ಕನ್ಹಯ್ಯ ಬಗ್ಗೆ ಪುತ್ರ ವಾತ್ಸಲ್ಯ ಹೊಂದಿದ್ದ ಗೌರಿ ಲಂಕೇಶ್
ವಿಚಾರವಾದಿ ಕನ್ಹಯ್ಯ ಅವರನ್ನು ಪುತ್ರನೆಂದು ಭಾವಿಸಿದ್ದ ಗೌರಿ ಲಂಕೇಶ್. ಸುಗತ ಶ್ರೀನಿವಾಸ್ ಅವರೊಂದಿಗಿನ ಚಾಟ್ ನಿಂದ ಬಹಿರಂಗ.
ಬೆಂಗಳೂರು, ಸೆಪ್ಟೆಂಬರ್ 5: ತಮಗೆ ಮಕ್ಕಳಿಲ್ಲದಿದ್ದರೂ ಯಾವುದೇ ಪ್ರಗತಿಪರ ಚಿಂತಕ ತರುಣ, ತರುಣಿಯನ್ನು ತಮ್ಮ ಮಕ್ಕಳೆಂದೇ ಭಾವಿಸುವ ಮಾತೃ ಹೃದಯಿ ಗೌರಿ ಲಂಕೇಶ್ ಅವರದ್ದಾಗಿತ್ತು ಎಂದು ಅವರ ಆಪ್ತ ವಲಯ ಹೇಳುತ್ತದೆ.
ನನಗೆ ಮಕ್ಕಳಿಲ್ಲ ಎಂಬ ಕೊರಗು ಇಲ್ಲ. ಆದರೂ ನಾನು ಯುವ ಹಾಗೂ ಪ್ರಗತಿಪರ ಚಿಂತಕರನ್ನು ನಾನು ನನ್ನ ಮಕ್ಕಳೆಂದೇ ಪರಿಗಣಿಸುತ್ತೇನೆ. ಅವರು ನನ್ನನ್ನು ಅಮ್ಮ ಎಂದರೆ ಅಷ್ಟೇ ಸಾಕು ಎಂದೆನ್ನುತ್ತಿದ್ದರಂತೆ ಗೌರಿ ಲಂಕೇಶ್.
2016ರಲ್ಲಿ ದೇಶಾದ್ಯಂತ ಸುದ್ದಿ ಮಾಡಿದ್ದ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಿಶನ್ ಕನ್ಹಯ್ಯ ಅವರನ್ನು ತಮ್ಮ ಮಗನೆಂದೇ ಅವರು ಪರಿಗಣಿಸಿದ್ದರು.
ಇದನ್ನು ಹಿರಿಯ ಪತ್ರಕರ್ತ ಹಾಗೂ 'ಕನ್ನಡಪ್ರಭ' ಪತ್ರಿಕೆಯ ಮಾಜಿ ಸಂಪಾದಕ ಸುಗತ ಶ್ರೀನಿವಾಸ್ ಅವರು ಮಾಡಿರುವ ಟ್ವೀಟ್ ಮತ್ತಷ್ಟು ಪುಷ್ಟೀಕರಿಸುತ್ತದೆ. ಕಳೆದ ತಿಂಗಳ 9ರಂದು ಇಂದೋರ್ ನಲ್ಲಿ ಕನ್ಹಯ್ಯ ಕುಮಾರ್ ಅವರ ಮೇಲೆ ಹಲ್ಲೆಯಾಗಿತ್ತು. ಈ ಹಿನ್ನೆಲೆಯಲ್ಲಿ, ಸುಗತ ಶ್ರೀನಿವಾಸ ರಾಜು ಅವರು ಗೌರಿ ಅವರಿಗೆ ಸಾಂತ್ವನ ಹೇಳಿದ್ದರು.

ಆಗಸ್ಟ್ 9ರಂದು ಸುಗತ ಶ್ರೀನಿವಾಸ್ ಅವರೊಂದಿಗೆ ವಾಟ್ಸಾಪ್ ನಲ್ಲಿ ನಡೆಸಿದ್ದ ಚಾಟ್ ವೇಳೆ ಗೌರಿ ಅವರು, ಕನ್ಹಯ್ಯ ಅವರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಈ ಚಾಟ್ ನ ವಿವರವನ್ನು ಸುಗತ ಅವರೇ ಟ್ವೀಟ್ಟರ್ ಮೂಲಕ ತಿಳಿಸಿದ್ದಾರೆ.
ಮೊದಲಿಗೆ, ಕನ್ಹಯ್ಯ ಬಗ್ಗೆ ತಮ್ಮ ಕಾಳಜಿ ವ್ಯಕ್ತಪಡಿಸುವ ಅವರು, ''ಇಂದೋರ್ ನಲ್ಲಿ ನನ್ನ ಮಗ ಕನ್ಹಯ್ಯ ಮೇಲೆ ಹಲ್ಲೆಯಾಗಿದೆ. ಆದರೆ, ಆತ ಸುರಕ್ಷಿತವಾಗಿದ್ದಾನೆ. ಆತ ಸ್ನೇಹಿತ ಧನಂಜಯ್ ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿವೆ'' ಎಂದಿದ್ದಾರೆ.
ಇದಕ್ಕೆ ಉತ್ತರಿಸುವ ಸುಗತ ಅವರು, ಗೌರಿಯವರ ಮಾತೃ ಹೃದಯವನ್ನು ಶ್ಲಾಘಿಸುತ್ತಾರೆ. ''ಇಂಥ ಅದ್ಭುತ ಹುಡುಗರನ್ನು ನಿಮ್ಮ ಮಕ್ಕಳಾಗಿ ಸ್ವೀಕರಿಸಿದ್ದಕ್ಕಾಗಿ ನಿಮಗೆ ನನ್ನ ಹೃತ್ಪೂರ್ವಕ ಮೆಚ್ಚುಗೆಯಿದೆ'' ಎಂದಿದ್ದಾರೆ.
ಇದಕ್ಕೆ ಪ್ರತ್ಯುತ್ತರ ನೀಡಿರುವ ಗೌರಿ, ''ಹೌದು. ಆ ಹುಡುಗರು (ಕನ್ಹಯ್ಯ ಹಾಗೂ ಅವರ ಸ್ನೇಹಿತರು) ನನ್ನನ್ನು ಅಮ್ಮ ಎಂದು ಒಪ್ಪಿಕೊಂಡಿರುವುದು ನನ್ನ ಅದೃಷ್ಟ. ಆದರೆ, ನನಗೊಂದೇ ಚಿಂತೆ. ಕನ್ಹಯ್ಯ ಕೆಲವೊಮ್ಮೆ ತಮಗೆ ಪರಿಚಿತರಲ್ಲದ ವ್ಯಕ್ತಿಗಳೊಡನೆ ಅಲೆದಾಡುತ್ತಾನೆ. ಕೆಲವೊಮ್ಮೆ ಕೆಲವಾರು ಅವರ ವಿರೋಧಿಗಳು ಆತನ ಕಾರನ್ನು ಚಲಾಯಿಸುವಂಥ ಸನ್ನಿವೇಶಗಳೂ ಇರುತ್ತವೆಂದು ಭಾವಿಸುತ್ತೇನೆ. ಹಾಗಾಗಿ, ನನಗೆ ಅವರ ಸುರಕ್ಷತೆಯದ್ದೇ ಚಿಂತೆ. ಆದರೆ, ನಾನು ಕನ್ಹಯ್ಯನನ್ನು ನಿರ್ಬಂಧಿಸಲು ಸಾಧ್ಯವಿಲ್ಲ. ಅವರು ಈ ದೇಶದ ಭವಿಷ್ಯದ ಆಶಾಕಿರಣ'' ಎಂದು ಹೇಳುತ್ತಾರೆ.
My August 9 interaction with #gaurilankesh. RIP my dear friend. pic.twitter.com/2tPuOIpK55
— Sugata (@sugataraju) September 5, 2017
ಈ ಇಡೀ ಸಂಭಾಷಣೆಯಲ್ಲಿ ಪ್ರಗತಿಪರ ಚಿಂತಕರ ಬಗ್ಗೆ ಅವರು ಇಟ್ಟಿದ್ದ ಒಲವು, ಪುತ್ರ ವಾತ್ಸಲ್ಯ ವ್ಯಕ್ತವಾಗುತ್ತದೆ. ಇದನ್ನು ಟ್ವೀಟ್ ಮಾಡುವ ಮೂಲಕ ಸುಗತ ಶ್ರೀನಿವಾಸ್ ಅವರು ಗೌರಿ ಲಂಕೇಶ್ ಅವರ ಮಾತೃತ್ವ ಭಾವವನ್ನು ಅನಾವರಣಗೊಳಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.











Click it and Unblock the Notifications