ಈಜುಪಟು ಜೊತೆ ಅಸಭ್ಯ ವರ್ತನೆ, ವಿದ್ಯಾರ್ಥಿಗಳ ಬಂಧನ
ಬೆಂಗಳೂರು, ಮೇ 11 : ಪಾನಮತ್ತ ವಿದ್ಯಾರ್ಥಿಗಳು ತನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ರಾಷ್ಟ್ರಮಟ್ಟದ ಈಜುಪಟುವಾಗಿರುವ ಯುವತಿ ಯಶವಂತಪುರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಐವರು ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಬಂಧಿತರನ್ನು ಸನತ್, ಸಂಜಯ್, ನಿತಿನ್, ರಿಷಬ್, ನವಾಜ್ ಮತ್ತು ಜಾರ್ಜ್ ಎಂದು ಗುರುತಿಸಲಾಗಿದ್ದು, ಎಲ್ಲರೂ ನಗರದ ಖಾಸಗಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಮತ್ತು ಬಿಬಿಎಂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಯುವತಿ ಮಾಡಿರುವ ಆರೋಪವನ್ನು ವಿದ್ಯಾರ್ಥಿಗಳು ನಿರಾಕರಿಸಿದ್ದಾರೆ.[ಪೊಲೀಸರಿಂದ ಬಲರಾಮನ ಬಂಟ ರೌಡಿ ಮುಲಾಮ ಬಂಧನ]

ಘಟನೆ ವಿವರ : ಶನಿವಾರ ತಡರಾತ್ರಿ ಯಶವಂತಪುರ ಸಮೀಪದ ಮತ್ತಿಕೆರೆ ಬೃಂದಾವನ ಲೇಔಟ್ ಬಳಿ ಈ ಘಟನೆ ನಡೆದಿದೆ. ರಾತ್ರಿ ತಾಯಿಯೊಂದಿಗೆ ಹೋಟೆಲ್‌ಗೆ ಊಟಕ್ಕೆ ಹೋಗಿದ್ದ ಯುವತಿ ರಾತ್ರಿ 1.30ರ ವೇಳೆಗೆ ಮನೆಗೆ ಮರಳಿದ್ದಾರೆ. [ಸಾಕು ನಾಯಿ ಕೊಂದು, ಬಿರಿಯಾನಿ ಮಾಡುತ್ತಿದ್ದವರ ಬಂಧನ]
ಈ ವೇಳೆ ಬಂಧಿತ ವಿದ್ಯಾರ್ಥಿಗಳು ಮಹಡಿಯ ಮೇಲೆ ಕುಳಿತು ಮದ್ಯಪಾನ ಮಾಡುತ್ತಿದ್ದರು. ಆಟೋದಲ್ಲಿ ಯುವತಿ ಬಂದಿದ್ದನ್ನು ನೋಡಿದ ವಿದ್ಯಾರ್ಥಿಗಳು ಆಕೆಯನ್ನು ನಿಂದಿಸಿದ್ದಾರೆ, ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಯುವತಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ದೂರು ದಾಖಲಾದ ತಕ್ಷಣ ವಿದ್ಯಾರ್ಥಿಗಳನ್ನು ಯಶವಂತಪುರ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ಮಾಡಲಾಗಿದೆ. ವಿದ್ಯಾರ್ಥಿಗಳು ಪಾರ್ಟಿ ಮಾಡುತ್ತಿದ್ದುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಯುವತಿ ಜೊತೆ ಅಸಭ್ಯವಾಗಿ ವರ್ತಿಸಿಲ್ಲ, ಆಕೆಯೇ ಪಾರ್ಟಿ ಮಾಡುತ್ತಿದ್ದ ತಮ್ಮನ್ನು ನಿಂದಿಸಿದ್ದಾಳೆ ಎಂದು ಯುವಕರು ಹೇಳಿದ್ದಾರೆ. ವಿಚಾರಣೆ ಮುಂದುವರೆದಿದೆ.












Click it and Unblock the Notifications