದು, ಅಂತ್ಯಕ್ರಿಯೆ ನಡೆಸಲಾಗಿದೆ. ಲಾಕ್ ಡೌನ್ ಹಿನ್ನಲೆಯಲ್ಲಿ ಕುಟುಂಬ ಸದಸ್ಯರು ಮಾತ್ರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಶೋಭಾ ನಾಯ್ಡು ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮೈಸೂರಿನಲ್ಲಿ ಜನಿಸಿದ್ದ ಆರ್. ಗುರುರಾಜುಲು ನಾಯ್ಡು ತಂದೆ ರಾಮಸ್ವಾಮಿ ನಾಯ್ಡು ತಂದೆಯ ಮಾರ್ಗದರ್ಶನದಲ್ಲಿ ಹರಿಕಥಾ ಕಲೆಯನ್ನು ರೂಢಿಸಿಕೊಂಡು ಮೈಸೂರಿನ ಪ್ರಮುಖ ಹರಿಕಥಾ ವಿದ್ವಾಂಸರಲ್ಲಿ ಒಬ್ಬರಾಗಿದ್ದರು.

ಸಂಗೀತ ವಿದೂಷಿ ಎಂ. ಎನ್. ಗೋವಿಂದಸ್ವಾಮಿ ಅವರಿಂದ ಸಂಗೀತ ಶಿಕ್ಷಣವನ್ನು ಪಡೆದಿದ್ದರು. 5ನೇ ವಯಸ್ಸಿನಲ್ಲಿಯೇ ಹರಿಕಥೆ ಮಾಡುವ ಸಾಮರ್ಥ್ಯ ಪಡೆದುಕೊಂಡ ಗುರುರಾಜುಲು ನಾಯ್ಡು 'ಬಾಲಹರಿದಾಸ' ಎಂದು ಖ್ಯಾತಿ ಪಡೆದಿದ್ದರು.
ತಂದೆಯ ನಿಧನದ ಬಳಿಕ ಗುರುರಾಜುಲು ನಾಯ್ಡು ಬೆಂಗಳೂರಿಗೆ ಬಂದರು. ಭಾರತೀಯ ವಿಮಾನ ಕಾರ್ಖಾನೆಯಲ್ಲಿ ನೌಕರಿಗೆ ಸೇರಿದರು. ಸಮಯ ಸಿಕ್ಕಾಗ ಹರಿಕಥೆ ಮಾಡುತ್ತಿದ್ದರು. ನಾಟಕಗಳಲ್ಲಿಯೂ ಅಭಿನಯಸಿದ್ದರು.
ಗುರುರಾಜುಲು ನಾಯ್ಡು ಮತ್ತು ಪ್ರೇಮಾ ನಾಯ್ಡು ದಂಪತಿಗೆ 6 ಜನ ಮಕ್ಕಳು. ತಾಯಿಗೆ ಮಗಳು ಡಾಕ್ಟರ್ ಆಗಬೇಕು ಎಂಬ ಬಯಕೆ ಇತ್ತು. ಅದಕ್ಕಾಗಿ ನ್ಯಾಷನಲ್ ಕಾಲೇಜಿಗೆ ಸೇರಿಸಿದ್ದರು. ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದ್ದರು.
ಮನೆಯ ಪರಿಸ್ಥಿತಿಯ ಕಾರಣ ಪಿಯುಸಿ ಮುಗಿಯುತ್ತಲೇ ಶೋಭಾ ನಾಯ್ಡು ಅವರ ವಿವಾಹ ಮಾಡಲಾಯಿತು. ಹರಿಕಥೆ ಮಾಡಬೇಕು ಎಂಬುದು ಅವರ ಆಸೆಯಾಗಿತ್ತು. ಪತಿ ಶ್ರೀನಿವಾಸಮೂರ್ತಿ ಕಲೆಗೆ ಬೆಂಬಲ ನೀಡಿದರು. ಮಾವನ ಜೊತೆ ಮಾತನಾಡಿ ಮಗಳಿಗೆ ನೀವು ಗುರುವಾಗಬೇಕು ಎಂದು ಮನವಿ ಮಾಡಿದ್ದರು.
ಗುರುರಾಜುಲು ನಾಯ್ಡು ಹೆಣ್ಣು ಮಕ್ಕಳು ಹರಿಕಥೆ ಮಾಡುವುದಕ್ಕೆ ಒಪ್ಪಿಗೆ ನೀಡಿರಲಿಲ್ಲ. ದೂರದ ಊರುಗಳಿಗೆ ಪ್ರಯಾಣ ಮಾಡುವುದು, ರಾತ್ರಿಯೆಲ್ಲಾ ನಿದ್ದೆಗೆಟ್ಟು ಹರಿಕಥೆ ಮಾಡುವುದು ಅವರಿಗೆ ಇಷ್ಟವಿರಲಿಲ್ಲ.
ತಂದೆಯನ್ನು ಹೇಗೋ ಒಪ್ಪಿಸಿ 'ಮಿಂಡ್ತಂಭಟ್ಟ' ಉಪಕಥೆ ಕಲಿತು ಹರಿಕಥೆ ಮಾಡಿ ಬಿಟ್ಟರು ಶೋಭಾ ನಾಯ್ಡು. ದೂರದಲ್ಲಿ ನಿಂತು ಗುರುರಾಜುಲು ನಾಯ್ಡು ಇದನ್ನು ನೋಡಿದ್ದರು. ಬಳಿಕ ನಿರಂತರವಾಗಿ ಕಲಾಸೇವೆಯಲ್ಲಿ ತೊಡಗಿದರು.
ಶೋಭಾ ನಾಯ್ಡು ಕರ್ನಾಟಕದ ಬಹುತೇಕ ಜಿಲ್ಲೆಗಳು ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿಯೂ ಹರಿಕಥೆ ನಡೆಸಿಕೊಟ್ಟಿದ್ದಾರೆ. ಹಲವು ಮಕ್ಕಳಿಗೂ ಹರಿಕಥೆಯನ್ನು ಹೇಳಿಕೊಟ್ಟಿದ್ದರು. ತಂಗಿ ಶೀಲಾ ನಾಯ್ಡು ಸಹ ಹರಿಕಥೆಯನ್ನು ಮಾಡುತ್ತಾರೆ.












Click it and Unblock the Notifications