RR Nagar: ಅಭಿವೃದ್ಧಿ ಹೆಸರಿನಲ್ಲಿ ನಡೆದ ಅಕ್ರಮಗಳ ತನಿಖೆ: ಡಿಕೆಶಿ
ಬೆಂಗಳೂರು, ಜುಲೈ 24: ಬೆಂಗಳೂರಿನ ರಾಜರಾಜೇಶ್ವರಿ ನಗರವು ಚುನಾವಣೆ ಹೊತ್ತಿನಲ್ಲಿ ಸುದ್ದಿ ಮಾಡಿದಷ್ಟು ಇತರೆ ವಿಧಾನಸಭಾ ಕ್ಷೇತ್ರಗಳು ಸದ್ದು ಮಾಡಿಲ್ಲ. ಕಾರಣ ಇಲ್ಲಿನ ಬಿಜೆಪಿ-ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು, ಪ್ರಚಾರ ಭರಾಟೆಯಿಂದ ಮುನ್ನೆಲೆಗೆ ಬಂದ ಕ್ಷೇತ್ರದಲ್ಲಿ ಇದೀಗ ವ್ಯಾಪಕ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿ ಬಂದಿದೆ. ಈ ಎಲ್ಲ ಅಕ್ರಮಗಳ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಮತ್ತಿಕೆರೆಯ ಜೆ.ಪಿ ಪಾರ್ಕ್ ನಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಈ ಕುರಿತು ಮಾಹಿತಿ ನೀಡಿದ ಅವರು, ಆರ್ಆರ್ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲ್ಲತ್ತಹಳ್ಳಿ ಕೆರೆ, ಹೊಸಕೆರೆ, ಜೆಪಿ ಪಾರ್ಕ್ ಅಭಿವೃದ್ಧಿ ಹೆಸರಿನಲ್ಲಿ ಕೆರೆ ಕಣ್ಮರೆ ಈಜುಕೊಳ ಮರು ನಿರ್ಮಾಣ ಹಾಗೂ ಕೆಲವು ಉದ್ಯಾನಗಳ ಅಭಿವೃದ್ಧಿ ಮಾಡುವ ನೆಪದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅಕ್ರಮಗಳನ್ನು ಜನರಿಗೆ ತಿಳಿಸಲು ಸೂಕ್ತ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದರು.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ, ಆರ್‌ಆರ್ ನಗರದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಅಕ್ರಮ ನಡೆಸಿರುವ ಬಿಜೆಪಿ ಶಾಸಕರು ಚುನಾವಣೆಯಲ್ಲಿ ಹೇಗೆ ಗೆದ್ದು ಬಂದರು ಎಂಬುದು ಜನರಿಗೆ ಗೊತ್ತಾಗಲಿ. ಈ ಸಂಬಂಧ ಅಕ್ರಮಗಳೆಲ್ಲವನ್ನು ಬಯಲಿಗೆಳೆಯುತ್ತೇವೆ ಎಂದರು.
ಕೆರೆ ಅಭಿವೃದ್ಧಿ ನೆಪದಲ್ಲು ಹಣ ಲೂಟಿ?
ಇನ್ನೂ ಹೊಸಕೆರೆ ಹಳ್ಳಿ ಬಳಿ ಬೇರೊಬ್ಬರ ಹೆಸರಿನಲ್ಲಿ (ಬೇನಾಮಿ) ಶಾಸಕರು ಜಮೀನು ಖರೀದಿ ಮಾಡಿದ್ದಾರೆ ಎಂದು ಹೆಸರು ಹೇಳದೇ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅವರು ಕಿಡಿ ಕಾರಿದರು. ತಾವು ಖರೀದಿಸಿದ ಜಮೀನಿಗೆ ತೆರಳಲು ಕೆರೆ ನಡುವೆ ರಸ್ತೆ ನಿರ್ಮಿಸಿದ್ದಾರೆ. ಹೀಗೆ ಕೆರೆ ಅಭಿವೃದ್ಧಿ ನೆಪದಲ್ಲಿ ಹಣ ಲೂಟಿ ಹೊಡೆಯಲಾಗಿದೆ ಎಂದು ಅವರು ತಿಳಿಸಿದರು.

ಮುಂದಿನ ದಿನಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತ್ತು ಲೋಕಸಭಾ ಚುನಾವಣೆ ಎದುರಾಗಲಿದೆ. ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲು ನೀವೆಲ್ಲ ಶ್ರಮಿಸಬೇಕು. ಈ ಮೂಲಕ ಬೆಂಗಳೂರಿನ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸಮಾವೇಶದಲ್ಲಿ ಅವರು ಮನವಿ ಮಾಡಿದರು.
ಇದೇ ವೇಳೆ ಕಾಂಗ್ರೆಸ್ ಸಂಸದ ಹಾಗೂ ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಮಾತನಾಡಿ, ಆರ್‌ಆರ್‌ನಗರ ಕ್ಷೇತ್ರಕ್ಕೆ ಕೆಲವು ಕಳಂಕಗಳು ಅಂಟಿವೆ. ಅದನ್ನು ತೊಳೆಯಲು ವೇಲು ನಾಯಕರ್, ಜಿ.ಮೋಹನ್ ಕುಮಾರ್,ಸಿದ್ದೇಗೌಡ, ಶ್ರೀನಿವಾಸ ಮೂರ್ತಿ ಮತ್ತಿತರರು ಬಂದಿದ್ದಾರೆ. ಕಾಂಗ್ರೆಸ್‌ನಲ್ಲಿ ಮೂಲ ಮತ್ತು ವಲಸಿಗರು ಎಂಬ ಬೇಧ ಇಲ್ಲದೆ ಎಲ್ಲ ಒಟ್ಟಾಗಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಕ್ರಿಯಾಶೀಲರಾಗಬೇಕು ಎಂದು ಅವರು ತಿಳಿಸಿದರು.
ನಾನು ದ್ವೇಷ ರಾಜಕಾರಣ ಮಾಡಿಲ್ಲ: ಕುಸುಮಾ
ಆರ್ಆರ್ ನಗರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಎಚ್.ಕುಸುಮಾ ಅವರು, ನಾನು ಕೊಳಚು ಹೋಗಿರುವ ಹಣ್ಣಿಗೆ ಕಲ್ಲು ಹೊಡೆಯುವ ಕೆಲಸ ಮಾಡುವುದಿಲ್ಲ. ಅದೇ ಕೆಳಗೆ ಬೀಳುತ್ತದೆ. ಅಕ್ರಮ, ಮೋಸ, ವಂಚನೆ ಮಾಡಿದವರನ್ನು ದೇವರೇ ನೋಡಿಕೊಳ್ಳುತ್ತಾನೆ ಎಂದ ಅವರು ನಾನು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಬಿಜೆಪಿ ಶಾಸಕರಿಗೆ ಟಾಂಗ್ ನೀಡಿದರು.
ಮೈತ್ರಿ ಸರ್ಕಾರ ಪತನವಾಗಿ ಉಪಚುನಾವಣೆ ನಡೆದ ವೇಳೆ ಆರ್ಆರ್ ನಗರ ಕ್ಷೇತ್ರದಲ್ಲಿ ನಕಲಿ ಮತದಾರರ ಗುರುತಿನ ಪತ್ತೆಯಾಗಿದ್ದು ಭಾರಿ ಸದ್ದು ಮಾಡಿತ್ತು. ಇತ್ತೀಚಿನ ಚುನಾವಣೆಯಲ್ಲಿ ದ್ವೇಷದ ರಾಜಕಾರಣ, ಮುಸಲ್ಮಾನ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಬಿಜೆಪಿ ಶಾಸಕರು ಮತ ಒಡೆಯಲು ಮುಂದಾಗಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಕ್ಷೇತ್ರ ವ್ಯಾಪ್ತಿಯಲ್ಲಿ ವ್ಯಾಪಕ ಅಕ್ರಮ, ಭ್ರಷ್ಟಾಚಾರ ನಡೆದಿವೆ ಎನ್ನಲಾಗಿದೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ.












Click it and Unblock the Notifications