ರಾಜ್ಯಪಾಲರು ಆತುರದಿಂದ ಸಿಎಂಗೆ ನೋಟಿಸ್: ವಾಪಸ್ ಪಡೆಯದಿದ್ದರೆ ಕಾನೂನು ಹೋರಾಟ: ಗೃಹ ಸಚಿವ
ಬೆಂಗಳೂರು, ಆಗಸ್ಟ್ 02: ಮುಡಾ ಹಗರಣ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ಶೋಕಾಸ್ ನೋಟಿಸ್ ನೀಡಿದ್ದಾರೆ. ಇದು ಆತುರಾತುರದಲ್ಲಿ ನೀಡಲಾಗಿದೆ. ಇದೆಲ್ಲ ನೋಡಿದರೆ ರಾಜ್ಯಪಾಲರ ಮೇಲೆ ಬೇರೆ ಬೇರೆ ರೀತಿಯಲ್ಲಿ ಒತ್ತಡಗಳು ಬಂದಿದೆ ಎಂಬ ಅನುಮಾನ ವ್ಯಕ್ತವಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಗೃಹ ಸಚಿವರು, ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಿರುವ ನೋಟಿಸ್ ಕುರಿತು ಏನು ಮಾಡಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ನೋಟಿಸ್ ಹಿಂಪಡೆಯುವ ಸಂಪುಟದ ತಿರ್ಮಾನವನ್ನು ನಿನ್ನೆ ರಾತ್ರಿಯೇ ರಾಜ್ಯಪಾಲರಿಗೆ ಕಳುಹಿಸಲು ತೀರ್ಮಾನಿಸಲಾಗಿತ್ತು. ರಾಜ್ಯದಲ್ಲಿ ರಾಜ್ಯಪಾಲರು ಇಲ್ಲ, ರಾಜ್ಯಪಾಲರ ಕಚೇರಿಗೆ ಸರ್ಕಾರದ ನೀರ್ಣಯ ತಲುಪಿಸಿರಬೇಕು ಎಂದು ತಿಳಿಸಿದರು.

ನಾವು ಕಾನೂನಾತ್ಮಕ ಹೋರಾಟಕ್ಕೆ ಸಿದ್ಧ
ಒಂದು ವೇಳೆ ರಾಜ್ಯಪಾಲರು ಏನೇ ನಿರ್ಧಾರ ಕೈಗೊಂಡರು ನಾವು ಎದುರಿಸಲಿದ್ದೇವೆ. ನಾವೆಲ್ಲರು ಕಾನೂನಾತ್ಮಕ ಹೋರಾಟ ಮಾಡಲಿದ್ದೇವೆ. ರಾಜ್ಯಪಾಲರು ಯಾವುದೇ ನಿರ್ಧಾರ ಕೈಗೊಂಡರು ಸಹಿತ ನಮ್ಮ ಸರ್ಕಾರ ನ್ಯಾಯಾಲಯದ ಬಾಗಿಲು ತಟ್ಟಬೇಕಾಗುತ್ತದೆ ಎಂದು ಮುಂದಿನ ನಡೆ ಬಗ್ಗೆ ತಿಳಿಸಿದರು.
ರಾಜ್ಯಪಾಲರಿಗೆ ಶೋಕಾಸ್ ನೊಟೀಸ್ ಕೊಡುವುದು, ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡುವ ಅಧಿಕಾರ ಹೊಂದಿದ್ದಾರೆ. ಆದರೆ ಅದನ್ನು ಅವರು ದಾಖಲೆ ಸಮೇತ ಸಮರ್ಥಿಸಿಕೊಳ್ಳಬೇಕಾಗುತ್ತದೆ. ನೋಟಿಸ್ ನೀಡಿದ್ದಕ್ಕೆ ಅವರು ಸ್ಪಷ್ಟನೆ ಕೊಡಬೇಕಾದ ಪ್ರಕ್ರಿಯೆಗಳು ಇರುತ್ತವೆ ಎಂದು ಅವರು ವಿವರಿಸಿದರು.

ದೂರು ದಾಖಲಾದ ದಿನವೇ ರಾಜ್ಯಪಾಲರಿಂದ ನೋಟಿಸ್
ಇನ್ನು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಒತ್ತಾಯಿಸಿದ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಅವರಿಂದ ದೂರು ಪಡೆದ ದಿನವೇ (ಜುಲೈ 26) ರಾಜ್ಯಪಾಲರು ಸಿಎಂಗೆ ನೊಟೀಸ್ ಕೊಟ್ಟಿದ್ದಾರೆ. ಅದೇ ದಿನ ಸಿಎಸ್ ಅವರು ರಾಜ್ಯಪಾಲರ ಪ್ರಶ್ನೆಗಳಿಗೆ ಲಿಖಿತ ರೂಪದಲ್ಲಿ ಕೊಟ್ಟು ಬಂದಿದ್ದಾರೆ. ಇದಾದ ಬಳಿಕ ರಾಜ್ಯಪಾಲರ ಶೋಕಾಸ್ ನೊಟೀಸ್ ಸಿಎಂ ಕೈಸೇರಿದೆ.
ಸದ್ಯ ಶೋಕಾಸ್ ನೋಟಿಸ್ ನೀಡಿರುವ ರಾಜ್ಯಪಾಲರ ಸಂಪುಟ ಸಭೆಯ ಮನವಿ ಸಲಹೆ, ಮನವಿ ಪುರಸ್ಕರಿಸಿ, ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವುದಿಲ್ಲ ಎಂಬ ವಿಶ್ವಾಸ ಇದೆ. ಒಂದು ವೇಳೆ ಕಾನೂನು ಪ್ರಕ್ರಿಯೆಗೆ ಅನುಮತಿ ಕೊಟ್ಟರೂ ಅದನ್ನು ಕಾನೂನು ಪ್ರಕಾರ ಎದುರಿಸುತ್ತೇವೆ ಎಂದರು.
ರಾಜ್ಯಪಾಲರ ತಪ್ಪು ಮನವರಿಕೆ ಮಾಡಿಕೊಡುತ್ತೇವೆ
ರಾಜ್ಯಪಾಲರು ಮತ್ತು ಸರ್ಕಾರದ ಮಧ್ಯೆ ಅನೇಕ ಸಂದರ್ಭದಲ್ಲಿ ಇಂಥ ಸಂದರ್ಭಗಳು ಬರುತ್ತವೆ. ಕಾನೂನು ಪ್ರಕಾರ ಏನು ಮಾಡಬೇಕೋ ಮಾಡುತ್ತೇವೆ. ನಿಮ್ಮಿಂದ ತಪ್ಪಾಗಿದೆ ಅಂತ ಮನವರಿಕೆ ಮಾಡಿಕೊಡುವ ಕೆಲಸವನ್ನು ಸರ್ಕಾರ ಮಾಡಲಿದೆ. ಅವರೇ ಸಂವಿಧಾನಬದ್ಧ ಅಧಿಕಾರ ಸರಿಯಾಗಿ ಉಪಯೋಗಿಸದಿದ್ದರೆ ನಾವು ಕಾನೂನು ಮೊರೆ ಹೋಗಬೇಕಾಗುತ್ತದೆ ಎಂದು ತಿಳಿಸಿದರು.
ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಸರ್ಕಾರ ಅಸ್ತು
ಇನ್ನೂ ಬಿಜೆಪಿ-ಜೆಡಿಎಸ್ ನಾಯಕರು ಶಾಂತಿಯುತವಾಗಿ ಪಾದಯಾತ್ರೆಗೆ ನಡೆಸುವುದಾಗಿ ತಿಳಿಸಿದ್ದರಿಂದ ರಾಜ್ಯ ಸರ್ಕಾರ ಅನುಮತಿ ಕೊಡಲು ನಾವು ನಿರ್ಧರಿಸಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.
ಮಹಿಳೆ ಅಪಹರಣ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರ ತಾಯಿ ಭವಾನಿ ವಿರುದ್ಧ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಿ.ಪರಮೇಶ್ವರ್ ಅವರು, ತನಿಖಾಧಿಕಾರಿಗಳು ಎಲ್ಲ ಗಮನಿಸಿ ಚಾರ್ಜ್‌ಶೀಟ್ ಹಾಕಿದ್ದಾರೆ.
ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ನ್ಯಾಯಾಲಯ ತನ್ನ ತೀರ್ಪು ಕಾಯ್ದಿರಿಸಿದ್ದು, ಮುಂದೆ ನೋಡೋಣ ಎಂದು ಹೇಳಿದರು.












Click it and Unblock the Notifications