Gruha Lakshmi Scheme: 'ಆರ್ಥಿಕ ಸಬಲ ಮಹಿಳೆಯರು ಹಣ ವಾಪಾಸ್ ನೀಡಿ'
ಬೆಂಗಳೂರು, ಫೆಬ್ರವರಿ 15: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕತೆ ಹಾಳಾಗಿದೆ. ಅಭಿವೃದ್ಧಿಗೆ ಹಣ ಇಲ್ಲ ಎಂದು ವಿಪಕ್ಷಗಳು ಆರೋಪ ಮಾಡುತ್ತಿವೆ. ಈ ಮಧ್ಯೆ ಗ್ಯಾರಂಟಿ ಯೋಜನೆಗಳ ಪರಿಶೀಲನಾ ಸಭೆಯಲ್ಲಿ ಮಹಿಳೆಯರಿಗೆ ಗೃಹ ಲಕ್ಷ್ಮೀ ಹಣ ಹಿಂತಿರುಗಿಸುವಂತೆ ಮನವಿಯೊಂದು ಮಾಡಲಾಗಿದೆ. ಬಿಬಿಎಂಪಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರು ಇಂಥದ್ದೊಂದು ಮನವಿ ಇಟ್ಟಿದ್ದಾರೆ.
ಹೌದು, ಬಿಬಿಎಂಪಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ, ಅಧ್ಯಕ್ಷರಾದ ಜಿ.ಕೃಷ್ಣಪ್ಪ ಅವರು ಶನಿವಾರ ಬೆಂಗೂರಿನ ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಕಛೇರಿಯಲ್ಲಿ ಸಭೆ ನಡೆಸಿದರು. ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಮುಖಂಡರು, ಸ್ಥಳೀಯರ ಜೊತೆಗೆ ಚರ್ಚಿಸಿದರು.

ಸ್ವಯಂ ಪ್ರೇರಿತವಾಗಿ ಹಣ ನೀಡುವಂತೆ ಮನವಿ
ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆ ಜಾರಿಯಲ್ಲಿದೆ. ಮಾಸಿಕವಾಗಿ ಮಹಿಳೆಯರಿಗೆ 2000 ರೂಪಾಯಿ ನೀಡಲಾಗುತ್ತಿದೆ. ಈ ಹಣ ಮನೆಯ ಮುಖ್ಯಸ್ಥೆ ಖಾತೆಗೆ ಜಮೆ ಆಗುತ್ತಿದೆ. ಆರ್ಥಿಕವಾಗಿ ಸಬಲರಾಗಿರುವ ಮಹಿಳೆಯರು ತಾವು ಪಡೆಯುತ್ತಿರುವ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸರ್ಕಾರಕ್ಕೆ ಸ್ವಯಂಪ್ರೇರಿತವಾಗಿ ಬಿಟ್ಟುಕೊಡಬೇಕೆಂದು ಅವರು ಗೃಹಲಕ್ಷ್ಮಿ ಫಲಾನುಭವಿಗಳಿಗೆ ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಚರ್ಚೆ ನಡೆಯುತ್ತಿದೆ. ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು. ಗ್ಯಾರಂಟಿ ಯೋಜನೆಗಳ ಕುರಿತು ಯಾವುದಾರರು ದೂರುಗಳು ಬಂದಲ್ಲಿ, ಅಂತಹ ಫಲಾನುಭವಿಗಳಿಗೆ ತ್ವರಿತವಾಗಿ ಸ್ಪಂದಿಸಿ ಇರುವ ಸಮಸ್ಯೆಯನ್ನು ಬಗೆಹರಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಾಸುದೇವ ರೆಡ್ಡಿ, ಸಮಾಜ ಸೇವಕರಾದ ಉಮಾಪತಿ ಶ್ರೀನಿವಾಸ ಗೌಡ, ಬಿಬಿಎಂಪಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಸ್ವಪ್ನಚಂದ್ರ ಶೆಟ್ಟಿ, ಸ್ಥಳೀಯ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಶಾಂತೇಶ್ ಹಾಗೂ ಸ್ಥಳೀಯ ಸಮಿತಿಯ ಸದಸ್ಯರುಗಳು ಭಾಗವಹಿಸಿದ್ದರು.
ಗ್ಯಾರಂಟಿಗಳ ಬಗ್ಗೆ ಮಿಶ್ರ ಪ್ರತಿಕ್ರಿಯೆ
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ಸರ್ಕಾರ ಸಮರ್ಪಕವಾಗಿ ಅಭಿವೃದ್ಧಿ ಮಾಡುತ್ತಿಲ್ಲ. ಕ್ಷೇತ್ರ ಶಾಸಕರಿಗೆ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ. ಸರ್ಕಾರ ಆರ್ಥಿಕವಾಗಿ ನಷ್ಟದಲ್ಲಿದೆ ಎಂದು ವಿಪಕ್ಷ ನಾಯಕರು ದೂರಿದ್ದಾರೆ. ವಿದ್ಯಾನಿಧಿ, ಗೃಹ ಲಕ್ಷ್ಮೀ, ಗೃಹ ಜ್ಯೂತಿ, ಉಚಿತ ಅನ್ನ ಭಾಗ್ಯ ಯೋಜನೆ ಮತ್ತು ಶಕ್ತಿ ಯೋಜನೆಗಳು ರಾಜ್ಯದಲ್ಲಿ ಜಾರಿಯಲ್ಲಿವೆ. ಇವುಗಳ ಕುರಿತು ಇಂದಿಗೂ ಪರ ವಿರೋಧ ಚರ್ಚೆ ನಡೆಯುತ್ತಿವೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಹೀಗೆ ಉಚಿತ ಯೋಜನೆ ಘೋಷಣೆಗಳ ಮೂಲಕ ಅಧಿಕಾರಕ್ಕೆ ಬಂದಿದೆ...












Click it and Unblock the Notifications