ತಂತ್ರಜ್ಞಾನ-ಉದ್ಯಮ ಅಗತ್ಯತೆ ತಕ್ಕಂತೆ ಕೌಶಲ್ಯ ವೃದ್ಧಿಗೆ ಸರ್ಕಾರ ಬದ್ಧ: ಸಿಎಂ
ಬೆಂಗಳೂರು, ಆಗಸ್ಟ್ 04: ಪ್ರಸ್ತುತದಲ್ಲಿನ ತಂತ್ರಜ್ಞಾನ ಮತ್ತು ಉತ್ಪಾದನೆಗೆ ಅಗತ್ಯವಾದ ಕೌಶಲ್ಯ ವೃದ್ಧಿಸಲು ನಮ್ಮ ಸರ್ಕಾರ ತೀರ್ಮಾನಿಸಲಾಗಿದೆ. ಆ ಮೂಲಕ ಉದ್ಯಮ ಜಗತ್ತಿಗೆ ಅಗತ್ಯವಾದ ಕೌಶಲ್ಯಾಧಾರಿತ ಯುವ ಸಮೂಹವನ್ನು ಸೃಜಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ರಾಜ್ಯ ಯೋಜನಾ ಇಲಾಖೆ ವತಿಯಿಂದ ಬೆಂಗಳೂರಿನ ಹೋಟೆಲ್ ನಲ್ಲಿ ಶುಕ್ರವಾರ ನಡೆದ ಶಿಕ್ಷಣ ಕುರಿತ ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉದ್ಯಮ ಕ್ಷೇತ್ರದ ಬೆಳವಣಿಗೆಗೆ ಮತ್ತು ಪ್ರಗತಿಗೆ ಅಗತ್ಯವಾದ ಎಲ್ಲಾ ಸಹಕಾರ ಮತ್ತು ನೆರವನ್ನು ಕಾಂಗ್ರೆಸ್ ನೀಡಲಿದೆ.

ಕಾರ್ಪೋರೇಟ್ ಸಂಸ್ಥೆಗಳು ಮತ್ತು ಉದ್ಯಮ ಕ್ಷೇತ್ರ ಸರ್ಕಾರದ ಜತೆಗೆ ಸಮಾಜದ ಪ್ರಗತಿಗೆ ಕೈ ಜೋಡಿಸಬೇಕು. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ನೀವು ಸಮಾಜದ ಮತ್ತು ಉದ್ಯಮ ಕ್ಷೇತ್ರದ ಆರೋಗ್ಯಕರ ಪ್ರಗತಿಗೆ ಮುಂದಾಗಬೇಕಿದೆ ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.
ಬಡವ ಶ್ರೀಮಂತರ ನಡುವಿನ ಅಂತರ ಕಡಿಮೆ ಮಾಡಬೇಕು ಎನ್ನುವ ಉದ್ದೇಶದಿಂದಲೇ ಸಾರ್ವತ್ರಿಕ ಮೂಲ ಆದಾಯ ಎನ್ನುವ ತತ್ವದ ಅಡಿಯಲ್ಲಿ ನಾವು ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ. ಅದರ ಆಶಯದಡಿ ಆಯವ್ಯಯವನ್ನು ರೂಪಿಸಲಾಗಿದೆ ಎಂದು ವಿವರಿಸಿದರು.
ಗ್ಯಾರಂಟಿಯಿಂದ ಆರ್ಥಿಕತೆಗೆ ಚೈತನ್ಯ
ಈ ಐದು ಗ್ಯಾರಂಟಿಗಳು ಒಂದು ಜಾತಿ, ಧರ್ಮಕ್ಕೆ ಸಿಮಿದ ಮಾಡದೇ ಎಲ್ಲರಿಗೂ ಅನ್ವಯವಾಗುವಂತೆ ಐದು ಗ್ಯಾರಂಟಿಗಳನ್ನು ರೂಪಿಸಲಾಯಿತು. ಗ್ಯಾರಂಟಿಗಳಿಂದ ಆರ್ಥಿಕತೆಗೆ ಹೊಸ ಚೈತನ್ಯ ಮತ್ತು ಶಕ್ತಿ ಬಂದಿದೆ. ನಾಡಿನ ಮಹಿಳೆಯರಿಗೆ ಆರ್ಥಿಕ ಸಫಲತೆ ಬಂದಿದೆ. ಹಸಿವಿನಿಂದ ಮಲಗುವವರು ಇಲ್ಲದಾಗಿದ್ದಾರೆ. ಬಾಲ ಕಾರ್ಮಿಕ ಪದ್ಧತಿ ನಶಿಸಲು ನಮ್ಮ ಕಾರ್ಯಕ್ರಮ ಮತ್ತು ಗ್ಯಾರಂಟಿಗಳು ನೆರವಾಗುತ್ತಿವೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರು, ರಾಜ್ಯದಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಕೇವಲ ಎರಡು ತಿಂಗಳಲ್ಲಿ ಫಾಕ್ಸ್‌ಕಾನ್ ಮತ್ತು ಐಬಿಸಿ ತರಹದ ದಿಗ್ಗಜ ಕಂಪನಿಗಳು ರಾಜ್ಯದಲ್ಲಿ ಅಪಾರ ಹೂಡಿಕೆಗೆ ಮನಸ್ಸು ಮಾಡಿವೆ ಎಂದು ಹರ್ಷ ವ್ಯಕ್ತಪಡಿಸಿದರು.
ವಿಷನ್ ಗ್ರೂಪ್ ರಚನೆ
CSR ಪಾಲುದಾರರು ರಾಜ್ಯದ ಸುಸ್ಥಿರ ಅಭಿವೃದ್ಧಿ ಗುರಿಗಳೊಂದಿಗೆ ತಮ್ಮ ಗುರಿಗಳನ್ನೂ ಸೇರಿಸಿಕೊಳ್ಳುವುದು ಅಗತ್ಯ. ಇದರೊಂದಿಗೆ ಮುಂದಿನ ದಿನಗಳಲ್ಲಿ ಸಿಎಸ್‌ಆರ್ ಚಟುವಟಿಕೆಗಳು ಮತ್ತಷ್ಟು ವ್ಯಾಪಕಗೊಳ್ಳಬೇಕಾದ ಅಗತ್ಯವಿದೆ. ಇಂತಹ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡೇ ಪ್ರಮುಖ ವಲಯಗಳಿಗೆ ಸಂಬಂಧಿಸಿದಂತೆ ವಿಷನ್ ಗ್ರೂಪ್‌ಗಳನ್ನು ರಚಿಸಲಾಗುತ್ತಿದೆ ಎಂದರು.
ನಿತ್ಯವು ಬದಲಾವಣೆ ಹೊಂದುತ್ತಿರುವ ಜಗತ್ತಿನಲ್ಲಿ ವಿದ್ಯಾರ್ಥಿಗಳು ಸ್ಪರ್ಧಿಸಬೇಕಾಗಿದೆ. ಇದಕ್ಕಾಗಿ ರಾಜ್ಯದಲ್ಲಿ ಆಧುನಿಕ ತಂತ್ರಜ್ಞಾನ ಇತ್ಯಾದಿಗಳನ್ನು ಕಲಿಕೆಯ ಕ್ರಮದ ಭಾಗವನ್ನಾಗಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಮಕ್ಕಳಿಗೆ ಸರಿಯಾದ ಜ್ಞಾನ ಮತ್ತು ಅಗತ್ಯ ಕೌಶಲ್ಯಗಳೆರಡನ್ನೂ ಕಲಿಸಲಾಗುವುದು. ಈ ನಿಟ್ಟಿನಲ್ಲಿ ಕಂಪನಿಗಳ ಸಿಎಸ್‌ಆರ್ ಚಟುವಟಿಕೆಗಳನ್ನು ಸರ್ಕಾರ ಬೆಂಬಲಿಸಲಿದೆ ಎಂದು ಅವರು ಭರವಸೆ ನೀಡಿದರು.
ಕಾಐFಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಗೃಹ ಸಚಿವ ಜಿ.ಪರಮೇಶ್ವರ್, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್, ಯೋಜನಾ ಇಲಾಖೆ ಸಚಿವ ಡಿ.ಸುಧಾಕರ್ ಇನ್ನಿತರರು ಉಪಸ್ಥಿತರಿದ್ದರು.












Click it and Unblock the Notifications