ರಾಮಲಿಂಗಾ ರೆಡ್ಡಿ ಗೆಲುವಿನ ಓಟ ತಡೆಯಲು ಬಂದ ಹಾರ್ದಿಕ್ ಪಟೇಲ್!
ಬೆಂಗಳೂರು, ಏಪ್ರಿಲ್ 22; ಕರ್ನಾಟಕದ ವಿಧಾನಸಭೆ ಚುನಾವಣೆ ಗೆಲ್ಲಲು ಬಿಜೆಪಿ ಅನೇಕ ತಂತ್ರಗಳನ್ನು ರೂಪಿಸಿದೆ. ಅದಕ್ಕಾಗಿ ವಿವಿಧ ರಾಜ್ಯಗಳ ಪ್ರಭಾವಿ ನಾಯಕರನ್ನು ರಾಜ್ಯಕ್ಕೆ ಕರೆಸಿ ಕ್ಷೇತ್ರವೊಂದರ ಉಸ್ತುವಾರಿಯನ್ನು ನೀಡಿದೆ. ಮೇ 10ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಭಾವಿ ನಾಯಕ ರಾಮಲಿಂಗಾ ರೆಡ್ಡಿಯನ್ನು ಸೋಲಿಸಲು ಬಿಜೆಪಿ ವ್ಯೂಹ ರಚನೆ ಮಾಡಿದೆ.
ಬೆಂಗಳೂರು ನಗರದ ಬಿಟಿಎಂ ಲೇಔಟ್ ಕ್ಷೇತ್ರಕ್ಕೆ ಬಿಜೆಪಿ ಉಸ್ತುವಾರಿಯಾಗಿ ಪಾಟೀದಾರ್ ಸಮುದಾಯದ ನಾಯಕ, ಗುಜರಾತ್‌ನ ಬಿಜೆಪಿ ಶಾಸಕ ಹಾರ್ದಿಕ್ ಪಟೇಲ್ ನೇಮಕಗೊಂಡಿದ್ದಾರೆ. ಈಗಾಗಲೇ ಅವರು ಕ್ಷೇತ್ರದಲ್ಲಿ ಚುನಾವಣಾ ಕಾರ್ಯ ಆರಂಭಿಸಿದ್ದು, ಕ್ಷೇತ್ರದ ಚುನಾವಣಾ ಕಚೇರಿಯಲ್ಲಿ ಆಯೋಜಿಸಲಾದ ಮಂಡಲ ಮಹಿಳಾ ಮೋರ್ಚಾ ವಿಶೇಷ ಸಭೆಯಲ್ಲಿ ಮಾತನಾಡಿದರು.

ಬಿಟಿಎಂ ಲೇಔಟ್ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದೆ. 4 ಬಾರಿ ಜಯನಗರದಲ್ಲಿ ಗೆಲುವು ಕಂಡಿದ್ದ ಕಾಂಗ್ರೆಸ್‌ನ ಪ್ರಭಾವಿ ನಾಯಕ ರಾಮಲಿಂಗಾ ರೆಡ್ಡಿ ಕಳೆದ ಮೂರು ಚುನಾವಣೆಯಲ್ಲಿಯೂ ಗೆಲ್ಲುವ ಮೂಲಕ ಕ್ಷೇತ್ರವನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಈ ಬಾರಿ ಅವರನ್ನು ಸೋಲಿಸಲು ಬಿಜೆಪಿ ತಂತ್ರ ರೂಪಿಸಿದೆ. ಅದಕ್ಕಾಗಿ ರೂಪುರೇಷೆ ರಚನೆ ಮಾಡಿದೆ.
ಚುನಾವಣಾ ಕಣದ ಚಿತ್ರಣ; ಕಾಂಗ್ರೆಸ್ ಪಕ್ಷ ಈ ಬಾರಿಯ ಚುನಾವಣೆಯಲ್ಲಿಯೂ ರಾಮಲಿಂಗಾ ರೆಡ್ಡಿಗೆ ಟಿಕೆಟ್ ನೀಡಿದೆ. ಬಿಜೆಪಿಯಿಂದ ಕೆ. ಆರ್. ಶ್ರೀಧರ್ ರೆಡ್ಡಿ ಅಭ್ಯರ್ಥಿ. ಜೆಡಿಎಸ್ ಅಭ್ಯರ್ಥಿ ವೆಂಕಟೇಶ್. ಕ್ಷೇತ್ರದಲ್ಲಿ ಜೆಡಿಎಸ್‌ನ ಪ್ರಭಾವ ಇರುವಂತೆ ಕಾಣುವುದಿಲ್ಲ. 2018ರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಕೇವಲ 6031 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದರು. ಪೈಪೋಟಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಮಾತ್ರ.
2008ರ ಚುನಾವಣೆಯಲ್ಲಿ ಜಯನಗರದಿಂದ ಬಿಟಿಎಂಗೆ ಬಂದ ಕಾಂಗ್ರೆಸ್‌ನ ರಾಮಲಿಂಗಾ ರೆಡ್ಡಿ 46,805 ಮತಗಳನ್ನು ಪಡೆದು ಗೆದ್ದರು. 2013ರಲ್ಲಿ 66,924 ಮತಗಳನ್ನು ಪಡೆದು ಗೆಲವು ಸಾಧಿಸಿದರು. ಸಿದ್ದರಾಮಯ್ಯ ಸಂಪುಟದಲ್ಲಿ ಸಾರಿಗೆ, ಗೃಹ ಸಚಿವರಾಗಿ ಕೆಲಸ ಮಾಡಿದರು. 2018ರ ಚುನಾವಣೆಯಲ್ಲಿ 66,924 ಮತಗಳನ್ನು ಪಡೆದು ಗೆದ್ದರು. ಅಲ್ಲದೇ ಜಯನಗರದಲ್ಲಿ ಪುತ್ರಿ ಸೌಮ್ಯಾ ರೆಡ್ಡಿಗೆ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡು ಬಂದರು.
ಬಿಜೆಪಿ ಬಿಟಿಎಂ ಲೇಔಟ್ ಕ್ಷೇತ್ರದಲ್ಲಿ 2008ರಲ್ಲಿ 8,258 ಮತಗಳು, 2013ರಲ್ಲಿ 20,531 ಮತಗಳು ಮತ್ತು 2018ರ ಚುನಾವಣೆಯಲ್ಲಿ 46,434 ಮತಗಳನ್ನು ಪಡೆದಿದೆ. ಈ ಬಾರಿಯ ಚುನಾವಣೆಗೆ ಯುವ ನಾಯಕ ಅನಿಲ್ ಶೆಟ್ಟಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ ಪಕ್ಷ ಕೆ. ಆರ್. ಶ್ರೀಧರ್ ರೆಡ್ಡಿಗೆ ಟಿಕೆಟ್ ನೀಡಿದೆ. ಈ ಬಾರಿ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ರಾಮಲಿಂಗಾ ರೆಡ್ಡಿ ಗೆಲುವಿನ ಓಟಕ್ಕೆ ತಡೆ ಹಾಕಬೇಕು ಎಂದು ತಂತ್ರ ರೂಪಿಸಿದೆ.
ಜಯನಗರದಲ್ಲಿ 4, ಬಿಟಿಎಂ ಲೇಔಟ್‌ನಲ್ಲಿ 3 ಬಾರಿ ಸೇರಿ 7 ಬಾರಿ ಗೆದ್ದಿರುವ ರಾಮಲಿಂಗಾ ರೆಡ್ಡಿ ಸೋಲಿಸುವುದು ಸುಲಭದ ಮಾತಲ್ಲ. ಪ್ರತಿ ಚುನಾವಣೆಯಲ್ಲಿಯೂ ಅವರು ಕನಿಷ್ಠ 20 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಿದ್ದಾರೆ. ಆದ್ದರಿಂದ ಅವರನ್ನು ಸೋಲಿಸಬೇಕು ಎಂದು ರೆಡ್ಡಿ ಸಮುದಾಯದ ನಾಯಕನಿಗೆ ಬಿಜೆಪಿ ಟಿಕೆಟ್ ನೀಡಿದೆ. ಆದ್ದರಿಂದ ಹೊರ ರಾಜ್ಯದ ನಾಯಕರಿಗೆ ಕ್ಷೇತ್ರದ ಚುನಾವಣೆ ಉಸ್ತುವಾರಿಯನ್ನು ನೀಡಿದೆ.
ರಾಮಲಿಂಗಾ ರೆಡ್ಡಿ ಬಿಟಿಎಂ ಲೇಔಟ್ ಮಾತ್ರವಲ್ಲ ಅಕ್ಕಪಕ್ಕದ ಕ್ಷೇತ್ರಗಳ ಮೇಲೆ ಸಹ ಪ್ರಭಾವ ಬೀರುತ್ತಾರೆ. ಜಯನಗರದಲ್ಲಿ ಈ ಬಾರಿಯ ಚುನಾವಣೆಯಲ್ಲಿಯೂ ಪುತ್ರಿಗೆ ಟಿಕೆಟ್ ಕೊಡಿಸಿದ್ದಾರೆ. ಆದ್ದರಿಂದ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಕಟ್ಟಿ ಹಾಕುವ ಮೂಲಕ ಬೆಂಗಳೂರು ನಗರದ ಪ್ರತಿಷ್ಠಿತ ಕ್ಷೇತ್ರ ವಶಕ್ಕೆ ಪಡೆಯುವುದು ಬಿಜೆಪಿ ಲೆಕ್ಕಾಚಾರವಾಗಿದೆ.












Click it and Unblock the Notifications