ಸರ್ಕಾರಿ ಸಿಬ್ಬಂದಿ & ಅಧಿಕಾರಿಗಳಿಂದ ಈ ದಿನ ಸಮೂಹಿಕ ರಜೆ, ಕಾರಣವೇನು ?
ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕದ ಪ್ರಮುಖ 10 ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿಭಟನೆ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಇದರಿಂದ ಬೆಂಗಳೂರು ಸೇರಿ ಕರ್ನಾಟಕದ ಪ್ರಮುಖ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಹೌದು 7ನೇ ವೇತನ ಆಯೋಗದ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡುವುದಕ್ಕೆ ಬಿಬಿಎಂಪಿಯ ಸೇರಿ ಪ್ರಮುಖ ಪಾಲಿಕೆಯ ಅಧಿಕಾರಿಗಳು ಮುಂದಾಗಿದ್ದಾರೆ. ಸಾಮೂಹಿಕ ರಜೆ ಹಾಕುವುದಾಗಿ ಹೇಳಿದ್ದಾರೆ. ಹೀಗಾಗಿ, ಮುಂದಿನ ವಾರ ಬಿಬಿಎಂಪಿ ಕಚೇರಿ ಸೇರಿ ರಾಜ್ಯದ ವಿವಿಧ ಭಾಗದಲ್ಲಿ ಸರ್ಕಾರಿ ಕೆಲಸಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ಕರ್ನಾಟಕದ ಪ್ರಮುಖ ಪಾಲಿಕೆಗಳಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಸೇರಿದಂತೆ 10 ಪಾಲಿಕೆಗಳ ಸಿಬ್ಬಂದಿ ಹಾಗೂ ಅಧಿಕಾರಿಗಳು ಸಾಮೂಹಿಕ ರಜೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ಅಧಿಕಾರಿ/ ನೌಕರರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಜುಲೈ 07ರಿಂದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಪ್ರತಿಭಟನೆ, ಹೋರಾಟವನ್ನು ಹಮ್ಮಿಕೊಂಡಿದ್ದಾರೆ. ಈ ದಿನ ಸರ್ಕಾರಿ ಕೆಲಸದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕರ್ನಾಟಕ ರಾಜ್ಯ ಮಹಾನಗರ ಪಾಲಿಕ ನೌಕರರ ಸಂಘಗಳ ಪರಿಷತ್ತು ವತಿಯಿಂದ ಈ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ, ನಗರಾಭಿವೃದ್ಧಿ ಸಚಿವ ಹಾಗೂ ಸರ್ಕಾರ ನಗರಾಭಿವೃದ್ಧಿ ಕಾರ್ಯದರ್ಶಿಗೆ ಮನವಿ ಪತ್ರಗಳನ್ನು ಸಲ್ಲಿಸಿದ್ದೇವೆ. ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಮನವಿ ಸಲ್ಲಿಸಿದ್ದರೂ ಈ ವರೆವಿಗೂ ಯಾವುದೇ ರೀತಿ ಸಕರಾತ್ಮಕವಾಗಿ ಸ್ಪಂದನೆ ಸಿಕ್ಕಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ವಿಶ್ವಾಸ ಸಿಕ್ಕಿಲ್ಲ. ಹೀಗಾಗಿ 10 ಮಹಾನಗರ ಪಾಲಿಕೆಯ ಎಲ್ಲಾ ಅಧಿಕಾರಿ/ ನೌಕರರು ಎಲ್ಲಾ ಕೆಲಸ ಕಾರ್ಯಗಳನ್ನು ಸ್ಥಗಿತ ಮಾಡಿ ಸಾಮೂಹಿಕ ರಜೆ ಹಾಕಿ ನ್ಯಾಯಾಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೋರಾಟವು ಅನಿವಾರ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘಗಳ ಪರಿಷತ್ತಿನ ರಾಜ್ಯಾಧ್ಯಕ್ಷ ಎ. ಅಮೃತ್‌ರಾಜ್ ಅವರು ಹೇಳಿದ್ದಾರೆ.
ಮಹಾನಗರ ಪಾಲಿಕೆಗಳ ಪ್ರಮುಖ ಬೇಡಿಕೆಗಳು
* 7ನೇ ವೇತನ ಆಯೋಗದ ಸೌಲಭ್ಯವನ್ನು ರಾಜ್ಯ ಸರ್ಕಾರಿ ನೌಕರರಿಗೆ ವಿಸ್ತರಿಸಿರುವಂತೆ ಮಹಾನಗರ ಪಾಲಿಕೆ ಅಧಿಕಾರಿ ನೌಕರರಿಗೆ ಯಥಾವತ್ತಾಗಿ ಸರ್ಕಾರ ಆರ್ಥಿಕ ಇಲಾಖೆಯಿಂದಲೇ ಅನುಧಾನವನ್ನು ಬಿಡುಗಡೆಮಾಡಬೇಕು.
* ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ತಿದ್ದುಪಡಿ ಮಾಡಿ ಕರಡು ಅಧಿಸೂಚನೆಯನ್ನು ಪ್ರಕಟಿಸಲು ಮನವಿ.
* ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಜಾರಿ ಮಾಡಿರುವ ಕೆ.ಜಿ.ಐ.ಡಿ, ಜಿ.ಪಿ.ಎಸ್ ಸೌಲಭ್ಯವನ್ನು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ಅಧಿಕಾರಿ/ನೌಕರರಿಗೆ ಜಾರಿಗೊಳಿಸಲು ಮನವಿ.
* ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಜಾರಿಗೊಳಿಸಿರುವ ಆರೋಗ್ಯ ಸೌಲಭ್ಯದ ಜ್ಯೋತಿ ಆರೋಗ್ಯ ಸಂಜೀವಿನಿಯನ್ನು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ಅಧಿಕಾರಿ/ನೌಕರರಿಗೆ ಜಾರಿಗೊಳಿಸಿರುವ ಮನವಿ.
* ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ವರ್ಷ ಆಯೋಜಿಸುವ ಕ್ರೀಡೆಯನ್ನು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ಅಧಿಕಾರಿ/ನೌಕರರಿಗೆ ಆಯೋಜಿಸುವ ಮನವಿ.
* ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ಅಧಿಕಾರಿ/ನೌಕರರು ಸುಮಾರು ವರ್ಷಗಳಿಂದ ವಿವಿಧ ವೃಂದದ ಹುದ್ದೆಗಳನ್ನು ಮುಂಬಡ್ತಿ ಪಡೆಯಲು ವಂಚಿತರಾಗಿರುವುದರಿಂದ ಕೂಡಲೇ ವೃಂದವರು ಮುಂಬಡ್ತಿ ನೀಡಲು ಮನವಿ ಮಾಡಲಾಗಿದೆ.












Click it and Unblock the Notifications