Bengaluru Sub Urban Rail: ಕೆ-ರೈಡ್‌ಗೆ ಎಂಡಿ ನೇಮಕವಾಗಿಲ್ಲ!, ₹15,767 ಕೋಟಿ ಯೋಜನೆ ನಿರ್ವಹಣೆ ಬಗೆ ಇದೇನಾ?
ಬೆಂಗಳೂರು, ಮೇ 27: ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ರೈಲ್ವೆ ಇಲಾಖೆ ಸಹಕಾರದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆಗೆ ಸಾವಿರಾರು ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ಈ ಯೋಜನೆ ಕಾಮಗಾರಿಯನ್ನು ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿಗೆ (K-RIDE) ನೀಡಲಾಗಿದೆ. ಆದರೆ ಈ ಕಂಪನಿಗೆ ವರ್ಷಗಳಿಂದಲೂ ವ್ಯವಸ್ಥಾಪಕ ನಿರ್ದೇಶಕರೇ ಇಲ್ಲ. ಮೊದಲೇ ರೈಲ್ವೆ ಯೋಜನೆ ವಿಳಂಬವಾಗುತ್ತಿದೆ. ಈ ಮಧ್ಯೆ ಎಂಡಿ ಇಲ್ಲದೇ ಕಂಪನಿ ಹೇಗೆ ನಿರ್ವಹಣೆ ಮಾಡುತ್ತದೆ, ಗಡುವಿನೊಳಗೆ ಹೇಗೆ ಕೆಲಸ ಮುಗಿಸುತ್ತದೆ ಎಂಬ ಅನುಮಾನ ಮೂಡಿಸಿದೆ.
ಹೌದು, ಇದೇ ವಿಚಾರ ಕುರಿತಂತೆ ಬಿಜೆಪಿ ಸಂಸದ ಪಿ.ಸಿ.ಮೋಹನ್ ಅವರು ಪ್ರಶ್ನೆ ಮಾಡಿದ್ದಾರೆ. ರಾಜ್ಯ ಸರ್ಕಾರದ ಹಾಗೂ ಬೆಂಗಳೂರು ಉಪನಗರ ರೈಲ್ವೆ ಯೋಜನೆ ನಿಧಾನಗತಿ ಕೆಲಸ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ಕೆ-ರೈಡ್‌ಗೆ 2 ವರ್ಷಗಳಿಂದ ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರಿಲ್ಲ. ಬದಲಾಗಿ, ವರ್ಷಗಳಿಂದ ಹುದ್ದೆಗಾಗಿ ಕಾಯುತ್ತಿರುವ 2017 ರ ಬ್ಯಾಚ್ ಅಧಿಕಾರಿಯನ್ನು ವಿಶೇಷ ಉಪ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ ಎಂದು ವಿವರಿಸಿದರು.

ಬೆಂಗಳೂರು ಉಪನಗರ ರೈಲ್ವೆ ಯೋಜನೆಯು (K-RIDE) ಒಂದು ನಿರ್ಣಾಯಕ ಯೋಜನೆಯಾಗಿದೆ. ಇಂತಹ ಮಹತ್ವದ ಯೋಜನೆಯನ್ನು ಅರೆಕಾಲಿಕ, ಅನನುಭವಿ ನಾಯಕತ್ವದಲ್ಲಿ ಹೇಗೆ ನಡೆಯಬಹುದು? ಎಂದು ಅವರು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಈ ಕೆರೈಡ್ ಹುದ್ದೆ ಕುರಿತು ಒಂದಷ್ಟು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.
ಈ ಹುದ್ದೆಯನ್ನು ವಿಶೇಷವಾಗಿ ರಚಿಸಲಾಗಿದೆಯೇ?
ರಾಜ್ಯ ಸರ್ಕಾರವು ನನಗೆ ಉತ್ತರಿಸಬೇಕು. ವ್ಯವಸ್ಥಾಪಕ ನಿರ್ದೇಶಕರ (MD) ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿಗೆ (K-RIDE) ನಲ್ಲಿ ಅಸ್ತಿತ್ವದಲ್ಲಿರುವ ಹುದ್ದೆಯೇ ಅಥವಾ ಹುದ್ದೆಗಾಗಿ ಕಾಯುತ್ತಿರುವ ಕಿರಿಯ ಅಧಿಕಾರಿಯನ್ನು ನೇಮಿಸಲು ವಿಶೇಷವಾಗಿ ರಚಿಸಲಾಗಿದೆಯೇ? ಎಂದು ಅವರು ಸರ್ಕಾರ ನಡೆಯನ್ನು ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ 148 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಾಲ್ಕು ಕಾರಿಡಾರ್‌ಗಳಗಾಗಿ (ಕನಕ, ಪಾರಿಜಾತ, ಸಂಪಿಗೆ ಮತ್ತು ಮಲ್ಲಿಗೆ) ಬೆಂಗಳೂರು ಉಪನಗರ ಯೋಜನೆ ಜಾರಿಗೆ ತೆರಲಾಗುತ್ತಿದೆ. ಇದಕ್ಕಾಗಿ ₹15,767 ಕೋಟಿ ಯೋಜನೆ ಇದಾಗಿದ್ದು, ಇಂಥದ್ದೊಂದು ಬೃಹತ್ ಯೋಜನೆ ನಿರ್ವಹಿಸುವ ಗಂಭೀರತೆ ಇದೇನಾ? ಎಂದು ಕಿಡಿ ಕಾರಿದ್ದಾರೆ.
ಈಗಾಗಲೇ ಯೋಜನೆ ವಿಳಂಬವಾಗಿದೆ. ಈ ಮಧ್ಯೆ ಮತ್ತಷ್ಟು ವಿಳಂಬ ಮಾಡದೆ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿಗೆ (K-RIDE) ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸಬೇಕು. ಈ ಮೂಲಕ ಯೋಜನೆ ತ್ವರಿತ ಪೂರ್ಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
K-RIDE, executing the Bengaluru Suburban Rail project, has had no full-time MD for 2 years. Instead, a 2017-batch officer who has been awaiting posting for years has been made Special Deputy Commissioner. How can such a critical project run on part-time, inexperienced leadership?
— P C Mohan (@PCMohanMP) May 26, 2025
ಉಪನಗರ ರೈಲ್ವೆ ಯೋಜನೆ ಕುರಿತು..
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು 50:50 ಅನುಪಾತದಲ್ಲಿ ಯೋಜನೆಗೆ ಹಣ ಒದಗಿಸುತ್ತಿವೆ. ಕೆ-ರೈಡ್ ಜಾಗ ವಿಚಾರವಾಗಿ ಇದ್ದ ಗೊಂದಲ ನಿವಾರಣೆ ಆಗಿ ತಿಂಗಳುಗಳೇ ಕಳೆದಿವೆ. ಪ್ರಧಾನಿ ಮೋದಿಯವರು 2022ರಲ್ಲಿ ಮುಂದಿನ 40 ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸುವುದಾಗಿ ಘೋಷಿಸಿದ್ದರು. ಈಗಾಗಲೇ ವಿಳಂಬವಾದ ಯೋಜನೆ 2025ರಲ್ಲಿ ಪೂರ್ಣಗೊಳ್ಳಬೇಕಿತ್ತು. ಇದೀಗ ಅದರ ಗಡುವು 2027ಕ್ಕೆ ಮುಂದೂಡಿಕೆ ಆಗಿದೆ. ಹೀಗೆ ವಿಳಂಬವಾಗುತ್ತಾ ಹೋದರೆ, ಯೋಜನೆ ಜನರಿಗೆ ತಲುಪುವುದು ಯಾವಾಗ ಎಂಬ ಪ್ರಶ್ನೆ ಉದ್ಭವವಾಗಿದೆ.












Click it and Unblock the Notifications