ಹುಟ್ಟುಹಬ್ಬಕ್ಕೆ ಪುಸ್ತಕ ಗಿಫ್ಟ್: ಮಕ್ಕಳು ಕಂಡಂತೆ ಡಾ. ಶಿವರಾಮ ಕಾರಂತ
ಬೆಂಗಳೂರು, ಅಕ್ಟೋಬರ್ 08: ಕಡಲ ತೀರದ ಭಾರ್ಗವ, ಜ್ಞಾನಪೀಠ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತ ಹುಟ್ಟುಹಬ್ಬ(ಅ.10 ರಂದು)ದ ಮುನ್ನ ಅವರ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಗುತ್ತಿದೆ.
ಕಾರಂತಜ್ಜನ ಬದುಕು- ಬರಹಗಳ ಬಗ್ಗೆ ಇದೇ ಮೊದಲ ಬಾರಿಗೆ ಅವರ ಮಕ್ಕಳಾದ ಡಾ. ಕೆ. ಉಲ್ಲಾಸ ಕಾರಂತ, ಮಾಲವಿಕಾ ಕಪೂರ್, ಕ್ಷಮಾ ರಾವ್ ಅವರು ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದು, ಪುಸ್ತಕ ರೂಪದಲ್ಲಿ ಹೊರ ಬಂದಿದೆ. ವೆಸ್ಟ್ ಲ್ಯಾಂಡ್ ಪ್ರಕಾಶನದಿಂದ ಪ್ರಕಟವಾಗುತ್ತಿರುವ 'ಗ್ರೋಯಿಂಗ್ ಅಪ್ ಕಾರಂತ' ಇಂಗ್ಲಿಷ್ ಕೃತಿ ಇದೇ ಶುಕ್ರವಾರ(ಅಕ್ಟೋಬರ್ 08) ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಲೋಕಾರ್ಪಣೆಯಾಗುತ್ತಿದೆ. ಕಾರ್ಯಕ್ರಮ ಲೈವ್ ಆಗಿ BIC ಯೂಟ್ಯೂಬ್ ವಾಹಿನಿ ಮೂಲಕ ವೀಕ್ಷಿಸಬಹುದು.
''ನನ್ನ ತಂದೆ ಹೆಚ್ಚೂ ಕಡಿಮೆ ಒಂದು ಶತಮಾನದ ಕಾಲ ಬದುಕಿದರು. ತಮ್ಮ ವಿಚಾರ, ಬರೆವಣಿಗೆಗಳ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಇಂದಿಗೂ ಉಳಿದಿದ್ದಾರೆ. ಈ ನಿಟ್ಟಿನಲ್ಲಿ ಅವರ ಸಾರ್ವಜನಿಕ ಬದುಕು ಸೂಕ್ತವಾಗಿ ದಾಖಲಾಗಿದೆ. ಆದರೆ, ವೈಯಕ್ತಿಕ ಬದುಕಿನ ಬಗ್ಗೆ ಸಮರ್ಪಕವಾಗಿ ಅನಾವರಣಗೊಂಡಿಲ್ಲ, ಅವರ ಆತ್ಮಕಥನದಲ್ಲಿಯೂ ಕೂಡ. ಹಾಗಾಗಿ ಅವರ ವೈಯಕ್ತಿಕ ಬದುಕು ಹೇಗಿತ್ತು, ಏನೆಲ್ಲ ಕಷ್ಟನಷ್ಟಗಳಿಂದ ಕೂಡಿತ್ತು? ನಮ್ಮ ತಾಯಿ ಲೀಲಾ ಆಳ್ವಾ 1936ರಲ್ಲಿ ಅಂತರ್ಜಾತೀಯ ವಿವಾಹವಾದಾಗ ಸಂದರ್ಭ ಎಷ್ಟು ಕ್ಲಿಷ್ಟಕರವಾಗಿತ್ತು. ಕೆಲಸ, ಓಡಾಟ ಮತ್ತು ಒತ್ತಡಗಳ ನಡುವೆಯೂ ನಮ್ಮನ್ನು ಹೇಗೆ ಬೆಳೆಸಿದರು ಮತ್ತು ಬದುಕಿನುದ್ದಕ್ಕೂ ಅವರನ್ನು ವೈಯಕ್ತಿಕವಾಗಿ ಪ್ರೋತ್ಸಾಹಿಸಿದ ಮಿತ್ರರು ಮತ್ತು ಪ್ರಭಾವ ಬೀರಿದ ವ್ಯಕ್ತಿಗಳು... ಹೀಗೆ ಒಟ್ಟಾರೆಯಾಗಿ ಅವರ ಬದುಕಿನ ವೈಯಕ್ತಿಕ ಸಂಗತಿಗಳನ್ನಿಟ್ಟುಕೊಂಡು ನಾವು ಮೂರು ಜನ ಬರೆಯಲು ಶುರು ಮಾಡಿದೆವು,'' ಎಂದು ಕಾರಂತಜ್ಜನ ಪುತ್ರ ಡಾ. ಉಲ್ಲಾಸ ಕಾರಂತ ಹೇಳಿದ್ದಾರೆ.

ಇಂಗ್ಲೀಷ್ ಪುಸ್ತಕ ಏಕೆ?: ಇನ್ನೊಂದು ಮುಖ್ಯವಾಗಿ ಅಂಶವೆಂದರೆ, ಅವರು ಇಷ್ಟು ಕ್ಷೇತ್ರಗಳಲ್ಲಿ ಗಮನಾರ್ಹವಾಗಿ ತೊಡಗಿಕೊಂಡರೂ, ಇತರೇ ರಾಜ್ಯಗಳಲ್ಲಿ ಕೂಡ ಕೆಲಸ ಮಾಡಿದರೂ ಕರ್ನಾಟಕದ ಹೊರಗೆ ಅವರ ಹೆಸರು ಪಸರಿಸಲೇ ಇಲ್ಲ, ಕಾರಣ ಅವರು ಕನ್ನಡದಲ್ಲಿ ಬರೆಯುತ್ತ ಬಂದರು. ಹಾಗಾಗಿ ಕನ್ನಡಿಗರಿಗೆ, ಇತರೇ ಭಾಷಿಕರಿಗೆ, ದೇಶ-ವಿದೇಶಕ್ಕೆ ಅವರು ತಲುಪಲಿ ಎನ್ನುವ ಆಶಯದಿಂದ ಇಂಗ್ಲಿಷ್ನಲ್ಲಿ ಬರೆಯಲು ನಿರ್ಧರಿಸಿದೆವು ಎಂದು ವಿವರಿಸಿದ್ದಾರೆ.
Recommended Video
ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್, ಹಿರಿಯ ಕಥೆಗಾರ ವಿವೇಕ ಶಾನಭಾಗ, ಪತ್ರಕರ್ತರಾದ ಸುಗತ ಶ್ರೀನಿವಾಸರಾಜು, ಲೇಖಕಿ ಶೋಭಾ ನಾರಾಯಣ ಪಾಲ್ಗೊಳ್ಳಲಿದ್ದಾರೆ. ಡಾ. ಉಲ್ಲಾಸ ಕಾರಂತ, ಮಾಲವಿಕಾ ಕಪೂರ, ಕ್ಷಮಾ ರಾವ್ ಕೂಡ ಉಪಸ್ಥಿತರಿರುತ್ತಾರೆ. ಪುಸ್ತಕ ಲೋಕಾರ್ಪಣೆ ಲೈವ್ ವೀಕ್ಷಿಸಲು ಲಿಂಕ್ ಕ್ಲಿಕ್ ಮಾಡಿ












Click it and Unblock the Notifications