ಶಾಲೆ ನಿರ್ಮಾಣಕ್ಕೆ ಅನುಮತಿ ವಿಳಂಬ: ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಗರಂ
ಬೆಂಗಳೂರು, ಏಪ್ರಿಲ್ 15: ಮಕ್ಕಳ ಶಿಕ್ಷಣದ ಕುರಿತು ಜಪಾನ್ ದೇಶದದಿಂದ ಪಾಠ ಕಲಿಯಿರಿ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ. ಅಲ್ಲದೇ, ನೂತನವಾಗಿ ಸರ್ಕಾರಿ ಪ್ರಾರ್ಥಮಿಕ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲು ಮೀನಾಮೇಷ ಎಣಿಸುತ್ತಿದ್ದ ಅಧಿಕಾರಿಗಳ ಕ್ರಮಕ್ಕೆ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಬೆಂಗಳೂರು- ಮೈಸೂರು ರಸ್ತೆ ಅಗಲೀಕರಣಕ್ಕಾಗಿ ಶಾಲೆಯ ಕಟ್ಟಡ ಮತ್ತು ಜಮೀನನ್ನು ಬಿಟ್ಟುಕೊಟ್ಟು ಪರಿಹಾರವನ್ನು ಪಡೆದಿದ್ದರೂ, ನೂತನವಾಗಿ ಶಾಲೆ ನಿರ್ಮಿಸಲು ಸ್ಥಳಾವಕಾಶ ಒದಗಿಸದೆ ಮತ್ತು ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡದ ಅಧಿಕಾರಿಗಳ ಕ್ರಮ ಪ್ರಶ್ನಿಸಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಅಗರಲಿಂಗನ ದೊಡ್ಡಿಯ ಸರ್ಕಾರಿ ಕಿರಿಯ ಪ್ರಾರ್ಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ(ಎಸ್‌ಡಿಎಂಸಿ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ, ಜಪಾನ್ ದೇಶದ ಕ್ರಮವನ್ನು ಪ್ರಸ್ತಾಪಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ.

ಜಪಾನ್ ಉದಾಹರಣೆ ಉಲ್ಲೇಖ
ಜಪಾನ್ ದೇಶದದ ಹೊಕ್ಕೈಡೋ ಎಂಬ ದ್ವೀಪದ ಹಳ್ಳಿಯೊಂದರಲ್ಲಿ ರೈಲು ನಿಲ್ದಾಣದ ಕಾರ್ಯಚರಣೆ ಸ್ಥಗಿತಗೊಳಿಸಲು ಅಲ್ಲಿನ ಸರ್ಕಾರ ಮುಂದಾಗಿತ್ತು. ಆದರೆ, ಕೇವಲ ಒಬ್ಬ ವಿದ್ಯಾರ್ಥಿನಿ ರೈಲಿನಲ್ಲಿ ಪ್ರಯಾಣಿಸಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ ಎಂಬ ಅಂಶವನ್ನು ಅರಿತು ಆ ಒಂದೇ ವಿದ್ಯಾರ್ಥಿನಿ ಪ್ರೌಢ ಶಿಕ್ಷಣದಿಂದ ಪದವಿಯವರೆಗೂ ಶಿಕ್ಷಣ ಮುಂದುವರೆಸಲು ರೈಲ್ವೆ ನಿಲ್ದಾಣ ಮತ್ತು ರೈಲು ಸಂಚಾರ ಮುಂದುವರೆಸಿತ್ತು.
ಈ ಅಂಶ ಬಹಿರಂಗವಾಗುತ್ತಿದ್ದಂತೆ ಜಪಾನ್ ದೇಶದ ಸರ್ಕಾರಕ್ಕೆ ವಿಶ್ವದಾಧ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ನಮ್ಮ ಸರ್ಕಾರಿ ಅಧಿಕಾರಿಗಳು ಶಾಲೆ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡದೆ ಮಕ್ಕಳ ಶಿಕ್ಷಣ ಹಕ್ಕುಗಳನ್ನು ಹರಣ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದೆ.
ಮೂಲಭೂತ ಹಕ್ಕು ಉಲ್ಲಂಘನೆ
ಸಂವಿಧಾನದ ಪರಿಚ್ಛೇದ 21ಎ ರ ಅಡಿಯಲ್ಲಿ ಶಿಕ್ಷಣ ಪಡೆಯುವುದು ಮಕ್ಕಳ ಮೂಲಭೂತ ಹಕ್ಕಾಗಲಿದೆ ಎಂದು ಹೇಳಿರುವ ನ್ಯಾಯಾಲಯ, ಅದು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕೆಂದು ಹೇಳಿದೆ. ಮುಂದಿನ ಸೆಪ್ಟಂಬರ್ ಅಂತ್ಯದ ವೇಳೆ ಶಾಲೆಗೆ ಅಗತ್ಯವಿರುವ ಭೂಮಿ ಮತ್ತು ಹೊಸ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು. ಈ ಸಂಬಂಧದ ಆದೇಶದ ಅನುಷ್ಠಾನದ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಬೇಕು ಎಂದು ನ್ಯಾಯಪೀಠ ತಿಳಿಸದೆ.
ಪ್ರಕರಣ ಹಿನ್ನೆಲೆ ಏನು?
ಬೆಂಗಳೂರು - ಮೈಸೂರು ಹೆದ್ದಾರಿಗೆ ಹೊಂದಿಕೊಂಡಿರುವ ಅಗರಲಿಂಗ ದೊಡ್ಡಿಯಲ್ಲಿ ಸರ್ಕಾರಿ ಶಾಲೆ ನಡೆಯುತ್ತಿತ್ತು. ಈ ಮಾರ್ಗವನ್ನು ಎಕ್ಸ್‌ಪ್ರೆಸ್‌ವೇಯನ್ನಾಗಿ ಮೇಲ್ದರ್ಜೆಗೇರಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎ)ಶಾಲೆಯ ಜಾಗ ಮತ್ತು ಕಟ್ಟಡವನ್ನು ವಶಕ್ಕೆ ಪದು ಕೊಂಡಿತ್ತು. ಅಲ್ಲದೆ, 66.95 ಲಕ್ಷ ರು.ಗಳ ಪರಿಹಾರವನ್ನು ನೀಡಿತ್ತು. ಈ ಶಾಲೆಯಲ್ಲಿ ಒಂದರಿಂದ ಐದನೇ ತರಗತಿಯವರೆಗೂ 25 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಪ್ರಸ್ತುತ ಶೌಚಾಲಯ ಮತ್ತು ಅಗತ್ಯ ಸೌಲಭ್ಯಗಳಿಲ್ಲದ ಖಾಸಗಿ ಕಟ್ಟಡದಲ್ಲಿ ಶಾಲೆ ನಡೆಯುತ್ತಿದೆ.
ಈ ನಡುವೆ ಶಾಲೆಗೆ ಬಂದಿದ್ದ ಪರಿಹಾರ ಮೊತ್ತದಲ್ಲಿ ಶಾಲೆಗೆ ಜಾಗ ಮತ್ತು ಕಟ್ಟಡ ನಿರ್ಮಾಣಕ್ಕಾಗಿ ಅನುಮತಿ ನೀಡುವಂತೆ ಕೋರಿ ಎಸ್‌ಡಿಎಂಸಿ ಸದಸ್ಯರು ಮಂಡ್ಯ ಜಿಲ್ಲಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಪತ್ರ ಬರೆದು ಮನವಿ ಮಾಡಿದೆ. ಮನವಿ ಕುರಿತು ಪರಿಶೀಲಿಸಿ ಕ್ರಮಕ್ಕೆ ಮುಂದಾಗದ ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದರು.
ಅಲ್ಲದೆ, ಪರಿಹಾರ ಮೊತ್ತವನ್ನು ರಾಜ್ಯದ ನಿಧಿಗೆ ಜಮಾ ಮಾಡುವಂತೆ ಸೂಚನೆಯನ್ನೂ ನೀಡಿದ್ದರು. ಸುಮಾರು ಮೂರು ವರ್ಷ ಕಳೆದರೂ ಸರ್ಕಾರ ಮತ್ತು ಅಧಿಕಾರಿಗಳು ಇದೇ ಆಟವನ್ನು ಮುಂದುವರೆಸಿದ್ದರು. ಈ ನಿಟ್ಟಿನಲ್ಲಿ ಎಸ್‌ಡಿಎಂಸಿ ಹೈಕೋರ್ಟ್‌ಗೆ ಮೊರೆ ಹೋಗಿತ್ತು.












Click it and Unblock the Notifications